ಮಲ್ಪೆ ಹಲ್ಲೆ ಪ್ರಕರಣ - ಬಂಧಿತ ಮೂವರಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು

 


ಮಲ್ಪೆ ಬಂದರಿನಲ್ಲಿ ಮೀನು ಕದ್ದ ಆರೋಪದಲ್ಲಿ ಮಹಿಳೆಯನ್ನು ಕಟ್ಟಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮೂವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ದ ಜಾಮೀನು ನೀಡಿದೆ.

ಹಲ್ಲೆ ಪ್ರಕರಣದಲ್ಲಿ ಬಂಧಿತರಾಗಿರುವ ಲಕ್ಷ್ಮೀ, ಶಿಲ್ಪಾ ಹಾಗೂ ಸುಂದರ್‌ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂರ್‌ ಚಂದನಗೌಡರ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು.

ನ್ಯಾಯಪೀಠ ಮೂವರು ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿತು.

ಮಲ್ಪೆ ಬಂದರಿನಲ್ಲಿ ಮಾರ್ಚ್‌ 19ರಂದು ಮೀನುಕದ್ದ ಆರೋಪದಲ್ಲಿ ವಿಜಯನಗರದ ಲಕ್ಷ್ಮೀಬಾಯಿ ಎಂಬವರನ್ನು ಕಟ್ಟಿಹಾಕಿ ಹಲ್ಲೆ ನಡೆಸಲಾಗಿತ್ತು. ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೆ ಪೊಲೀಸರು ಪ್ರಕರಣ ದಾಖಲಿಸಿದ ಹಲ್ಲೆ ನಡೆಸಿದ್ದ ಮೂವರನ್ನು ಅರೆಸ್ಟ್ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಮೀನುಗಾರಿಕಾ ಸಂಘಟನೆಗಳು ಪ್ರತಿಭಟನೆ ನಡೆಸಿ ಪೊಲೀಸರ ಕ್ರಮವನ್ನು ಖಂಡಿಸಿದ್ದವು. ಅಲ್ಲದೆ ಸಂತ್ರಸ್ಥೆ ಕೂಡ ಪ್ರಕರಣ ವಾಪಾಸ್ ಪಡೆಯುವುದಾಗಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದರು.


ಜನಸಾಮಾನ್ಯರಿಗೆ ಬಿಗ್ ಶಾಕ್: ನಂದಿನಿ ಹಾಲಿನ ದರ ಲೀಟರ್‌ಗೆ 4ರೂ ಏರಿಕೆ

 


ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿಹೋಗಿರುವ ಗ್ರಾಹಕರಿಗೆ ಸರ್ಕಾರ ಇಂದು ಮತ್ತೆ ಬಿಗ್ ಶಾಕ್ ನೀಡಿದೆ. ನಂದಿನಿ ಪ್ಯಾಕೆಟ್ ಹಾಲಿನ ದರ ಪ್ರತಿಲೀಟರ್ ಗೆ 4 ರೂಪಾಯಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ತೀರ್ಮಾನಿಸಿದೆ.

ನಂದಿನಿ ಹಾಲಿನ ದರ ಪ್ರತಿ ಲೀಟರ್ ಗೆ 4 ರೂಪಾಯಿ ಹೆಚ್ಚಿಸಿ ರಾಜ್ಯ ಸಚಿವ ಸಂಪುಟ ಇಂದು ಅನುಮೋದನೆ ನೀಡಿದೆ. ನಂದಿನಿ ಹಾಲಿನ ದರ ಹೆಚ್ಚಿಸಿ ಇನ್ನೂ ವರ್ಷವಾಗಿಲ್ಲ. ಆಗಲೇ ದರ ಏರಿಕೆಗೆ ಪ್ರಸ್ತಾಪ ಬಂದಿತ್ತು. ಕೆಎಂಎಫ್ ಅಧಿಕಾರಿಗಳ ಜೊತೆ ಮೂರು ದಿನಗಳ ಹಿಂದೆ ಸಭೆ ನಡೆಸಿದ ಸಿಎಂ ಸಿದ್ದರಾಮಯ್ಯ ಹಾಲಿ ದರ ಹೆಚ್ಚಳಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. 

ಉಡುಪಿ: ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಅರೆಸ್ಟ್...!!

 


ಉಡುಪಿ: ನಗರದ ಕೋರ್ಟ್ ಆವರಣದಲ್ಲಿರುವ ತನ್ನ ಕಚೇರಿಯಲ್ಲೇ ಲಂಚ ಸ್ವೀಕರಿಸುತ್ತಿದ್ದ ಆರೋಪದಲ್ಲಿ ಸಹಾಯಕ ಸರಕಾರಿ ಅಭಿಯೋಜಕ ಗಣಪತಿ ವಿ. ನಾಯ್ಕನನ್ನು ಉಡುಪಿ ಲೋಕಾಯುಕ್ತ ಪೊಲೀಸರು ಇಂದು ಬುಧವಾರ ಬಂಧಿಸಿದ್ದಾರೆ.

ಮರಳು ಸಾಗಾಟ ವಾಹನದ ಬಿಡುಗಡೆ ಸಂಬಂಧ 2 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ, ಗಣಪತಿ ನಾಯ್ಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಲೋಕಾಯುಕ್ತ ಮಂಗಳೂರು ಪ್ರಭಾರ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ ಉಡುಪಿ ಪ್ರಭಾರ ಡಿವೈಎಸ್.ಪಿ. ಮಂಜುನಾಥ್, ಪೊಲೀಸ್ ನಿರೀಕ್ಷಕ ರಾಜೇಂದ್ರ ನಾಯಕ್ ಎಂ.ಎನ್., ಎಎಸ್ಐ ನಾಗೇಶ್ ಉಡುಪ, ಸಿಬ್ಬಂದಿಗಳಾದ ನಾಗರಾಜ್, ಸತೀಶ್ ಹಂದಾಡಿ, ರೋಹಿತ್, ಮಲ್ಲಿಕಾ, ಪುಷ್ಪಾವತಿ, ರವೀಂದ್ರ, ರಮೇಶ್, ಅಬ್ದುಲ್ ಜಲಾಲ್, ಪ್ರಸನ್ನ, ರಾಘವೇಂದ್ರ ಹೊಸಕೋಟೆ, ಸುಧೀರ್, ಸತೀಶ್ ಆಚಾರ್ಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಬಿಜೆಪಿಯಿಂದ 6 ವರ್ಷ ಶಾಸಕ ಯತ್ನಾಳ್ ಉಚ್ಛಾಟನೆ

 


ವಿಜಯಪುರ ಶಾಸಕ, ಹಿಂದು ಹುಲಿ ಎಂದೇ ಖ್ಯಾತಿ ಪಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ. 

ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.

ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನಾಲಿಗೆ ಹರಿಬಿಟ್ಟು ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಜೊತೆಗೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರು. ಹೀಗಾಗಿ, ಬಿಜೆಪಿ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.

ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಯತ್ನಾಳ್ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್ ನ ಉತ್ತರ ತೃಪ್ತಿದಾಯಕವಾಗಿರಲಿಲ್ಲ ಎಂದು ಶಾಸಕ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ. 

ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು.

ಉಚ್ಛಾಟನೆ ಆದೇಶದಲ್ಲಿ ಏನಿದೆ?......

ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




ಉಡುಪಿ: ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷ ರೂ. ವಂಚನೆ

ಉಡುಪಿ, ಮಾರ್ಚ್ 21: ವಿದೇಶದಲ್ಲಿ ಉದ್ಯೋಗದ ಆಮಿಷವೊಡ್ಡಿ ವ್ಯಕ್ತಿಯೊಬ್ಬರಿಗೆ 2.32 ಲಕ್ಷ ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಈ ಸಂಬಂಧ ಉಮೇಶ್ (41) ಎಂಬುವವರು ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ದೂರಿನ ಪ್ರಕಾರ, ಉಮೇಶ್ ಅವರು ಉದ್ಯೋಗಕ್ಕಾಗಿ ತಮ್ಮ ಸ್ನೇಹಿತನನ್ನು ಸಂಪರ್ಕಿಸಿದಾಗ, ಆತ ವಾಟ್ಸಾಪ್ ಮೂಲಕ ಕೆಲವು ಉದ್ಯೋಗಾವಕಾಶಗಳ ಪಟ್ಟಿಯನ್ನು ಕಳುಹಿಸಿದ್ದ. ಅದರಲ್ಲಿ ನೀಡಲಾಗಿದ್ದ ಮೊಬೈಲ್ ಸಂಖ್ಯೆಗೆ ಉಮೇಶ್ ಕರೆ ಮಾಡಿದಾಗ, ಅಪರಿಚಿತ ವ್ಯಕ್ತಿಯೊಬ್ಬ ವಿದೇಶದಲ್ಲಿ ಉತ್ತಮ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಆತನ ಮಾತನ್ನು ನಂಬಿದ ಉಮೇಶ್, ಫೆಬ್ರವರಿ 18 ರಿಂದ ಮಾರ್ಚ್ 20ರ ವರೆಗೆ ವಿವಿಧ ಹಂತಗಳಲ್ಲಿ ಒಟ್ಟು 2,32,060 ರೂ.ಗಳನ್ನು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ.

ಮಾರ್ಚ್ 20ರಂದು ವಿದೇಶಕ್ಕೆ ತೆರಳಲು ಮುಂಬೈಗೆ ಹೋದಾಗ, ಉಮೇಶ್ ಅವರು ಸಂಪರ್ಕಿಸಿದ ಮೊಬೈಲ್ ಸಂಖ್ಯೆ ಸ್ವಿಚ್ ಆಫ್ ಆಗಿತ್ತು. ಇದರಿಂದ ತಾವು ವಂಚನೆಗೊಳಗಾದುದನ್ನು ಅರಿತ ಅವರು, ತಕ್ಷಣವೇ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯ ಸಂಪೂರ್ಣ ಕಡೆಗಣನೆ; ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಕರೆ ನೀಡಿದ ಜಿಲ್ಲಾ ಬಿಜೆಪಿ

ಉಡುಪಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಉಡುಪಿ ಜಿಲ್ಲೆಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಆರೋಪಿಸಿ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿದೆ. ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಯಶಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಮಾರ್ಚ್ 31 ರಂದು ಸಂಜೆ 4 ಗಂಟೆಗೆ ಈ ಪ್ರತಿಭಟನೆ ನಡೆಯಲಿದೆ.

ಜಿಲ್ಲಾ ಬಿಜೆಪಿ ಕಚೇರಿಯಿಂದ ಕಲ್ಸಂಕ ಪಾರ್ಕಿಂಗ್ ಏರಿಯಾವರೆಗೆ ಪಾದಯಾತ್ರೆ ನಡೆಯಲಿದೆ. ರಾಜ್ಯ ಸರ್ಕಾರದ ಮಲತಾಯಿ ಧೋರಣೆಯನ್ನು ಖಂಡಿಸಿ ಹಮ್ಮಿಕೊಂಡಿರುವ ಈ ಪ್ರತಿಭಟನೆಯಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ. ರಾಜ್ಯ ಸರ್ಕಾರಕ್ಕೆ ತಮ್ಮ ಶಕ್ತಿಯನ್ನು ತೋರಿಸಿಕೊಡಲು ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.


ಉಡುಪಿ: ಗರುಡ ಗ್ಯಾಂಗಿನ ಇಸಾಕ್ 9 ದಿನ ಪೊಲೀಸ್ ಕಸ್ಟಡಿಗೆ


ಮಣಿಪಾಲ: ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಗುಂಡೇಟಿಗೆ ಒಳಗಾಗಿದ್ದ ಗರುಡ ಗ್ಯಾಂಗಿನ ಸದಸ್ಯ ಇಸಾಕ್‌ನನ್ನು ಮಣಿಪಾಲ ಪೊಲೀಸರು ಸೋಮವಾರ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆತನನ್ನು ನ್ಯಾಯಾಲಯ 9 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದೆ.

ಬೆಂಗಳೂರಿನ ನೆಲಮಂಗಲದ ಪೋಲಿಸರಿಂದ ಮಣಿಪಾಲದಲ್ಲಿ ತಪ್ಪಿಸಿ ಕೊಳ್ಳುವ ವೇಳೆ ಸಾರ್ವಜನಿಕರ ಕಾರು, ಬೈಕಿಗೆ ಗುದ್ದಿ ಪರಾರಿಯಾಗಿದ್ದ ಇಸಾಕ್‌ನನ್ನು ಮಣಿಪಾಲ ಪೊಲೀಸರು ಮಾ.12ರಂದು ಹಾಸನದಲ್ಲಿ ಬಂಧಿಸಿದ್ದರು. ಅಲ್ಲಿಂದ ಆತನನ್ನು ಕರೆ ತರುವಾಗ ದಾರಿ ಮಧ್ಯೆ ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರಿಗೆ ಹಲ್ಲೆ ನಡೆಸಿ, ಪರಾರಿಯಾಗಲು ಯತ್ನಿಸಿದ್ದನು. 

ಈ ವೇಳೆ ಪೊಲೀಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು. ಬಳಿಕ ಆತನನ್ನು ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿಂದ ಆತನನ್ನು ಶಸ್ತ್ರಚಿಕಿತ್ಸೆಗಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಇದೀಗ ಚೇತರಿಕೆ ಕಂಡಿರುವ ಇಸಾಕ್‌ನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೆಚ್ಚಿನ ತನಿಖೆಗಾಗಿ ಪೊಲೀಸ್ ಕಸ್ಟಡಿಗೆ ಒಪ್ಪಿಸುವಂತೆ ಮನವಿ ಮಾಡಿದರು. ಅದರಂತೆ ನ್ಯಾಯಾಲಯವು ಆರೋಪಿಯನ್ನು ಎ.1ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು. 

ಇಸಾಕ್‌ನನ್ನು ಕಸ್ಟಡಿಗೆ ಪಡೆದುಕೊಂಡಿರುವ ಮಣಿಪಾಲ ಪೊಲೀಸರು, ಅಪಹರಣ, ಮಾದಕ ದ್ರವ್ಯ ಸೇರಿದಂತೆ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಲಿದ್ದಾರೆ ಎಂದು ತಿಳಿದುಬಂದಿದೆ.

ಮಲ್ಪೆ ಪ್ರಕರಣ : ಜಾತಿ ನಿಂದನೆ ಕೇಸ್ ವಾಪಾಸು ಪಡೆಯಲು ಸಂತ್ರಸ್ತೆ ಯಿಂದಲೇ ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರಿಗೆ ಮನವಿ...!!


ಉಡುಪಿ: ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಡೆದ ಘಟನೆಯ ಮೇಲೆ ದಾಖಲಿಸಿದ ಪ್ರಕರಣಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಸಂತ್ರಸ್ತೆ ಲಕ್ಕವ್ವ ಬಾಯಿ ನೇತೃತ್ವದಲ್ಲಿ ಸಮುದಾಯದವರು ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ಅವರಿಗೆ ಮಾ.24 ರ ಸೋಮವಾರ ಮನವಿ ಸಲ್ಲಿಸಿದ್ದಾರೆ ‌

ಹಲವು ವರ್ಷಗಳಿಂದ ವಿವಿಧ ಜಿಲ್ಲೆಗಳಿಂದ ಉದ್ಯೋಗ ಅರಸಿಕೊಂಡು ಉಡುಪಿಗೆ ಬಂದು ಮಲ್ಪೆ ಮೀನುಗಾರರ ಸಂಘದ ಸಹಕಾರದಿಂದ ಮಲ್ಪೆ ಬಂದರಿನಲ್ಲಿ ಕೆಲಸ ಮಾಡಿಕೊಂಡಿದ್ದೇವೆ. ಇತ್ತೀಚೆಗೆ ಆಕಸ್ಮಿಕವಾಗಿ ನಡೆದ ಘಟನೆಯ ಅನಂತರ ನಮ್ಮ ಸಮುದಾಯದ ಪ್ರಮುಖರು ಹಾಗೂ ಮಲ್ಪೆ ಮೀನುಗಾರರ ಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ಈ ಸಮಸ್ಯೆಯನ್ನು ಮಲ್ಪೆ ಪೊಲೀಸ್ ಠಾಣೆಯಲ್ಲಿ ಸೌಹಾರ್ದಯುತವಾಗಿ ಇತ್ಯರ್ಥ ಮಾಡಿಕೊಳ್ಳಲಾಗಿದೆ. ಆದರೂ ಮುಗ್ದ ಮೀನುಗಾರರ ಮೇಲೆ ಕೇಸುಗಳನ್ನು ಹಾಕಿ ಬಂಧಿಸಿರುವುದು ಸರಿಯಲ್ಲ. ಮೀನುಗಾರರ ಮೇಲಿನ ಪ್ರಕರಣಗಳನ್ನು ಹಿಂಪಡೆದು ಸಾವಿರಾರು ಮಂದಿ ಉದ್ಯೋಗ ಅರಸಿ ಬಂದ ನಮ್ಮಂತಹ ಬಡ ಕಾರ್ಮಿಕರಿಗೆ ಸೌಹಾರ್ದಯುತ ರೀತಿಯಲ್ಲಿ ಕೆಲಸ ಮಾಡಿ ಉತ್ತಮ ಜೀವನ ನಡೆಸಲು ಅವಕಾಶ ನೀಡುವಂತೆ ಮನವಿಯಲ್ಲಿ ತಿಳಿಸಿದ್ದಾರೆ.

ನಂತರ ಸಂತ್ರಸ್ತೆ ಪತ್ರಕರ್ತರ ಜೊತೆಗೆ ಮಾತನಾಡಿ ಕೂಡ ಮನವಿ ಮಾಡಿಕೊಂಡರು.

ಮನವಿಯ ಪ್ರತಿಯನ್ನು ಶಾಸಕ ಯಶ್‌ಪಾಲ್ ಸುವರ್ಣ ಅವರಿಗೆ ಈ ವೇಳೆ ನೀಡಲಾಯಿತು. ಪ್ರಮುಖರಾದ ಮಂಜುನಾಥ ನಾಯ್ಕ, ಮಂಜುನಾಥ ಚೌಹಾನ್ ಸಹಿತ ಸಮುದಾಯದ ಹಲವಾರು ಮಂದಿ ಉಪಸ್ಥಿತರಿದ್ದರು.


ಉಡುಪಿ: ಅಂಬಾಗಿಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿ: ಚಾಲಕ ಸಹಿತ ಆರು ಮಂದಿಗೆ ಗಾಯ

 


ಉಡುಪಿ : ಗುಜರಿ ಸಾಮಾನುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಬೈಕಿಗೆ ಢಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಚಾಲಕ ಸಹಿತ ಒಟ್ಟು ಆರು ಮಂದಿ ಗಾಯಗೊಂಡ ಘಟನೆ ಅಂಬಾಗಿಲು ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ರವಿವಾರ ಮಧ್ಯಾಹ್ನ ವೇಳೆ ನಡೆದಿದೆ.

ಗುಜರಿ ಸಾಮಾನುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಯು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಪಲ್ಟಿಯಾಯಿತು.

ಪರಿಣಾಮ ಅದರಲ್ಲಿದ್ದ ಕಾರ್ಮಿಕರು ಸೇರಿ ಒಟ್ಟು ಆರು ಮಂದಿ ಗಾಯಗೊಂಡರು. ಕೂಡಲೇ ಮಾಹಿತಿ ಪಡೆದ ಸ್ಥಳಕ್ಕೆ ಆಗಮಿಸಿದ ಸಮಾಜ ಸೇವಕ ವಿಶು ಶೆಟ್ಟಿ ಗಾಯಗೊಂಡ ಲಾರಿ ಚಾಲಕ, ನಾಲ್ಕು ಮಂದಿ ಕಾರ್ಮಿಕರು ಹಾಗೂ ಬೈಕ್ ಸವಾರನನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. 

ಈ ದುರ್ಘಟನೆ ಸಂಭವಿಸುವ ಮುಂಚೆ ಅದೇ ಸ್ಥಳದಲ್ಲಿ ಬೈಕ್ ಸವಾರನೊಬ್ಬ ತನ್ನ ಬೈಕ್ ನಿಲ್ಲಿಸಿ ಪಕ್ಕದಲ್ಲಿ ನಿಂತಿದ್ದು, ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾನೆ. ಆದರೆ ಈತನ ಬೈಕ್ ಮಾತ್ರ ಲಾರಿಯ ಅಡಿಗೆ ಬಿದ್ದು ನಜ್ಜುಗುಜ್ಜಾಗಿದೆ. 

ಈ ಬಗ್ಗೆ ಉಡುಪಿ ಸಂಚಾರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.



ಮಲ್ಪೆಯ ಮೀನುಗಾರರ ಸಮಸ್ಯೆಯನ್ನು ಸಾಮರಸ್ಯ ದಿಂದ ಬಗೆಹರಿಸಿ : ಸಿಎಂಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಮನವಿ

 


ಮಲ್ಪೆಯ ಮೀನುಗಾರರ ಸಮಸ್ಯೆಯನ್ನು ಸಾಮರಸ್ಯ ದಿಂದ ಬಗೆಹರಿಸಿ ಎಲ್ಲಾ ಸಮುದಾಯದವರೂ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಮಾಡಿದ್ದಾರೆ.

ಹಲವಾರು ವರ್ಷಗಳಿಂದ ಒಟ್ಟಾಗಿ ಬದುಕುತ್ತಿದ್ದ ಮಲ್ಪೆಯ ಮೀನುಗಾರರು ಮತ್ತು ರಾಜ್ಯದ ಇತರ ಭಾಗದ ದಿನ ಕೆಲಸಗಾರ ಮಧ್ಯೆ ನೋವಿನ ಘಟನೆ ಯೊಂದು ನಡೆದು ಹೋಗಿದೆ.

ಪ್ರಕರಣದ ಬಗ್ಗೆ ನೋವು ವ್ಯಕ್ತ ಪಡಿಸಿ, ಘಟನೆಯನ್ನು ಒಟ್ಟಾಗಿ ಚರ್ಚಿಸಿ ಪರಿಹಾರ ಮಾಡಿಕೊಂಡಿದ್ದಾರೆ. ಮುಂದೆಂದೂ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸುವ ಭಾವನೆ ವ್ಯಕ್ತಪಡಿಸಿದ್ದಾರೆ. 

ಇಂತಹ ಸಮಯದಲ್ಲಿ ಒಂದು ಅಹಿತಕರ ಘಟನೆಯನ್ನು ಇತ್ತಂಡಗಳು ಮರೆತು ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಮುಂದಾದಾಗ ವಿನಾಃಕಾರಣ ಕಾನೂನಿನ ಹೆಸರಿನಲ್ಲಿ ಮೀನುಗಾರ ಸಮುದಾಯಕ್ಕೆ ಆತಂಕದ ಪರಿಸ್ಥಿತಿ ಉಂಟು ಮಾಡುವ ಬದಲು, ಈಗಾಗಲೇ ಬಂಧಿತ ಮಹಿಳೆಯರ ಮೇಲಿರುವ ಪ್ರಕರಣ ಹಿಂಪಡೆದು, ಮಲ್ಪೆಯಲ್ಲಿ ಶಾಂತಿ ನೆಲೆಸುವಂತಾಗಲು ಉಡುಪಿ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿಗೆ ಆದೇಶಿಸಬೇಕೆಂದು ಸಂಸದ ಕೋಟ ಆಗ್ರಹಿಸಿದ್ದಾರೆ.



ಕಾಂಗ್ರೆಸ್ ಸರ್ಕಾರದ ಒತ್ತಡಕ್ಕೆ ಮಣಿದು ಪ್ರಮೋದ್ ಮಧ್ವರಾಜ್ ಮೇಲೆ ಎಫ್ ಐ ಆರ್ : ಶಾಸಕ ಯಶ್ಪಾಲ್ ಸುವರ್ಣ ಆಕ್ರೋಶ


ಇಂದು ಮಲ್ಪೆಯಲ್ಲಿ ಮಲ್ಪೆ ಮೀನುಗಾರ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಷಣ ಮಾಡಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮೇಲೆ ಪೊಲೀಸ್ ಇಲಾಖೆ ಕಾಂಗ್ರೆಸ್ ಸರಕಾರದ ಒತ್ತಡಕ್ಕೆ ಮಣಿದು ಎಫ್ ಐ ಆರ್ ದಾಖಲಿಸಿದೆ ಎಂದು ಉಡುಪಿ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಹಿಳಾ ಮೀನುಗಾರರ ಮೇಲೆ ದಲಿತ ದೌರ್ಜನ್ಯ ಕಾಯಿದೆಯಡಿ ಕಾಂಗ್ರೆಸ್ ಸರಕಾರದ ನಿರ್ದೇಶನದಂತೆ ಕೇಸು ದಾಖಲಿಸಿದ ಪೋಲೀಸ್ ಇಲಾಖೆಯ ಲೋಪವನ್ನು ಪ್ರಶ್ನಿಸಿದ ಮಾಜಿ ಸಚಿವರ ಮೇಲೆ ಸ್ವಯಂಪ್ರೇರಿತ ಕೇಸು ದಾಖಲಿಸುವ ಮೂಲಕ ಮೀನುಗಾರರ ಪರ ಧ್ವನಿಯನ್ನು ಹತ್ತಿಕ್ಕಲು ಸರ್ಕಾರ ಯತ್ನ ಮಾಡುತ್ತಿದೆ.

ಕರಾವಳಿ ಜಿಲ್ಲೆಯ ಮೀನುಗಾರರ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ಕೈಗೊಂಬೆಯಾಗಿ ಪೊಲೀಸ್ ಇಲಾಖೆ ಕಾರ್ಯ ನಿರ್ವಹಿಸುತ್ತಿರುವುದು ತೀರ ಖಂಡನಾರ್ಹ, ಪದೇ ಪದೇ ಮೀನುಗಾರರ ತಾಳ್ಮೆ ಪರೀಕ್ಷಗೆ ಮುಂದಾಗು ತ್ತಿದ್ದು ಜಿಲ್ಲೆಯ ಪ್ರಜ್ಞಾವಂತ ಜನತೆ ಈ ಬಗ್ಗೆ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

© all rights reserved
made with by templateszoo