ಮಣಿಪಾಲ: ಬಸ್ ಟೈಮಿಂಗ್ ವಿಚಾರಕ್ಕೆ ಹಲ್ಲೆ ಪ್ರಕರಣ; ವೀಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ಬಂಧನ

 


ಉಡುಪಿ: ಮಣಿಪಾಲದ ಟೈಗರ್‌ ಸರ್ಕಲ್‌ ಬಳಿ ಇರುವ ಖಾಸಗಿ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸುವ ಟೈಮಿಂಗ್‌ ವಿಚಾರದಲ್ಲಿ ಎರಡು ಬಸ್ಸುಗಳ ಚಾಲಕ ಹಾಗೂ ನಿರ್ವಾಹಕನ ನಡುವೆ ಗಲಾಟೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು ಬಸ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಎ.2 ರಂದು ಸಂಜೆ ಈ ಘಟನೆ ನಡೆದಿತ್ತು. ಈ ಪ್ರಕರಣದಲ್ಲಿ ತನಿಖೆ ಕೈಗೊಂಡು ಆರೋಪಿಗಳಾದ ಮಂಜುನಾಥ ಬಸ್ಸಿನ ಚಾಲಕ ಮೊಹಮ್ಮದ್‌ ಆಲ್ಪಾಜ್‌(25), ಆನಂದ ಬಸ್ಸಿನ ನಿರ್ವಾಹಕ ವಿಜಯಕುಮಾರ್‌(25) ಎನ್ನುವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಈ ಬಸ್‌ಗಳನ್ನು ವಶ ಪಡಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಉಡುಪಿಗೆ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚನೆ


ಉಡುಪಿ: ನೂರಾರು ವಿದ್ಯಾರ್ಥಿಗಳನ್ನು ದಾಖಲಿಸುವುದಾಗಿ ಹೇಳಿ ಖಾಸಗಿ ಕಾಲೇಜಿಗೆ 19.5 ಲಕ್ಷ ವಂಚಿಸಿದ ವಿಚಿತ್ರ ಘಟನೆ ವರದಿಯಾಗಿದ್ದು ಈ ಕುರಿತು ಪ್ರಕರಣ ದಾಖಲಾಗಿದೆ.

ನೇತ್ರಜ್ಯೋತಿ ಚಾರಿಟೇಬಲ್‌ ಟ್ರಸ್ಟ್‌, ಪ್ರಸಾದ್‌ ನೇತ್ರಾಲಯ ದಲ್ಲಿ ನೇತ್ರಾಜ್ಯೋತಿ ಕಾಲೇಜ್‌ ಆಫ್‌ ಪ್ಯಾರಾ ಮೆಡಿಕಲ್‌ ಸೈನ್ಸಸ್‌ ಮತ್ತು ನೇತ್ರಜ್ಯೋತಿ ಇನ್ಸ್ಟಿಟ್ಯೂಟ್‌ ಆಫ್‌ ಅಲೈಡ್‌ ಹೆಲ್ತ್‌ ಸೈನ್ಸಸ್‌ ಎಂಬ ಎರಡು ಅರೆ ವೈದ್ಯಕೀಯ ಕಾಲೇಜುಗಳು 2016 ರಿಂದ ಕಾರ್ಯಚರಿಸುತ್ತಿದೆ. ಈ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ವಿದ್ಯಾರ್ಥಿಗಳ ದಾಖಲಾತಿಯ ಬಗ್ಗೆ ಸಾಕಷ್ಟು ಪ್ರಚಾರವನ್ನು ಬೇರೆ ಬೇರೆ ಮಾಧ್ಯಮಗಳಲ್ಲಿ ನೀಡಿರುತ್ತಾರೆ. ಈ ವಿಚಾರವನ್ನು ಅರಿತು ಆರೋಪಿ ಕೇಶಮ್ ವಿಕ್ರಮ್‌ ಸಿಂಗ್‌ ಮಣಿಪುರ ರಾಜ್ಯ ರವರು ಮ್ಯಾನೇಜರ್’ಗೆ ವಾಟ್ಸ್‌ ಆಪ್‌ ಕರೆ ಮಾಡಿ ತನ್ನ ರಾಜ್ಯದಲ್ಲಿ ಅರೆ ವೈದ್ಯಕೀಯ ಶಿಕ್ಷಣಕ್ಕೆ ಸಿದ್ದರಿರುವ ಸಾವಿರಾರು ವಿಧ್ಯಾರ್ಥಿ/ವಿದ್ಯಾರ್ಥಿನಿಯರಿದ್ದಾರೆ. ಈ ವರ್ಷ 268 ವಿದ್ಯಾರ್ಥಿಗಳನ್ನು ಕರೆ ತಂದು ಸಂಸ್ಧೆಗೆ ದಾಖಲು ಮಾಡುತ್ತೇನೆ. ವಿದ್ಯಾರ್ಥಿಗಳನ್ನು ಕರೆ ತರಲು ಟ್ರೈನ್‌ ಹಾಗೂ ವಿಮಾನಕ್ಕೆ ತಗಲುವ ಖರ್ಚುಗಳನ್ನು ಸಂಸ್ಧೆಯಿಂದಲೆ ನೀಡಬೇಕಾಗುತ್ತದೆ ಎಂದು ತಿಳಿಸಿದ್ದಾನೆ. ಅದರಂತೆ ದಿನಾಂಕ 19/09/2024 ರಿಂದ ದಿನಾಂಕ 24/01/2025 ರವರೆಗೆ ಹಂತ ಹಂತವಾಗಿ 19,56,138/- ರೂಪಾಯಿ ಹಣವನ್ನು ಪಡೆದು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡದೇ ಮೋಸ ಮತ್ತು ವಂಚನೆ ಮಾಡಿದ್ದಾನೆ.

ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2025 ಕಲಂ: 66 (ಸಿ) ಐ.ಟಿ. ಆಕ್ಟ್. , 318(4) BNS ರಂತೆ ಪ್ರಕರಣ ದಾಖಲಾಗಿರುತ್ತದೆ.

ಪ್ರಚೋದನಕಾರಿ ಭಾಷಣ : ಪ್ರಮೋದ್ ಮಧ್ವರಾಜ್ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ...!!

 


ಉಡುಪಿ : ಮಲ್ಪೆ ಬಂದರಿನಲ್ಲಿ ಮಹಿಳೆಯನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಮಾ.22ರಂದು ಮಲ್ಪೆಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಪ್ರಚೋದನಾತ್ಮಕ ಭಾಷಣ ಮಾಡಿದ ಆರೋಪದಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ದಾಖಲಾದ ಸ್ವಯಂ ಪ್ರೇರಿತ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕ ಸದಸ್ಯ ಪೀಠ, ಮುಂದಿನ ವಿಚಾರಣೆಯ ದಿನಾಂಕದವರೆಗೆ ಪ್ರಮೋದ್ ಮಧ್ವರಾಜ್ ವಿರುದ್ಧ ತನಿಖೆಯನ್ನು ತಡೆಹಿಡಿದು ಆದೇಶ ನೀಡಿದೆ. 

ಪ್ರಮೋದ್ ಮಧ್ವರಾಜ್ ಪರವಾಗಿ ನ್ಯಾಯವಾದಿ ದಳವಾಯಿ ವೆಂಕಟೇಶ್ ವಾದಿಸಿದ್ದರು.

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

 


ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ" ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 7 ರಂದು ನಾವು ಮೈಸೂರಿನಿಂದ 'ಜನ ಆಕ್ರೋಶ ಯಾತ್ರೆ' ನಡೆಸಲಿದ್ದೇವೆ… ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ನೀಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ಎಲ್ಲಾ ಹಿಂದೂ ಸಮುದಾಯಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ದರಾಮಯ್ಯ ಅವರು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. 


ಮಣಿಪಾಲ: ವ್ಯಕ್ತಿಯೊಬ್ಬರ ಜೊತೆ ಅಸಭ್ಯ ವರ್ತನೆ : ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಪ್ರಕರಣ ದಾಖಲು....!!


 ಉಡುಪಿ: ಸುಮಂತ್ ಎಂಬವರ ಜೊತೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ಎನ್ನುವವರು ಅಸಭ್ಯವಾಗಿ ವರ್ತಿಸಿದ್ದಾರೆ. 

ಈ ಘಟನೆ ಬಗ್ಗೆ ಉಡುಪಿ ಪೊಲೀಸ್ ಇಲಾಖೆ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.ಪೊಲೀಸ್ ಇಲಾಖೆ ಈ ಘಟನೆ ಬಗ್ಗೆ ವಿಚಾರಣೆ ನಡೆಸುತ್ತದೆ ಎಂದು ಮಾಹಿತಿ ತಿಳಿದು ಬಂದಿದೆ.

ಘಟನೆ ವಿವರ:

ದಿನಾಂಕ 27.03.2025ರಂದು ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ಎನ್ನುವವರು ಸಾರ್ವಜನಿಕವಾಗಿ ಸುಮಂತ್ ಎಂಬವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದು, ಈ ಬಗ್ಗೆ ಸುಮಂತ್ ರವರು ಪೊಲೀಸ್ ಇಲಾಖೆಯ ಗಮನಕ್ಕೆ ತಂದು ಯಾವುದೇ ದೂರು ಬೇಡ ಎಂದು ತಿಳಿಸಿದ್ದು, ಪೊಲೀಸ್ ಇಲಾಖೆಯು ಸ್ವಯಂ ಪ್ರೇರಿತವಾಗಿ ಪೊಲೀಸ್ ಕಾನ್ಸ್ಟೇಬಲ್ ಶರಣ ಬಸವ ವಿರುದ್ಧ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ. 92(o)&(r) ರಂತೆ ಪ್ರಕರಣ ದಾಖಲಿಸಿಕೊಂಡಿರುತ್ತದೆ ಹಾಗೂ ಈ ಬಗ್ಗೆ ಸೂಕ್ತ ಇಲಾಖಾ ವಿಚಾರಣೆ ನಡೆಸಲಾಗುವುದು.

ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಕಾರು ಡಿಕ್ಕಿ - ವಿಧ್ಯಾರ್ಥಿ ಸಾವು


 ಬ್ರಹ್ಮಾವರ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಸ್ಥಳದಲ್ಲೇ ಸಾವನಪ್ಪಿದ ಘಟನೆ ಬ್ರಹ್ಮಾವರದ ಮಹೇಶ್ ಆಸ್ಪತ್ರೆ ಜಂಕ್ಷನ್‌ನಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ವಂಶಿ ಜಿ ಶೆಟ್ಟಿ ಎಂದು ಗುರುತಿಸಲಾಗಿದೆ. ಬಾಲಕ ರಸ್ತೆ ದಾಟುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ತಕ್ಷಣ ಆತನನ್ನು ಮಹೇಶ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.


ಉಡುಪಿ ತಾಲೂಕು 15ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎಂ.ಎಲ್. ಸಾಮಗ ಆಯ್ಕೆ


ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಉಡುಪಿ ತಾಲೂಕು ಘಟಕದ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೇ 17 ಮತ್ತು 18ರಂದು ಎರಡು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ. ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಎಂ.ಎಲ್.ಸಾಮಗ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಶಿಕ್ಷಣ ತಜ್ಞ, ಯಕ್ಷಗಾನ ಕಲಾವಿದ, ವಾಗ್ಮಿ, ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಪ್ರೊ.ಮಲ್ಪೆ ಲಕ್ಷ್ಮೀನಾರಾಯಣ ಸಾಮಗರನ್ನು ಕೊಡವೂರು ಶಂಕನಾರಾಯಣ ದೇವಸ್ಥಾನದ ಸಭಾಂಗಣದಲ್ಲಿ ಕಸಾಪ ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಎಚ್. ಪಿ. ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ ಎಂದು ಕಸಾಪ ಉಡುಪಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು ಹಾಗು ರಂಜನಿ ವಸಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉಡುಪಿ: ನ್ಯಾಯಾಲಯದ ಆವರಣದಲ್ಲಿ ಗಲಾಟೆ | ಪ್ರಕರಣ ದಾಖಲು


ಉಡುಪಿ: ನ್ಯಾಯಾಲಯದ ಆವರಣದಲ್ಲಿ ಗಲಾಟೆ ಮಾಡಿದ ಕಾರಣಕ್ಕೆ ಹಲವರ ಮೇಲೆ ಪ್ರಕರಣ ದಾಖಲಾಗಿದೆ.

ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಶಿರಸ್ತೆದಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಮಾಯಾ ಆರ್. ಅವರು ಮಾ. 27ರಂದು ಸಂಜೆ ಕೋರ್ಟ್ ಆವರಣದಲ್ಲಿ ನೋಡಿದಾಗ ಸುಮಾರು 10ರಿಂದ 20 ಮಂದಿ ಗುಂಪು ಸೇರಿಕೊಂಡಿದ್ದರು. ಅವರನ್ನು ವಿಚಾರಿಸಿದಾಗ ಅವರು ಎಸಿಜೆ ಮತ್ತು ಜೆಎಂಎಸ್ಸಿ ನ್ಯಾಯಾಲಯದ ಪ್ರಕರಣದ ಡೆಲಿವರಿ ವಾರಂಟ್ ಕಾರ್ಯಗತಗೊಳಿಸುವ ಸಂಬಂಧ ಜಿಲ್ಲಾ ಮತ್ತು ಸತ್ರಾ ನ್ಯಾಯಾಲಯದ ನ್ಯಾಯಾಧೀಶರನ್ನು ಭೇಟಿ ಆಗಲು ಮುಂದಾಗಿರುವುದಾಗಿ ತಿಳಿಸಿದ್ದರು. ಇದಕ್ಕೆ ನ್ಯಾಯಾಧೀಶರ ಅನುಮತಿ ಪಡೆಯದೇ ಯಾರೂ ಭೇಟಿ ಆಗಲು ಸಾಧ್ಯವಿಲ್ಲ ಎಂದು ಮಾಯಾ ತಿಳಿಸಿದ್ದರು. ಇದಕ್ಕೆ ಅವರೆಲ್ಲ ಸೇರಿ ನ್ಯಾಯಾಲಯದ ಆವರಣದ ಮುಂದೆ ಗಲಾಟೆ-ಸೃಷ್ಟಿಸಿ ಗೊಂದಲ ಉಂಟು ಮಾಡಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ಅನಗತ್ಯವಾಗಿ ಅಡ್ಡಿಪಡಿಸಿ ಭಯದ ವಾತವಾರಣ ಸೃಷ್ಟಿಸಿದ್ದಾರೆ ಎಂದು ಮಾಯಾ ಅವರು ನಗರ ಪೊಲೀಸ್‌ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಉಡುಪಿ: ವೇಶ್ಯಾವಾಟಿಕೆ ಅಡ್ಡೆಗೆ ಪೊಲೀಸ್ ದಾಳಿ: ಸಂತ್ರಸ್ತೆಯ ರಕ್ಷಣೆ ; ಓರ್ವನ ಬಂಧನ


ಉಡುಪಿ: ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಶಾರದ ನಗರದಲ್ಲಿರುವ 'ಧರಿತ್ರಿ' ಎಂಬ ಮನೆಯಲ್ಲಿ ಅಕ್ರಮ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಅದರಂತೆ ಉಡುಪಿ ನಗರ ಠಾಣೆಯ ಪೊಲೀಸರು ಮಾರ್ಚ್ 28, 2025 ರಂದು ಮಧ್ಯಾಹ್ನ 2:45 ರ ಸುಮಾರಿಗೆ ದಾಳಿ ನಡೆಸಿದರು.

ದಾಳಿಯಲ್ಲಿ ಓರ್ವ ಸಂತ್ರಸ್ತೆಯನ್ನು ರಕ್ಷಿಸಲಾಯಿತು. ಸತೀಶ್ ಎಂಬ ವ್ಯಕ್ತಿ ಸಂತ್ರಸ್ತೆಗೆ ಕೆಲಸ ಕೊಡಿಸುವ ನೆಪದಲ್ಲಿ ಮೂಡಬಿದ್ರೆಯಿಂದ ಉಡುಪಿಯ ಶಾರದ ನಗರದಲ್ಲಿರುವ ಶ್ರೀಲತಾ ಎಂಬಾಕೆಯ ಮನೆಗೆ ಕಳುಹಿಸಿದ್ದ. ಅಲ್ಲಿ ಶ್ರೀಲತಾ ಆಕೆಯನ್ನು ವೇಶ್ಯಾವಾಟಿಕೆಗೆ ಒತ್ತಾಯಿಸಿ, ಒಂದು ಕೋಣೆಯಲ್ಲಿ ಕೂಡಿ ಹಾಕಿದ್ದಳು ಎಂದು ತಿಳಿದುಬಂದಿದೆ. ಆರೋಪಿಗಳು ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸಿ ಹಣ ಸಂಪಾದಿಸುವ ಉದ್ದೇಶದಿಂದ ಆಕೆಯನ್ನು ಒತ್ತಾಯ ಪೂರ್ವಕವಾಗಿ ಮನೆಯಲ್ಲಿ ಇರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (ಅಪರಾಧ ಸಂಖ್ಯೆ: 12/2025, ಭಾರತೀಯ ನ್ಯಾಯ ಸಂಹಿತೆಯ ಕಲಂ 143(2) BNS ಮತ್ತು ಅನೈತಿಕ ಸಾಗಾಣಿಕೆ (ತಡೆಗಟ್ಟುವಿಕೆ) ಕಾಯ್ದೆಯ ಸೆಕ್ಷನ್ 3, 4, 5, 6 ಮತ್ತು 7 ರ ಅಡಿಯಲ್ಲಿ) ತನಿಖೆ ನಡೆಯುತ್ತಿದೆ.

ಉಡುಪಿ: ಬೆಳಕು ಮೀನುಗಾರಿಕೆ, ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ

 


ಉಡುಪಿ: ಕೇಂದ್ರ ಸರಕಾರದ 2017ರ ನ.10 ಹಾಗೂ 2018ರ ಮಾ.7ರ ಆದೇಶದಂತೆ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಆದರೂ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆಯ ಪ್ರಕರಣಗಳು ವರದಿ ಯಾಗುತ್ತಿದ್ದು, ಈ ಸಂಬಂಧ ಉಚ್ಛ ನ್ಯಾಯಾಲಯದಲ್ಲಿಯೂ ಪ್ರಕರಣಗಳು ದಾಖಲಾಗಿದೆ.

ನ್ಯಾಯಾಲಯದಿಂದ ಈ ಸಂಬಂಧ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ದೇಶನವಿದೆ. ಆದ್ದರಿಂದ ನ್ಯಾಯಾಲಯ ಹಾಗೂ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳ ಮೀನುಗಾರಿಕಾ ಪರವಾನಿಗೆ ಹಾಗೂ ದೋಣಿ ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಅಂತಹ ದೋಣಿಗಳಿಗೆ ಡೀಸೆಲ್ ವಿತರಣೆಯನ್ನು ನಿಲ್ಲಿಸಲಾಗುವುದು. 

ಇಂತಹ ಪ್ರಕರಣಗಳು ಪುನರಾವರ್ತಿಸಿದಲ್ಲಿ ಶಾಶ್ವತವಾಗಿ ಅಂತಹ ದೋಣಿಗಳ ನೋಂದಣಿಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.


ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಒಟ್ಟು 77.03 ಎಕ್ರೆ ಖಾಸಗಿ ಜಮೀನ ಸ್ವಾಧೀನ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

 


ಉಡುಪಿ: ಜಿಲ್ಲೆಯಲ್ಲಿ ಕೈಗಾರಿಕಾ ಪ್ರದೇಶಗಳ ವಿಸ್ತೀರ್ಣಕ್ಕೆ ಗುರುತಿಸಲಾಗಿರುವ ಜಮೀನಿನ ಭೂ ಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಕೈಗೊಂಡು, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಅನುವು ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೈಗಾರಿಕಾ ಸ್ಪಂದನ ಸಮಿತಿ ಸಭೆ, ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆ ಹಾಗೂ ರಫ್ತು ಉತ್ತೇಜನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಜಿಲ್ಲೆಯಲ್ಲಿ ಈಗಾಗಲೇ ಹೊಸ ಕೈಗಾರಿಕಾ ಪ್ರದೇಶಗಳ ನಿರ್ಮಾಣಕ್ಕೆ ವಿವಿಧ ತಾಲೂಕುಗಳಲ್ಲಿ ಭೂಮಿಗಳನ್ನುನ್ನು ಗುರುತಿಸಲಾಗಿದೆ. ಕೆ.ಐ.ಎ.ಡಿ.ಬಿ ಯವರು ಈ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳ ಸ್ಥಾಪನೆಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ವಿದ್ಯುಚ್ಛಕ್ತಿ ಸೌಕರ್ಯ,ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮತ್ತಿತರ ಸೌಲಭ್ಯಗಳನ್ನು ಕಲ್ಪಿಸಿ,ಹೊಸ ಕೈಗಾರಿಕೆಗಳು ಸ್ಥಾಪನೆಗೊಂಡು ಜನರಿಗೆ ಉದ್ಯೋಗ ದೊರಕಿಸಿಸುವಂತಾಗಬೇಕೆಂದರು. ಹೊಸ ಕೈಗಾರಿಕಾ ಪ್ರದೇಶ ನಿರ್ಮಾಣಕ್ಕೆ ಈಗಾಗಲೇ ಹೆಬ್ರಿ ತಾಲೂಕಿನ ಕೆರೆಬೆಟ್ಟು ಗ್ರಾಮದಲ್ಲಿ 31.28 ಎಕ್ರೆ ಹಾಗೂ ಶಿವಪುರ ಗ್ರಾಮದಲ್ಲಿ 45.75 ಎಕ್ರೆ ಜಮೀನು ಸೇರಿದಂತೆ ಒಟ್ಟು 77.03 ಎಕ್ರೆ ಖಾಸಗಿ ಜಮೀನ ಭೂ ಮಾಲೀಕರಿಗೆ ಪೂರ್ಣ ಪರಿಹಾರಧನವನ್ನು ಪಾವತಿಸಿ, ನಿಯಮಾನುಸಾರ ಸ್ವಾಧೀನಪಡಿಸಿಕೊಳ್ಳಲಾಗಿದೆ.

ಆದರೆ, 36.56 ಎಕ್ರೆ ಸರ್ಕಾರಿ ಜಮೀನು ಮಂಜೂರಾತಿ ಪ್ರಕ್ರಿಯೆಯು ಬಾಕಿ ಇದೆ. ಈ ಭೂಮಿಯು ಇಕೋ ಸೆನ್ಸಿಟೀವ್ ಝೋನ್‌ನಲ್ಲಿ ಬರುವ ಬಗ್ಗೆ ಪರಿಶೀಲನೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಡಬೇಕು ಎಂದರು.

ಜಿಲ್ಲೆಯ ಶಿವಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅನುಮತಿ ಪಡೆಯದೇ ಹಾಗೂ ಜಾಗಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿ ನೀಡದೇ ಆರ್.ಎಂ.ಸಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಸಂಬಂಧ ಪಟ್ಟ ಮಾಲೀಕರುಗಳಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದ ಅವರು, ಡಾ.ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸಬೇಕು ಎಂದರು.

ಬೆಳಪು ಕೈಗಾರಿಕಾ ಪ್ರದೇಶದ ಸಂಪರ್ಕ ರಸ್ತೆ ವಿಸ್ತರಣೆಗೆ ಅಗತ್ಯವಿರುವ ಸ್ವಲ್ಪ ಮಟ್ಟದ ಭೂ ಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಿ, ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಸೂಚನೆ ನೀಡಿದರು. ಮಿಯ್ಯೆರು ಕೈಗಾರಿಕಾ ಪ್ರದೇಶಗಳಲ್ಲಿ ಪ್ರತಿಯೊಂದು ಕೈಗಾರಿಕಾ ಘಟಕಗಳೂ ಮಳೆ ನೀರು ಕೊಯ್ಲು ಅನ್ನು ಅಳವಡಿಸಿಕೊಳ್ಳಬೇಕು. ಇದರಿಂದಾಗಿ ಸ್ಥಳೀಯವಾಗಿ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತದೆ ಎಂದರು.

ಜಿಲ್ಲೆಯಲ್ಲಿ ಒಟ್ಟು 22 ರಫ್ತು ಆಧಾರಿತ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ವಿದೇಶಿ ರಫ್ತನ್ನು ಉತ್ತೇಜಿಸುವುದರೊಂದಿಗೆ ಇನ್ನಷ್ಟು ಹೆಚ್ಚಿಸಬೇಕೆಂದರು. ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ನಾಗರಾಜ್ ವಿ ನಾಯಕ್, ಕೆ.ಐ.ಎ.ಡಿ.ಬಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸಮೂರ್ತಿ, ಸಣ್ಣ ಕೈಗಾರಿಕಾ ಸಂಘದ ಜಿಲ್ಲಾ ಅಧ್ಯಕ್ಷ ಹರೀಶ್ ಕುಂದರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಉಪನಿರ್ದೇಶಕ ಸೀತಾರಾಮ ಶೆಟ್ಟಿ, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಅರುಣ್ ಬಿ, ಶಿವಮೊಗ್ಗ ಕೆ.ಎಸ್.ಎಸ್.ಐ.ಡಿ.ಸಿ ಅಸಿಸ್ಟೆಂಟ್ ಜನರಲ್ ಮ್ಯಾನೆಜರ್ ನಾಗಾಭರಣ ಕೆ.ಪಿ, ಜಿಲ್ಲೆಯ ಸಣ್ಣ ಕೈಗಾರಿಕಾ ಉದ್ದಿಮೆದಾರರು ಹಾಗೂ ಮತ್ತಿತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು

© all rights reserved
made with by templateszoo