ಕಲ್ಮಾಡಿ: ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು


ಉಡುಪಿ : ಕಲ್ಮಾಡಿ ಚರ್ಚ್‌ನ ಬಳಿ ಇರುವ ಹೊಸ ಕಟ್ಟಡದಲ್ಲಿ ಅಲ್ಯೂಮಿನಿಯಂನ ಕೆಲಸ ಮಾಡುವ ವೇಳೆ ಕಾರ್ಮಿಕನೊಬ್ಬ 2ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ.

ಉತ್ತರಪ್ರದೇಶದ ಮೋಹನ್‌ ರಾಮ್‌ (29) ಸಾವನ್ನಪ್ಪಿದ್ದು, ಅವರು ಕಳೆದ 20 ದಿನಗಳಿಂದ ಕಲ್ಮಾಡಿ ಬಳಿ ಇರುವ ಹೊಸ ಕಟ್ಟಡದಲ್ಲಿ ಅಲ್ಯುಮಿನಿಯಂನ ಬೀಡಿಂಗ್‌ ಗ್ಲಾಸ್‌ನ ಕೆಲಸ ಮಾಡುತ್ತಿದ್ದರು.

ಡಿ. 17ರಂದು 2ನೇ ಮಹಡಿಯಿಂದ ಕೆಳಗೆ ಬಿದ್ದಿದ್ದ ಅವರಿಗೆ ತಲೆ, ಎದೆಯ ಭಾಗ, ಮತ್ತು ಬೆನ್ನಿಗೆ ತೀವ್ರ ಸ್ವರೂಪದ ಗಾಯವಾಗಿತ್ತು.

ತತ್‌ಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಡಿ. 21ರಂದು ಮೃತಪಟ್ಟಿದ್ದಾರೆ. ಕಟ್ಟಡದ ಮಾಲಕರು ಮತ್ತು ಗುತ್ತಿಗೆದಾರರ ಕೆಲಸದ ಸಮಯದಲ್ಲಿ ಮುಂಜಾಗ್ರತೆ ವಹಿಸಿದೇ ನಿರ್ಲಕ್ಷ್ಯತನ ತೋರಿದ್ದಾರೆ ಎಂದು ದೂರಲಾಗಿದೆ. ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



ಕುಂದಾಪುರ: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ

 


ಕುಂದಾಪುರ: ಪ್ರವಾಸಿಗರನ್ನು ಕರೆದೊಯ್ದಿದ್ದ ಜೆಟ್‌ಸ್ಕೀ ಬೋಟ್‌ ಮಗುಚಿ ಬಿದ್ದು ಸಮುದ್ರ ಪಾಲಾಗಿದ್ದ ವ್ಯಕ್ತಿಯ ಶವ ಸೋಮವಾರ(ಡಿ.23) ಮುಂಜಾನೆ ಪತ್ತೆಯಾಗಿದೆ.

ಮೃತ ವ್ಯಕ್ತಿಯನ್ನು ರೋಹಿದಾಸ್‌ (41) ಎನ್ನಲಾಗಿದೆ.

ಶನಿವಾರ ಸಂಜೆ ತ್ರಾಸಿ ಬೀಚ್ ಸಮುದ್ರ ತೀರದಲ್ಲಿ ಬೋಟ್‌ ಮಗುಚಿ ರೋಹಿದಾಸ್ ಸಮುದ್ರಪಾಲಾಗಿದ್ದ ಈ ವೇಳೆ ಹುಡುಕಾಡಿದರೂ ರೋಹಿದಾಸ್ ದೇಹ ಪತ್ತೆಯಾಗಿರಲಿಲ್ಲ ಘಟನೆ ನಡೆದು 36 ಗಂಟೆಗಳ ಬಳಿಕ ಸಮೀಪದ ಹೊಸಪೇಟೆ ರುದ್ರ ಭೂಮಿಯ ಹಿಂಭಾಗದ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.

ಸ್ಥಳೀಯ ಮೀನುಗಾರರಾದ ಶಾಸ ಖಾರ್ವಿ ಹಾಗೂ ಮೋಹನ ಖಾರ್ವಿ ಇವರು ಇಂದು(ಸೋಮವಾರ) ಬೆಳಿಗ್ಗೆ 3 ಗಂಟೆ ಸುಮಾರಿಗೆ ಮೀನುಗಾರಿಕೆ ತೆರಳುತ್ತಿದ್ದ ವೇಳೆ ಶವ ತೇಲುತ್ತಿರುವುದನ್ನು ಗಮನಿಸಿ, ಸ್ಥಳೀಯ ಕರಾವಳಿ ಕಾವಲು ಪಡೆಯ ಕರಾವಳಿ ನಿಯಂತ್ರಣ ದಳದ ಸಿಬ್ಬಂದಿ ನಿಶಾಂತ್ ಖಾರ್ವಿ ಗೆ ಮಾಹಿತಿ ನೀಡಿದ್ದಾರೆ, ಬಳಿಕ ಮೂವರು ಸೇರಿ ಸಮುದ್ರದಲ್ಲಿ ತೇಲುತ್ತಿದ್ದ ಶವವನ್ನು ಮೇಲೆಕ್ಕೆ ತಂದಿದ್ದಾರೆ, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಗಂಗೊಳ್ಳಿ 24x 7 ಆಂಬ್ಯುಲೆನ್ಸ್ ಇದರ ಇಬ್ರಾಹಿಂ ಗಂಗೊಳ್ಳಿ, ಕೆಎನ್ ಡಿ ಸಿಬ್ಬಂಧಿ ನಿಶಾಂತ್ ಖಾರ್ವಿ, ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, ಮೃತ ರೊಹಿದಾಸ್ ಸಹೋದ್ಯೋಗಿಗಳು ಶವವನ್ನು ತೀರದಿಂದ ಸಾಗಿಸಲು ಸಹಕರಿಸಿದರು. ಗಂಗೊಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಸದ್ಯ ಶವವನ್ನು ಇಬ್ರಾಹಿಂ ಗಂಗೊಳ್ಳಿ ಅವರು ಕುಂದಾಪುರ ಸರಕಾರಿ ಆಸ್ಪತ್ರೆಯ ಶೀತಲೀಕರಣ ಘಟಕಕ್ಕೆ ಕೊಂಡೊಯ್ದಿದ್ದಾರೆ.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ನೇಮಿಸಿಕೊಂಡಲ್ಲಿ ಕಠಿಣ ಕಾನೂನು ಕ್ರಮ ಜಾರಿ : ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

 


ಉಡುಪಿ : ಮ್ಯಾನ್ ಹೋಲ್ ಗಳಿಗೆ ಇಳಿದು ಮಾನವ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪದ್ಧತಿಗೆ ದೇಶದಾದ್ಯಂತ ನಿರ್ಬಂದ ಹೇರಲಾಗಿದ್ದು, ಇದನ್ನು ಉಲ್ಲಂಘಿಸಿ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳನ್ನು ನೇಮಿಸಿಕೊಂಡಲ್ಲಿ ಸಂಬಂಧಪಟ್ಟ ಅಧಿಕಾರಿಗಳನ್ನು ನೇರ ಹೊಣೆಗಾರ ರನ್ನಾಗಿ ಮಾಡಿ ಅವರುಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾ ಕುಮಾರಿ ಹೇಳಿದರು.

ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಫಾಯಿ ಕರ್ಮಚಾರಿಗಳ ಜಿಲ್ಲಾ ಜಾಗೃತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ನಗರ ಹಾಗೂ ಗ್ರಾಮೀಣ ಪ್ರದೇಶದ ವ್ಯಾಪ್ತಿಯಲ್ಲಿ ಮ್ಯಾನುಯಲ್ ಸ್ಕಾವೆಂಜರ್ಸ್ ಹಾಗೂ ಅನೈರ್ಮಲ್ಯ ಶೌಚಾಲಯಗಳ ಕುರಿತು ಸಮೀಕ್ಷೆ ನಡೆಸಲಾಗಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ಪ್ರಕರಣಗಳು ಕಂಡುಬಂದಿರುವುದಿಲ್ಲ ಎಂದರು.

ಸಫಾಯಿ ಕರ್ಮಚಾರಿಗಳ ಶ್ರೇಯೋಭಿವೃದ್ಧಿಗೆ ಸರಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಬಗ್ಗೆ ಅವರುಗಳಿಗೆ ಮಾಹಿತಿ ತಲುಪಿಸುವುದರೊಂದಿಗೆ ಯೋಜನೆಯ ಫಲನುಭವಿಗಳನ್ನಾಗಿ ಮಾಡಿ ಅವರುಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಬೇಕು ಎಂದರು.

ಜಿಲ್ಲೆಯ ನಗರ ಅಥವಾ ಗ್ರಾಮೀಣ ಭಾಗದ ಯಾವುದೇ ಮನೆ, ಕಂಪೆನಿ, ಆಸ್ಪತ್ರೆ, ಅಪಾರ್ಟ್ಮೆಂಟ್, ಸೇರಿದಂತೆ ಯಾವುದೇ ಕಡೆಯಲ್ಲಿ ಮ್ಯಾನ್ ಹೋಲ್, ಸೆಪ್ಟಿಕ್ ಟ್ಯಾಂಕ್, ತೆರೆದ ಚರಂಡಿ, ಪಿಟ್ ಗುಂಡಿ ಕಟ್ಟಿಕೊಂಡಲ್ಲಿ ಅದನ್ನು ಸ್ವಚ್ಛಗೊಳಿಸಲು ಸಕ್ಕಿಂಗ್ ಯಂತ್ರಗಳನ್ನೇ ಬಳಸಬೇಕು. ಈ ಬಗ್ಗೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರೆಯಲಾದ ಸಹಾಯವಾಣಿಗಳನ್ನು ಸಂಪರ್ಕಿಸುವಂತೆ ಘನ ತ್ಯಾಜ್ಯ ವಿಲೇವಾರಿ ವಾಹನ ಹಾಗೂ ಧ್ವನಿ ವರ್ಧಕಗಳ ಮೂಲಕ ವ್ಯಾಪಕ ಪ್ರಚಾರ ಕೈಗೊಂಡು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.

ಪೌರ ಕಾರ್ಮಿಕರುಗಳು ದೈನಂದಿನ ಸ್ವಚ್ಛತಾ ಕೆಲಸಗಳನ್ನು ನಿರ್ವಹಿಸುವಾಗ ತಪ್ಪದೆ ಕಡ್ಡಾಯವಾಗಿ ಸುರಕ್ಷತಾ ಪರಿಕರಗಳನ್ನು ಧರಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು ಎಂದ ಅವರು, ಇದರ ಬಳಕೆಯ ಬಗ್ಗೆ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರುಗಳು ಹಾಗ ಅರೋಗ್ಯ ನಿರೀಕ್ಷಕರುಗಳು ಸ್ಥಳ ಪರಿಶೀಲನೆ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು, ಲೋಡರ್ಸ್, ಕ್ಲಿನರ್ಸ್ ಹಾಗೂ ಡ್ರೈವರ್ಸ್ ಗಳಿಗೆ ಪ್ರತಿ ಮಾಹೇ ವೇತನವನ್ನು ಸರಿಯಾದ ಸಮಯಕ್ಕೆ ಪಾವತಿ ಆಗುತ್ತಿರುವ ಬಗ್ಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬೇಕು ಎಂದರು.

ಪೌರ ಕಾರ್ಮಿಕರಗಳ ಆರೋಗ್ಯದ ಹಿತದೃಷ್ಟಿಯಿಂದ ಪೌರಾಡಳಿತ ನಿರ್ದೇಶನದಂತೆ ಪ್ರತಿ ಮೂರು ತಿಂಗಳಿಗೊಮ್ಮೆ ಅರೋಗ್ಯ ತಪಾಸಣೆ ಮತ್ತು ಮಾಸ್ಟರ್ ಹೆಲ್ತ್ ಚೆಕ್ ಅಪ್ ಮಾಡಿಸಬೇಕು. ಈ ಬಗ್ಗೆ ಪ್ರತಿ ತ್ರೈಮಾಸಿಕ ಸಭೆಗೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದ ಅವರು, ಪೌರಕಾರ್ಮಿಕರುಗಳಿಗೆ ಗುಣಮಟ್ಟದ ಪೌಷ್ಟಿಕ ಉಪಹಾರವನ್ನು ಸಹ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಗುರುತಿಸಲಾದ ಹಾಗೂ ಮೃತಪಟ್ಟ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳ ಕುಟುಂಬದ ಅವಲಂಬಿತರಿಗೆ ಗುರುತಿನ ಚೀಟಿ, ಒಂದು ಬಾರಿ ನಗದು ಸಹಾಯ, ಮನೆ, ನಿವೇಶನ, ಶಿಕ್ಷಣ, ವಿದ್ಯಾರ್ಥಿ ವೇತನ, ಉದ್ಯೋಗ ನೀಡುವುದರೊಂದಿಗೆ ಅವರುಗಳಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘಗಳ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆಗಳಲ್ಲಿ ಮಾನ್ಯುಯಲ್ ಸ್ಕ್ಯಾವೆಂಜರ್ಸ್ ಮತ್ತು ಪೌರ ಕಾರ್ಮಿಕರ ಮಕ್ಕಳಿಗೆ ಶೇ. 5 ರಷ್ಟು ಪ್ರವೇಶ ನೀಡಲಾಗುವುದು, 6 ರಿಂದ 10 ನೇ ತರಗತಿ ವರೆಗೆ ಉಚಿತ ಆಂಗ್ಲ ಮಾಧ್ಯಮ ಶಿಕ್ಷಣ, ಊಟ, ವಸತಿ ಸೇರಿದಂತೆ ಇತರೆ ಸೌಲಭ್ಯಗಳೊಂದಿಗೆ ಪ್ರವೇಶ ಪರೀಕ್ಷೆಯನ್ನು ಬರೆಯದೆ ನೇರವಾಗಿ ವಸತಿ ಶಾಲೆಗಳಲ್ಲಿ ದಾಖಲಾತಿ ಮಾಡಿಕೊಳ್ಳಲು ಅವಕಾಶವಿದ್ದು, ಈ ಕುರಿತು ಪೌರ ಕಾರ್ಮಿಕರು ಹಾಗೂ ಸ್ವಚ್ಛತಾ ಕಾರ್ಮಿಕರುಗಳಿಗೆ ಮಾಹಿತಿ ನೀಡಬೇಕು ಎಂದರು.

ಪ್ರಧಾನ ಮಂತ್ರಿ ಜ್ಯೋತಿ ಬಿಮಾ ಯೋಜನೆಯಡಿ ವಾರ್ಷಿಕ 450 ರೂ. ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ ವರ್ಷಕ್ಕೆ 20 ರೂ ಗಳನ್ನು ಪಾವತಿಸಿದ್ದಲ್ಲಿ, ಅಪಘಾತ ಅಥವಾ ಮರಣ ಹೊಂದಿದ ಪಕ್ಷದಲ್ಲಿ ಕುಟುಂಬದವರಿಗೆ 2 ಲಕ್ಷ ರೂ. ಪರಿಹಾರ ಮೊತ್ತ ದೊರಕಲಿದ್ದು, ಎಲ್ಲಾ ಅಧಿಕಾರಿಗಳು ತಮ್ಮ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗಳಿಗೆ ಕಡ್ಡಾಯವಾಗಿ ಈ ಯೋಜನೆ ಯನ್ನು ಮಾಡಿಸುವಂತೆ ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ನಾರಾಯಣ ಸ್ವಾಮಿ, ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಐ. ಪಿ. ಗಡಾದ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಮಟ್ಟದ ಅನುಷ್ಠಾನ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಮತ್ತಿತರರು ಉಪಸ್ಥಿತರಿದ್ದರು

ವಿಧಾನ ಪರಿಷತ್ ಶಾಸಕ ಶ್ರೀ ಐವನ್ ಡಿಸೋಜ ಇವರ ಶಾಸಕರ ಕಚೇರಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರಾರಂಭ


ಮಂಗಳೂರು ಮಹಾನಗರ ಪಾಲಿಕೆಯ ನೆಲಮಹಡಿಯಲ್ಲಿ ವಿಧಾನ ಪರಿಷತ್ತಿನ ಶಾಸಕರಾದ ಶ್ರೀ ಐವನ್ ಡಿ ಸೋಜಾ ಇವರ ಶಾಸಕರ ಕಛೇರಿಯ ಉದ್ಘಾಟನೆಯನ್ನು ಕಟೀಲ್ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ ಕೆ. ಅನಂತ ಪದ್ಮನಾಭ ಅಸ್ರಣ್ಣ, ಕುದ್ರೋಳಿ ನಡುಪಲ್ಲಿ ಮಸೀದಿ ಕತಿಬರಾದ ರಿಯಾಜ್ ಫೈಝಿ ಕಕ್ಕಿಂಜೆ, ಬಿಜೈ ಚರ್ಚ್ ನ ಪಾ. ಜಾನ್ಸನ್ ಸಿಕ್ವೇರಾ ಇವರ ಅಮೃತ ಹಸ್ತದಿಂದ ದೀಪ ಪ್ರಜ್ವಲ ಮಾಡುವುದರ ಮೂಲಕ ಉದ್ಘಾಟಿಸಲಾಯಿತು.  

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಕೆ. ಅನಂತ ಪದ್ಮನಾಭ ಆಸ್ರಣ್ಣ ರವರು ಐವನ್ ಡಿಸೋಜಾ ಇವರು ಜನಪರ ಕೆಲಸಗಳು ಮತ್ತು ಜನಪರ ಕಾಳಜಿ, ಯಾವುದೇ ಕೆಲಸ ಪ್ರಾರಂಭಿಸಿದರು ಗುರಿ ಮುಟ್ಟಿಸುವಂತ ಜವಾಬ್ದಾರಿ ಕೆಲಸ ಮಾಡುವಂತರು. ಎರಡನೇ ಭಾರಿ ವಿಧಾನ ಪರಿಷತ್ತಿನ ಶಾಸಕರಾಗಿ ಒಳ್ಳೆ ಭವಿಷ್ಯ ನಿರ್ಮಾಣವಾಗಲಿ ಮತ್ತು ಮೊದಲನೇ ಭಾರಿ ಶಾಸಕರಾಗಿ ಅವರು ಮಾಡಿದ ಕೆಲಸ, ಸೇವೆ ಅತ್ಯಂತ ಅದ್ಬುತವಾಗಿದ್ಧು ,ಅವರ ಸೇವೆಗೆ ಮತ್ತೊಮ್ಮೆ ವಿಧಾನ ಪರಿಷತ್ತಿನ ಶಾಸಕರಾಗುವಂತೆ ಆಯಿತು. ಮುಂದೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಲಿ ಅಂತ ನಾನು ಆಶಿಸುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳಿದರು, ಖತೀಬರು ಹಾಗೂ ಧರ್ಮ ಗುರುಗಳು ಮಾತನಾಡಿ ಸಾರ್ವಜನಿಕರಿಗೆ ಸದುಪಯೋಗವಾಲೆಂದು ಹಾರೈಸಿ, ಐವನ್ ರವರ ಮುಂದಿನ ಭವಿಷ್ಯ ಉಜ್ವಲವಾಗಲೆಂದು ಹಾರೈಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕರಾದ ಜೆ ಆರ್ ಲೋಬೋ, ಮಾಜಿ ಮೂಡ ಅಧ್ಯಕ್ಷರಾದ ಸುರೇಶ್ ಬಲ್ಲಾಳ್ ರವರು ಶುಭ ಹಾರೈಸಿದರು.ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಹರೀಶ್ ಕುಮಾರ್, ಎಲ್ಲಾ ನಗರ ಪಾಲಿಕೆಯ ಸದಸ್ಯರು, ಪಕ್ಷದ ಮುಖಂಡರು ಕಾರ್ಯಕರ್ತರು ಭೇಟಿ ನೀಡಿ ಶುಭ ಹಾರೈಸಿದರು.

ಕುಂದಾಪುರ: ಟೂರಿಸ್ಟ್ ಬೋಟ್ ಮಗುಚಿ ರೈಡರ್ ನಾಪತ್ತೆ: ಪ್ರವಾಸಿಗನ ರಕ್ಷಣೆ


 ಕುಂದಾಪುರ: ಪ್ರವಾಸಿಗನನ್ನು ಕರೆದೊಯ್ದಿದ್ದ ಜೆಟ್‌ಸ್ಕೀ ಬೋಟ್ ಮಗುಚಿದ ಪರಿಣಾಮ ಇಬ್ಬರು ಸಮುದ್ರಕ್ಕೆ ಬಿದ್ದು, ಜೆಟ್ ಸ್ಕೀ ರೈಡರ್ ನಾಪತ್ತೆಯಾದ ಘಟನೆ ಇಲ್ಲಿನ ತ್ರಾಸಿ ಕಡಲ ಕಿನಾರೆಯಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ರೈಡರ್ ರೋಹಿದಾಸ್ (45) ನಾಪತ್ತೆಯಾಗಿದ್ದು, ಪ್ರವಾಸಿಗನನ್ನು ರಕ್ಷಿಸಲಾಗಿದೆ. ತ್ರಾಸಿ ಕಡಲ ಕಿನಾರೆಯಲ್ಲಿ ಕಾರ್ಯಾಚರಿಸುತ್ತಿರುವ ಬೆಳುಗಾ ವಾಟರ್ ಸ್ಪೋರ್ಟ್ಸ್‌ನ ಜೆಟ್‌ಸ್ಕೀ ಬೋಟ್‌ನಲ್ಲಿ ಓರ್ವ ಪ್ರವಾಸಿಗರನ್ನು ಕೂರಿಸಿಕೊಂಡು ಸಮುದ್ರದಲ್ಲಿ ವಿಹಾರ ನಡೆಸಲಾಗುತ್ತಿತ್ತು. ಈ ವೇಳೆ ರೈಡರ್ ನಿಯಂತ್ರಣ ತಪ್ಪಿ ಜೆಟ್‌ಸ್ಕೀ ಮಗುಚಿ ಬಿದ್ದಿತ್ತು. ರೈಡ್‌ಗೂ ಮೊದಲು ಪ್ರವಾಸಿಗರಿಗೆ ಲೈಫ್ ಜಾಕೆಟ್ ಹಾಕಿ ಸುರಕ್ಷತಾ ಕ್ರಮ ವಹಿಸಿದ್ದರಿಂದ ಆತನನ್ನು ರಕ್ಷಿಸಿ ಕರೆತರಲಾಗಿದೆ. ರೈಡ್ ಮಾಡುತ್ತಿದ್ದ ರೋಹಿದಾಸ್ ನಾಪತ್ತೆಯಾಗಿದ್ದು, ಶೋಧ ಕಾರ್ಯ ನಡೆಸಲಾಗುತ್ತಿದೆ.

ಮುರ್ಡೇಶ್ವರ ನಿವಾಸಿಯಾದ ರೋಹಿದಾಸ್ ಕುಟುಂಬದೊಂದಿಗೆ ತ್ರಾಸಿಯಲ್ಲಿಯೇ ವಾಸಿಸುತ್ತಿದ್ದು, ಜೆಟ್ಸ್ಕೀ ಮತ್ತಿತರ ಬೋಟ್ ರೈಡ್ ಕಾಯಕ ಮಾಡಿಕೊಂಡಿದ್ದರು. ಗಂಗೊಳ್ಳಿ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಉಡುಪಿ: ಡಿ.24ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ

 


ಉಡುಪಿ: ದುರಸ್ಥಿ ಕಾರ್ಯದ ನಿಮಿತ್ತ ಮೆಸ್ಕಾಂ ವತಿಯಿಂದ ಹಿರಿಯಡ್ಕ ಸಬ್‌ಸ್ಟೇಶನ್‌ನಲ್ಲಿ ಡಿ.24ರಂದು ವಿದ್ಯುತ್ ಸರಬರಾಜನ್ನು ಸ್ಥಗಿತ ಗೊಳಿಸುವ ಹಿನ್ನಲೆಯಲ್ಲಿ ಅಂದು ಬೆಳಗ್ಗಿನಿಂದ ಸಂಜೆಯವರೆಗೆ ಉಡುಪಿ ನಗರಸಭಾ ವ್ಯಾಪ್ತಿಗೆ ಕುಡಿಯುವ ನೀರಿನ ಸರಬರಾಜು ವಿತರಣೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸು ವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಳ್ಳದು : ಕೋಟ ಶ್ರೀನಿವಾಸ್ ಪೂಜಾರಿ...!!

 


ಉಡುಪಿ: ಅಂಬಲಪಾಡಿ ರಾ.ಹೆ. ಕಾಮಗಾರಿಗೆ ಸಂಬಂಧಿಸಿದಂತೆ ಪರ ವಿರೋಧ ಅಭಿಪ್ರಾಯವಿದ್ದು, ನ್ಯಾಯಯುತ ತೀರ್ಮಾನ ಮಾಡಿ ಕಾಮಗಾರಿ ಮುಂದುವರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳುವುದಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಕಾಮಗಾರಿ ಕುರಿತು ಜನರ ಅಭಿಪ್ರಾಯ, ಅಧಿಕಾರಿಗಳಿಂದ ಮಾಹಿತಿಯನ್ನೂ ಈಗಾಗಲೇ ಸಂಗ್ರ ಹಿಸಲಾಗಿದೆ. 

ಮೇಲ್ಸೇತುವೆ ಕಾಮಗಾರಿಯಲ್ಲಿ ಕೆಲವು ಕಡೆ ಪಿಲ್ಲರ್‌ಗಳು ಬೇಕೆಂಬ ಬಗ್ಗೆ ಬೇಡಿಕೆ ಇದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ಆದರೆ ಯಾವುದೇ ಕಾರಣಕ್ಕೂ ಕಾಮಗಾರಿ ಸ್ಥಗಿತಗೊಳ್ಳದು ಎಂದು ಸ್ಪಷ್ಟಪಡಿಸಿದರು.

ಮಲ್ಪೆ: ರೆಸಾರ್ಟ್‌ನಲ್ಲಿ ಅಗ್ನಿ ಅವಘಡ; ತಪ್ಪಿದ ಭಾರೀ ಅನಾಹುತ..!

 


ಉಡುಪಿ: ಉಡುಪಿ ಜಿಲ್ಲೆಯ ಮಲ್ಪೆ ಬೀಚ್ ಬಳಿ ಇರುವ ಕುದ್ರು ನೆಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡಿದೆ ಈ ವೇಳೆ ರೆಸಾರ್ಟ್ ನಲ್ಲಿದ್ದ ಪ್ರವಾಸಿಗರು ಬೆಂಕಿ ಕಾಣುತ್ತಿದ್ದಂತೆ ತಕ್ಷಣ ಹೊರಗಡೆ ಓಡಿ ಬಂದಿದ್ದಾರೆ. ಕೂಡಲೇ ಸ್ಥಳೀಯರು ಅಲ್ಲಿದ್ದ ಪ್ರವಾಸಿಗರನ್ನು ರಕ್ಷಣೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿಯ ತಿಮ್ಮಣ್ಣ ಕುದ್ರು ದ್ವೀಪದಲ್ಲಿರುವ ಕುದ್ರು ನೆಕ್ಸ್ಟ್ ರೆಸಾರ್ಟ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ಈ ಸಂದರ್ಭದಲ್ಲಿ ಬಿದರಿನಿಂದ ನಿರ್ಮಿಸಿದ್ದ ಮಹಡಿ, ಅಲಂಕಾರಿಕ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.ಬೆಂಕಿ ಹತ್ತಿದ್ದನ್ನು ಕಂಡು ಸ್ಥಳೀಯರು ಪ್ರವಾಸಿಗರನ್ನು ರಕ್ಷಿಸಿದ್ದಾರೆ.

ರೆಸಾರ್ಟ್ ಪಕ್ಕದಲ್ಲಿಯೇ ನದಿಯಿದಿದ್ದರಿಂದ ಭಾರಿ ಅನಾಹುತ ಒಂದು ತಪ್ಪಿದೆ. ನದಿಯ ನೀರನ್ನು ಬಳಸಿ ಸ್ಥಳೀಯ ನಿವಾಸಿಗಳು ರೆಸಾರ್ಟ್ಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ನಂದಿಸಿದ್ದಾರೆ.ಈ ವೇಳೆ ಸ್ಥಳೀಯರು ರೆಸಾರ್ಟ್ ಅಲ್ಲಿ ಸುರಕ್ಷತಾ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದ್ದಾರೆ. 

ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಉಡುಪಿ: ಸಿಟಿ ರವಿ ಬಂಧನ ಖಂಡಿಸಿ ಜಿಲ್ಲಾ ಬಿಜೆಪಿ ಪ್ರತಿಭಟನೆ

 


ಉಡುಪಿ: ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರ ಬಂಧನ ಖಂಡಿಸಿ ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ‌ ಬಿಜೆಪಿ ಕಾರ್ಯಕರ್ತರು ಕಡಿಯಾಳಿಯ ಬಿಜೆಪಿ‌ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರಕಾರದ ಕ್ರಮದ ವಿರುದ್ಧ ಆಕ್ರೋಶ ಹೊರಹಾಕಿದರು.ಪೊಲೀಸರು ರಾಜ್ಯ ಕಾಂಗ್ರೆಸ್ ನಾಯಕರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ‌ ಬಂದ ಬಳಿಕ ಹರಾಜಕತೆ ಸೃಷ್ಟಿಯಾಗಿದೆ. ವಿಧಾನಸಭಾ ಕಲಾಪದಲ್ಲಿ ಚರ್ಚೆಗಳು ಸಹಜವಾಗಿ ನಡೆಯುತ್ತವೆ. ಕೆಲವೊಮ್ಮೆ ವಿಕೋಪಕ್ಕೆ ತಿರುಗುತ್ತೆ, ಕೆಲವೊಂದು ಬಾರಿ ಶಾಂತಿಯುತ ಚರ್ಚೆ ನಡೆಯುತ್ತೆ.

ಅಂತಹದ್ದೆ ಒಂದು ಘಟನೆ ನಿನ್ನೆ ನಡೆದಿದೆ. ಯಾವುದೇ ಸಂದರ್ಭದಲ್ಲಿ ಕೂಡ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಅವಮಾನಿಸುವ ಶಬ್ಧವನ್ನು ಸಿಟಿ ರವಿ ಅವರು ಬಳಕೆ ಮಾಡಿಲ್ಲ. ಸಿಟಿ ರವಿ ಅವರ ಬಂಧನ ದುರುದ್ಧೇಶಪೂರ್ವಕವಾಗಿದೆ ಎಂದು ಕಿಡಿಕಾರಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ನಾಯಕರಾದ ಕಿರಣ್ ಕುಮಾರ್ ಬೈಲೂರು, ಶ್ರೀನಿಧಿ ಹೆಗ್ಡೆ, ದಿನಕರ ಶೆಟ್ಟಿ ಹೆರ್ಗ, ಶ್ರೀಶ ನಾಯಕ್ ಪೆರ್ಣಂಕಿಲ, ಶ್ಯಾಮಲಾ ಕುಂದರ್, ಶಿಲ್ಪಾ ಸುವರ್ಣ, ಶ್ರೀಕಾಂತ್‌ ನಾಯಕ್ ಅಲೆವೂರು, ವಿಜಯಕುಮಾರ್ ಕೊಡವೂರು ಉಪಸ್ಥಿತರಿದ್ದರು.



ಉಡುಪಿ: ಅಂಬೇಡ್ಕರ್ ಬಗ್ಗೆ ಅವಹೇಳನ: ಅಮಿತ್ ಶಾ ವಿರುದ್ಧ ಜಿಲ್ಲಾ ಕಾಂಗ್ರೆಸ್ ಪ್ರತಿಭಟನೆ

 


ಉಡುಪಿ: ಸಂಸತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಾಗೂ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾನಹಾನಿ ಪದ ಬಳಕೆ ಮಾಡಿರುವ ಸಿ.ಟಿ. ರವಿ ವಿರುದ್ಧ ಉಡುಪಿ ಕಾಂಗ್ರೆಸ್ ಎಸ್.ಸಿ ಘಟಕ ಹಾಗೂ ಉಡುಪಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ‌ ನಡೆಸಲಾಯಿತು.

ಕಾಂಗ್ರೆಸ್ ಭವನದಿಂದ ಬ್ರಹ್ಮಗಿರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ಅಮಿತ್ ಶಾ ಹಾಗೂ ಸಿಟಿ ರವಿ ವಿರುದ್ಧ ದಿಕ್ಕಾರ ಕೂಗಿದರು. ಅಮಿತ್ ಶಾ ಅವರನ್ನು ಕೂಡಲೇ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು. ಸಿಟಿ ರವಿ ಅವರ ಪರಿಷತ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು, ಬಿಜೆಪಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಧಾನಿಯಾಗಲು, ಸರಕಾರ ನಡೆಸಲು, ಅಧಿಕಾರಕ್ಕಾಗಿ ಸಂವಿಧಾನ ಬೇಕು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗರಿಗೆ ತಾತ್ಸರ ಎಂದು ಆಕ್ರೋಶ ಹೊರಹಾಕಿದರು.

ಬಿಜೆಪಿ‌ ಇಂದು ನೇರವಾಗಿ ಸಂವಿಧಾನವನ್ನು ವಿರೋಧ ಮಾಡುವ ಪ್ರಕಿಯೆ ಕಾಣುತ್ತಿದ್ದೇವೆ. ಅಮಿತ್ ಶಾ ಗೋಧ್ರಾ ಕರ್ಮಕಾಂಡದಲ್ಲಿ ಗಡೀಪಾರದ ವ್ಯಕ್ತಿ‌. ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತನಾಡಿ ರಾಷ್ಟ್ರ ದ್ರೋಹ ಮಾಡಿದ್ದು ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

ಬಿಜೆಪಿಯವರ ಮನಸ್ಸಿನಲ್ಲಿ ಮಹಿಳೆಯರ‌ ಕುರಿತು ಏನಿದೇ ಎಂಬುವುದು ಸಾಬೀತಾಗಿದೆ. ಸಿಟಿ ರವಿ ಆಡಿದ ಮಾತಿಗೆ ಕ್ಷಮೆ ಕೇಳಬೇಕು. ಅವರ ವಿರುದ್ಧ ಉಗ್ರ ಶಿಕ್ಷೆ ವಿಧಿಸಬೇಕು. ವಿಧಾನ ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಶೋಕ್ ಕುಮಾರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ,ರಮೇಶ್ ಕಾಂಚನ್,ಹರೀಶ್ ಕಿಣಿ, ವೇರೊನಿಕಾ ಕರ್ನೆಲಿಯೋ, ನಾಗೇಶ್ ಉದ್ಯಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



ಉಡುಪಿ: ಪಡಿತರ ಚೀಟಿಯಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಅವಕಾಶ

 


ಉಡುಪಿ: ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳು ಡಿಸೆಂಬರ್ 31 ರ ವರೆಗೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಅಂತ್ಯೋದಯ ಅನ್ನ ಯೋಜನೆ, ಆದ್ಯತಾ ಪಡಿತರ ಚೀಟಿಗಳಿಗೆ ಮತ್ತು ಆದ್ಯತೇತರ ಪಡಿತರ ಚೀಟಿಗಳಿಗೆ ಕುಟುಂಬದ ಸದಸ್ಯರ ಸೇರ್ಪಡೆ, ತಿದ್ದುಪಡಿ, ವಿಳಾಸ ಬದಲಾವಣೆ, ಹೆಸರು ತೆಗೆಯುವ ಬಗ್ಗೆ ಲಾಗಿನ್ ನೀಡಿದ ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ

© all rights reserved
made with by templateszoo