Udupi kundapura ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
Udupi kundapura ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕುಂದಾಪುರ:- ಅವಳಿ ನಾಡದೋಣಿ ದುರಂತ, 6 ಮಂದಿ ಮೀನುಗಾರರ ರಕ್ಷಣೆ

ಕುಂದಾಪುರ, ಸೆ.5: ತೀವ್ರ ಮಳೆಯಿಂದ ಸಮುದ್ರ ಪ್ರಕ್ಷುಬ್ಧಗೊಂಡು ಅಲೆಗಳ ಅಬ್ಬರಕ್ಕೆ ತ್ರಾಸಿ ಸಮೀಪದ ಕಂಚುಗೋಡು ವ್ಯಾಪ್ತಿಯಲ್ಲಿ ನಾಡದೋಣಿ ಒಂದು ಮಗುಚಿ ಬಿದ್ದಿದೆ.
 ರಾಮ ಖಾರ್ವಿ ಎಂಬವರ ಓಂಕಾರ ಪ್ರಸನ್ನ ಎಂಬ ನಾಡದೋಣಿಯಲ್ಲಿ ಮೂವರು ಮೀನುಗಾರರು ಕಂಚುಗೋಡು ಸಮೀಪದ ಸಮುದ್ರದಲ್ಲಿ ಮೀನು ಗಾರಿಕೆಗೆ ತೆರಳಿದ್ದರು ಈ ವೇಳೆ ಬೆಳಗ್ಗೆ 8 ಗಂಟೆ ಸುಮಾರಿಗೆ ಅಲೆಗಳ ಹೊಡೆತಕ್ಕೆ ದೋಣಿ ಅಲ್ಲೇ ಸಮೀಪದ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಮಗುಚಿ ಬಿತ್ತೆನ್ನಲಾಗಿದೆ.

ಇದರ ಪರಿಣಾಮ ಈ ದೋಣಿಯಲ್ಲಿದ್ದ ಕಂಚುಗೋಡು ನಿವಾಸಿಗಳಾದ ರಾಮ ಖಾರ್ವಿ (65), ನಾಗರಾಜ ಖಾರ್ವಿ (38) ಹಾಗೂ ವಿನಯ ಖಾರ್ವಿ (30) ಎಂಬವರು ಸಮುದ್ರಕ್ಕೆ ಬಿದ್ದರು. ಕೂಡಲೇ ಸಮೀಪದಲ್ಲಿದ್ದ ಇತರ ದೋಣಿಯರು ಈ ಮೂವರನ್ನು ರಕ್ಷಿಸಿದರು.
ಆದರೆ ದೋಣಿಯು ಸಂಪೂರ್ಣ ನೀರಿನಲ್ಲಿ ಮುಳುಗಿದೆ. ದೋಣಿ ಸಹಿತ ಇಂಜಿನ್, ಬಲೆ ಹಾಗೂ ಇನ್ನಿತರ ವಸ್ತುಗಳು ಸಮುದ್ರ ಪಾಲಾಗಿದ್ದು, ಇದರಿಂದ ಒಟ್ಟು 4.50 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಮೀನುಗಾರ ವಿನ್ ಖಾರ್ವಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹೊಸಪೇಟೆ ದೋಣಿ ದುರಂತ

ಇನ್ನು ಗಾಳಿಮಳೆಯಿಂದಾಗಿ ತ್ರಾಸಿ ಗ್ರಾಮದ ಹೊಸಪೇಟೆ ಸಮೀಪದ ಸಮುದ್ರದಲ್ಲಿ ಬೆಳಗ್ಗೆ 7.30ರ ಸುಮಾರಿಗೆ ನಾಗ ಖಾರ್ವಿ ಎಂಬವರ ಶ್ರೀ ಯಕ್ಷೇಶ್ವರಿ ಅನುಗ್ರಹ ಎಂಬ ನಾಡದೋಣಿಯು ಅಲೆಗಳ ಅಬ್ಬರಕ್ಕೆ ಮಗುಚಿ ಬಿದ್ದಿದೆ.

ಈ ದೋಣಿಯಲ್ಲಿ ಮೀನುಗಾರಿಕೆ ನಡೆಸಿ ವಾಪಾಸ್ಸು ಬರುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಇದರ ಪರಿಣಾಮ ದೋಣಿಯಲ್ಲಿದ್ದ ನಾಗ ಖಾರ್ವಿ, ನಿತ್ಯಾನಂದ ಖಾರ್ವಿ ಹಾಗೂ ರೋಷನ್ ಎಂಬವರು ನೀರಿಗೆ ಬಿದ್ದಿದ್ದು, ಬಳಿಕ ಅವರೆಲ್ಲ ಈಜಿ ದಡ ಸೇರಿ ಪಾರಾಗಿದ್ದಾರೆ.

ನೀರಿನಲ್ಲಿ ಮುಳುಗಿದ ದೋಣಿಯನ್ನು ಬಳಿಕ ದಡಕ್ಕೆ ಎಳೆದು ತರಲಾಗಿದೆ. ಈ ದೋಣಿಯ ಎಂಜಿನ್, ಬಲೆ ಸಹಿತ ಇನ್ನಿತರ ಸಲಕರಣೆಗೆ ಹಾನಿಯಾಗಿದ್ದು, ಸುಮಾರು 2.70 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ದೋಣಿಯ ಮಾಲಕ ನಾಗ ಖಾರ್ವಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಕರಾವಳಿ ಕಾವಲು ಪಡೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ಗಳು ದಾಖಲಾಗಿವೆ.
ವರದಿ:-UDUPI FIRST
© all rights reserved
made with by templateszoo