ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮಂಗಳೂರು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬೆಲೆ ಏರಿಕೆ ವಿರುದ್ಧ ಬಿಜೆಪಿಯಿಂದ ರಾಜ್ಯದಾದ್ಯಂತ ಹೋರಾಟ: 2ರಿಂದ ಅಹೋರಾತ್ರಿ ಧರಣಿ

 


ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಏಪ್ರಿಲ್ 2ರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಸಾಮಾನ್ಯ ಜನರಿಗೆ ಸಿಕ್ಕಿರುವ ಏಕೈಕ ಖಾತರಿ ಬೆಲೆ ಏರಿಕೆ… ಈ ಬೆಲೆ ಏರಿಕೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ" ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.

ಬೆಲೆ ಏರಿಕೆ ವಿರುದ್ಧ ಏಪ್ರಿಲ್ 2ರಂದು ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 5 ರಂದು ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ಬಿಜೆಪಿ ಪ್ರತಿಭಟನೆ ನಡೆಸಲಿದೆ. ಏಪ್ರಿಲ್ 7 ರಂದು ನಾವು ಮೈಸೂರಿನಿಂದ 'ಜನ ಆಕ್ರೋಶ ಯಾತ್ರೆ' ನಡೆಸಲಿದ್ದೇವೆ… ಪಕ್ಷದ ಎಲ್ಲಾ ನಾಯಕರು ಈ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ" ಎಂದು ಅವರು ಹೇಳಿದರು. ಎಸ್ಸಿ ಮತ್ತು ಎಸ್ಟಿ ಸಮುದಾಯಗಳನ್ನು ನಿರ್ಲಕ್ಷಿಸುತ್ತಿದ್ದರೂ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯವನ್ನು ಓಲೈಸುತ್ತಿದೆ ಎಂದು ವಿಜಯೇಂದ್ರ ಆರೋಪಿಸಿದರು.

ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಸರ್ಕಾರ ಮುಸ್ಲಿಂ ಸಮುದಾಯಕ್ಕೆ ಪ್ರತ್ಯೇಕ ಬಜೆಟ್ ನೀಡಿಲ್ಲ. ಸಿದ್ದರಾಮಯ್ಯ ಅವರು ಅಹಿಂದ ಹೆಸರಿನಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ಎಲ್ಲಾ ಹಿಂದೂ ಸಮುದಾಯಗಳನ್ನು ನಿರ್ಲಕ್ಷಿಸುತ್ತಾರೆ. ಸಿದ್ದರಾಮಯ್ಯ ಅವರು ಎಸ್ಸಿ ಮತ್ತು ಎಸ್ಟಿ ಸಮುದಾಯಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದರು. 


ಉಡುಪಿ: ಬೆಳಕು ಮೀನುಗಾರಿಕೆ, ಬುಲ್‌ಟ್ರಾಲ್ ಮೀನುಗಾರಿಕೆ ನಿಷೇಧ

 


ಉಡುಪಿ: ಕೇಂದ್ರ ಸರಕಾರದ 2017ರ ನ.10 ಹಾಗೂ 2018ರ ಮಾ.7ರ ಆದೇಶದಂತೆ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಆದರೂ ಜಿಲ್ಲೆಯಲ್ಲಿ ಬೆಳಕು ಮೀನುಗಾರಿಕೆಯ ಪ್ರಕರಣಗಳು ವರದಿ ಯಾಗುತ್ತಿದ್ದು, ಈ ಸಂಬಂಧ ಉಚ್ಛ ನ್ಯಾಯಾಲಯದಲ್ಲಿಯೂ ಪ್ರಕರಣಗಳು ದಾಖಲಾಗಿದೆ.

ನ್ಯಾಯಾಲಯದಿಂದ ಈ ಸಂಬಂಧ ನಿಯಮ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ಜರಗಿಸಲು ನಿರ್ದೇಶನವಿದೆ. ಆದ್ದರಿಂದ ನ್ಯಾಯಾಲಯ ಹಾಗೂ ಸರಕಾರದ ಆದೇಶಗಳನ್ನು ಉಲ್ಲಂಘಿಸಿ ಬೆಳಕು ಮೀನುಗಾರಿಕೆ ಹಾಗೂ ಬುಲ್‌ಟ್ರಾಲ್ ಮೀನುಗಾರಿಕೆಯಲ್ಲಿ ತೊಡಗುವ ದೋಣಿಗಳ ಮೀನುಗಾರಿಕಾ ಪರವಾನಿಗೆ ಹಾಗೂ ದೋಣಿ ನೋಂದಣಿಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಅಂತಹ ದೋಣಿಗಳಿಗೆ ಡೀಸೆಲ್ ವಿತರಣೆಯನ್ನು ನಿಲ್ಲಿಸಲಾಗುವುದು. 

ಇಂತಹ ಪ್ರಕರಣಗಳು ಪುನರಾವರ್ತಿಸಿದಲ್ಲಿ ಶಾಶ್ವತವಾಗಿ ಅಂತಹ ದೋಣಿಗಳ ನೋಂದಣಿಯನ್ನು ರದ್ದುಗೊಳಿಸಲು ಕ್ರಮಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲೆಯ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.


ಹನಿಟ್ರ್ಯಾಪ್ ಗದ್ದಲ; ವಿಧಾನಸಭೆಯಿಂದ ಶಾಸಕ ಯಶ್ಪಾಲ್ ಸುವರ್ಣ ಸೇರಿದಂತೆ 18 ಬಿಜೆಪಿ ಶಾಸಕರು 6 ತಿಂಗಳು ಸಸ್ಪೆಂಡ್!

 


ಹನಿಟ್ರ್ಯಾಪ್ ಪ್ರಕರಣ ಕುರಿತಂತೆ ಗದ್ದಲ ಎಬ್ಬಿಸಿ, ಸದನದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಬಿಜೆಪಿಯ 18 ಮಂದಿ ಶಾಸಕರನ್ನು ಸಭಾಧ್ಯಕ್ಷ ಯು.ಟಿ.ಖಾದರ್ ಆರು ತಿಂಗಳವರೆಗೂ ಅಮಾನತುಗೊಳಿಸಿದ್ದಾರೆ.

ವಿಧಾನಸಭೆಯ ಕಲಾಪದ ವೇಳೆ ಸ್ಪೀಕರ್ ಯುಟಿ ಖಾದರ್ ಅವರ ಪೀಠದ ಎದುರು ಬಜೆಟ್ನ ಪ್ರತಿ ಹರಿದು ಹಾಕುವ ಮೂಲಕ ಸದನದ ಕಲಾಪಕ್ಕೆ ಅಡ್ಡಿ ಮಾಡಿದ್ದು ಹಾಗೂ ಬೇಜವಾಬ್ದಾರಿಯಿಂದ ನಡೆದುಕೊಂಡ ಆರೋಪದಡಿ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿ ಸ್ಪೀಕರ್ ಖಾದರ್ ಅವರು ಆದೇಶಿಸಿದ್ದಾರೆ.

ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತು ಮಾಡಿ ಘೋಷಿಸಿದರು. ಪೀಠಕ್ಕೆ ಅಶಿಸ್ತನ್ನು ತೋರಿದವರನ್ನು ಅಮಾನತು ಮಾಡಲಾಗಿದೆ. ನನಗೆ ಅವಮಾನ ಮಾಡಿದರೆ ಸಹಿಸುವೆ. ಆದರೆ ಪೀಠಕ್ಕೆ ಅಗೌರವ ತೋರಿದ್ದನ್ನು ಸಹಿಸಲ್ಲ ಎಂದು ಖಾದರ್ ಅವರು ಪ್ರತಿಪಾದಿಸಿದರು.

ಸದನದ ನಡಾವಳಿ ವಿರುದ್ಧ ನಡೆದುಕೊಂಡವರನ್ನು ಅಮಾನತು ಮಾಡಬೇಕು ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹಾಗೂ ಆಡಳಿತರೂಢ ಸಚಿವರು ಮನವಿ ಮಾಡಿದ್ದರು. ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಭಟಿಸಿದ ಪ್ರತಿಪಕ್ಷದ ನಾಯಕರು, ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದೂ ಒತ್ತಾಯಿಸಿ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು.

ದೊಡ್ಡನಗೌಡ ಪಾಟೀಲ್ ಸೇರಿಂದತೆ ಮುನಿರತ್ನ ನಾಯ್ಡು, ಅಶ್ವಥ್ ನಾರಾಯಣ, ಎಸ್,ಆರ್,ವಿಶ್ವನಾಥ್, ಭರತ್ ಶೆಟ್ಟಿ, ಶರಣು ಸಲಗಾರ್, ಸಿ.ಕೆ.ರಾಮಮೂರ್ತಿ, ಧೀರಜ್ ಮುನಿರಾಜು, ಯಶ್ ಪಾಲ್ ಸುವರ್ಣಾ, ಉಮಾನಾಥ ಕೊಟ್ಯಾನ್, ಬಿ.ಪಿ ಹರೀಶ್, ಬಿ.ಸುರೇಶ್ ಗೌಡ, ಚನ್ನಬಸವ, ಬಸವರಾಜ ಮತ್ತಿಮಡು, ಭೈರತಿ ಬಸವರಾಜ, ಎಂ.ಆರ್.ಪಾಟೀಲ್, ಚಂದ್ರು ಲಮಾಣಿ, ಬಿ.ಸುರೇಶ್ಗೌಡ ಇನ್ನಿತರರನ್ನು ಸಸ್ಪೆಂಡ್ ಮಾಡಲಾಗಿದೆ.

ಮಂಗಳೂರು: ಕೋಮು ದ್ವೇಷ ಭಾಷಣ ಆರೋಪ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಎಫ್ಐಆರ್ ದಾಖಲು


ಮಂಗಳೂರು : ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ಕಾಂಗ್ರೆಸ್ ನಾಯಕರೊಬ್ಬರು ನೀಡಿದ ದೂರಿನ ಮೇರೆಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವರು ಮಾಡಿದ ಭಾಷಣಕ್ಕೆ ಸಂಬಂಧಿಸಿದಂತೆ ಆರೋಪಿಸಿ ದೂರು ನೀಡಲಾಗಿದೆ.

ಅದರನ್ವಯ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ. ಈ ಬಗ್ಗೆ ಸ್ವತಃ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು ದೂರಿನ ಪ್ರತಿ ಹಂಚಿಕೊಂಡಿದ್ದಾರೆ.

ಭಾಷಣದ ವೇಳೆ ಚಕ್ರವರ್ತಿ ಸೂಲಿಬೆಲೆ ಅವರು ಕೋಮು ದ್ವೇಷದ ಭಾಷಣ ಮಾಡಿದ್ದಾರೆ ಎಂದು ಇಲ್ಲಿನ ಕಾಂಗ್ರೆಸ್ ಅಧ್ಯಕ್ಷ ಮುಸ್ತಫಾ ಅಬ್ದುಲ್ ಅವರು ಆರೋಪಿಸಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ದೂರಿನಡಿ ಸೂಲಿಬೆಲೆಯವರ ವಿರುದ್ಧ ಪ್ರಕರಣ ದಾಖಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕುತ್ತಾರಿನಲ್ಲಿ ಇತ್ತೀಚೆಗೆ ಕೊರಗಜ್ಜನ ಆದಿ ಕ್ಷೇತ್ರಕ್ಕೆ ನಮ್ಮ ನಡೆ ಪಾದಯಾತ್ರೆ ಸಮಾರೋಪ ನಡೆಯಿತು. ಈ ವೇಳೆ ಅಲ್ಲಿ ಅತಿಥಿಯಾಗಿ ತೆರಳಿದ್ದ ಚಕ್ರವರ್ತಿ ಸೂಲಿಬೆಲೆ ಅವರು ಜನರನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಈ ವೇಳೆ ಅವರು ಕೋಮು ಧ್ವೇಷದ ಭಾಷಣ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದೆ.

FIR ಕುರಿತು ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

ಉಳ್ಳಾಲ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ಬಗ್ಗೆ ಸ್ವತಃ ಚಿಂತಕ, ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರು ಮಾಹಿತಿ ಹಂಚಿಕೊಂಡಿದ್ದಾರೆ. ಅವರು ಎಕ್ಸ್‌ ಪೋಸ್ಟ್‌ನಲ್ಲಿ 'ನನ್ನ ವಿರುದ್ಧ ಮತ್ತೊಂದು ಎಫ್‌ಐಆರ್ ದಾಖಲಾಗಿದೆ. ಈ ಬಾರಿ ದ್ವೇಷ ಭಾಷಣಕ್ಕಾಗಿ ಅಲ್ಲ. ಬದಲಿಗೆ ಪ್ರೀತಿಯನ್ನು ಪ್ರತಿಪಾದಿಸಿದ್ದಕ್ಕಾಗಿ. ಪ್ರೀತಿಗೆ ಯಾವುದೇ ಮಿತಿಯಿಲ್ಲ ಎಂದು ನಾನು ಹೇಳಿದ್ದೇನೆ. ಮತ್ತು ಹಿಂದೂ ಹುಡುಗರು ಸಮುದಾಯಗಳನ್ನು ಮೀರಿ ಮದುವೆಯಾಗಲು ಸಾಮಾಜಿಕ ನಿರ್ಬಂಧಗಳಿಂದ ಮುಕ್ತರಾಗಬೇಕು ಎಂದಿದ್ದೇನೆ. ಇದನ್ನು ದ್ವೇಷ ಎಂದು ಹೇಗೆ ಪರಿಗಣಿಸಬಹುದು?'' ಎಂದು ಅವರು ತಮ್ಮ ಮೇಲಿನ ಆರೋಪ ತಳ್ಳಿ ಹಾಕಿದ್ದಾರೆ. 


ಮಂಗಳೂರು: ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಬೇಟೆ; 75 ಕೋಟಿ ಮೌಲ್ಯದ ಮಾದಕ ವಸ್ತು ವಶಕ್ಕೆ

 


ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಡ್ರಗ್ಸ್ ಜಾಲವನ್ನು  ಮಂಗಳೂರು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಪ್ರಕರಣದಲ್ಲಿ ಆಫ್ರಿಕಾ ಮೂಲದ ಇಬ್ಬರು ಮಹಿಳೆಯನ್ನು ಬಂಧಿಸಿ, 75 ಕೋಟಿ ಮೌಲ್ಯದ 37.5 ಕೆಜಿ ತೂಕದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಬಳಿ ದಕ್ಷಿಣ ಆಫ್ರಿಕಾ ಮೂಲದ ಬಂಬಾ ಫಾಂಟಾ(31) ಹಾಗೂ ಅಬಿಗೈಲ್ ಅಡೋನಿಸ್ (30) ಎಂಬುವರನ್ನು ಸಿಸಿಬಿ ಪೊಲೀಸರು ಬಂಧಿಸಿ, ದೊಡ್ಡ ಪ್ರಮಾಣದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ಈ ಕುರಿತು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಂಗಳೂರು ಸಿಸಿಬಿ ಪೊಲೀಸರು ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಪ್ರಮಾಣದ ಡ್ರಗ್ಸ್ ವಶಪಡಿಸಿಕೊಂಡಿದ್ದೇವೆ. 6 ತಿಂಗಳ ಹಿಂದೆ ಮಂಗಳೂರಿನ ಪಂಪ್ ವೆಲ್ ಬಳಿ ಹೈದರ್ ಎಂಬಾತನನ್ನು ಬಂದಿಸಿದ್ದೆವು. ಆತನಿಂದ 15 ಗ್ರಾಂ ಡ್ರಗ್ ಜಪ್ತಿ ಮಾಡಲಾಗಿತ್ತು. ಆತನಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದವರ ಬಂಧನಕ್ಕೆ ಸಿಸಿಬಿ ಪೊಲೀಸರು ಆರು ತಿಂಗಳಿನಿಂದ ಕಾರ್ಯಾಚರಣೆ ಮಾಡುತ್ತಿದ್ದರು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ವಾಸ್ತವ್ಯವಿದ್ದ ನೈಜೀರಿಯಾ ಪ್ರಜೆ ಪೀಟರ್‌ನನ್ನು ಬಂಧಿಸಿದ್ದೆವು. ಆತನಿಂದ 6 ಕೆಜಿ ಎಂಡಿಎಂಎ ವಶಪಡಿಸಿಕೊಂಡಿದ್ದೆವು. ಆತನ ಮಾಹಿತಿಯಂತೆ ಮತ್ತೆ ಕಾರ್ಯಾಚರಣೆ ಮಾಡಿ ಈ ಇಬ್ಬರು ಮಹಿಳೆಯರನ್ನು ಬಂಧಿಸಿದ್ದೇವೆ. ದೆಹಲಿಯಿಂದ ಬೆಂಗಳೂರಿಗೆ ವಿಮಾನ ಮೂಲಕ ಬಂದಿದ್ದರು. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಹತ್ತಿರದ ನೀಲಾದ್ರಿ ನಗರ ಎಂಬಲ್ಲಿ ಆರೋಪಿಗಳನ್ನು ಸಿಸಿಬಿ ವಶಕ್ಕೆ ಪಡೆದು, ಅವರ ಬಳಿಯ ಎರಡು ಟ್ರಾಲಿ ಟ್ರಾವೆಲ್ ಬ್ಯಾಗ್ನಲ್ಲಿ ತಂದಿದ್ದ 75 ಕೋಟಿ ಮೌಲ್ಯದ 37.878 ಕೆ.ಜಿ ಎಂಡಿಎಂಎ ಜಪ್ತಿ ಮಾಡಲಾಗಿದೆ. ಜತೆಗೆ 4 ಮೊಬೈಲ್ ಫೋನ್, ಟ್ರಾಲಿ ಬ್ಯಾಗ್‌ಗಳು-2, ಪಾಸ್‌ಪೋರ್ಟ್-2, ನಗದು ಹಣ 18,460 ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ದೆಹಲಿಯಿಂದ ಮಾದಕ ವಸ್ತುವಾದ ಎಂಡಿಎಂಎಯನ್ನು ವಿಮಾನದಲ್ಲಿ ಬೆಂಗಳೂರು ಹಾಗೂ ಇತರ ಕಡೆಗಳಿಗೆ ಸಾಗಾಟ ಮಾಡಿಕೊಂಡು ನೈಜೀರಿಯನ್ ಪ್ರಜೆಗಳಿಗೆ ಹಾಗೂ ಇತರ ಜನರಿಗೆ ಬೃಹತ್ ಪ್ರಮಾಣದಲ್ಲಿ ಮಾರಾಟ ಮಾಡಿಕೊಂಡು ಹಣವನ್ನು ಸಂಪಾದಿಸಿ ಐಷಾರಾಮಿ ಜೀವನ ಸಾಗಿಸುತ್ತಿದ್ದರು. ಈ ಆರೋಪಿಗಳು ಕಳೆದ ಒಂದು ವರ್ಷದಲ್ಲಿ 59 ಬಾರಿ ವಿದೇಶದಿಂದ ದೇಶಕ್ಕೆ ಪ್ರಯಾಣಿಸಿದ್ದು, ಈ ಸಂದರ್ಭದಲ್ಲಿ ಎಂಡಿಎಂಎ ಸಾಗಾಟ ಮಾಡಿದ್ದಾರೆ. ಈ ಬಗ್ಗೆ ತನಿಖೆಯಾಗುತ್ತಿದೆ. ವಿಮಾನ‌ ನಿಲ್ದಾಣದಲ್ಲಿ ಇಷ್ಟು ಪ್ರಮಾಣದ ಎಂಡಿಎಂಎ ಸಾಗಾಟ ಮಾಡಲು ಸಾಧ್ಯವಾದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮಂಗಳೂರು ನಗರ ಪೊಲೀಸ್ ಕಮೀಷನರ್ ತಿಳಿಸಿದ್ದಾರೆ.


ಖ್ಯಾತ ವಿದ್ವಾಂಸ, ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ವಿಧಿವಶ


ಮಂಗಳೂರು, ಮಾರ್ಚ್ 15: ಹಿರಿಯ ವಿದ್ವಾಂಸ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ವಾಮನ ನಂದಾವರ ಅವರು ಶನಿವಾರ (ಮಾರ್ಚ್ 15, 2025) ಬೆಳಗ್ಗೆ ಮಂಗಳೂರಿನಲ್ಲಿ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ವರ್ಷಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನಂದಾವರ ಮೂಲದವರಾದ ಡಾ.ವಾಮನ ನಂದಾವರ ಅವರು ಕನ್ನಡ ಮತ್ತು ತುಳು ಭಾಷಾ ವಿದ್ವಾಂಸರಾಗಿ ಹೆಸರುವಾಸಿಯಾಗಿದ್ದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಅವರು ತುಳು ಭಾಷೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ, ಕಾರ್ಯಾಗಾರಗಳ ಆಯೋಜನೆ ಮತ್ತು ಭಾಗವಹಿಸುವಿಕೆಯಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ತುಳು ಪಠ್ಯಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ ಮತ್ತು ತುಳು ಜಾನಪದ ಪತ್ರಿಕೆ ಮಂಡಳಿಯಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಬಂಟ್ವಾಳ ತಾಲೂಕಿನ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು.

ಡಾ.ವಾಮನ ನಂದಾವರ ಅವರ ನಿಧನಕ್ಕೆ ಕನ್ನಡ ಮತ್ತು ತುಳು ಸಾಹಿತ್ಯ ಲೋಕದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಡಾ.ವಾಮನ ನಂದಾವರ ಅವರ ಪ್ರಮುಖ ಕೊಡುಗೆಗಳು:

 * ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ತುಳು ಭಾಷೆಯ ಅಧ್ಯಯನಕ್ಕೆ ಮಹತ್ವದ ಕೊಡುಗೆ.

 * ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಜಾನಪದ ಸಿದ್ಧಾಂತದ ಅಧ್ಯಯನ.

 * ತುಳು ಪಠ್ಯಪುಸ್ತಕ ಸಮಿತಿ, ತುಳು ನಿಘಂಟು ಯೋಜನೆ ಮತ್ತು ತುಳು ಜಾನಪದ ಪತ್ರಿಕೆ ಮಂಡಳಿಯಲ್ಲಿ ಸೇವೆ.

 * ಬಂಟ್ವಾಳ ತಾಲೂಕಿನ 12ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ.

 * ಅನೇಕ ತುಳು ಹಾಗು ಕನ್ನಡ ಸಾಹಿತ್ಯ ಕೃತಿಗಳ ರಚನೆ.

ಅಂತಿಮ ದರ್ಶನ:

 * ಮಧ್ಯಾಹ್ನ 1 ಗಂಟೆ ತನಕ ಉಳಾಯಿಬೆಟ್ಟು ಅವತಾರ್ ವಿಶ್ರಾಂತಿ ಮನೆಯಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ.

 * ಮಧ್ಯಾಹ್ನ 2 ಗಂಟೆಗೆ ಉರ್ವಸ್ಟೋರ್ ನಲ್ಲಿರುವ ತುಳು ಸಾಹಿತ್ಯ ಅಕಾಡೆಮಿಯ ತುಳು ಭವನದಲ್ಲಿ ಸಾರ್ವಜನಿಕ ದರ್ಶ

ನಕ್ಕೆ ಅವಕಾಶ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ... ಮಳೆ ಸಾಧ್ಯತೆ.!

 


ನೈರುತ್ಯ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾದ ಪರಿಣಾಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದುಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಚಿಕ್ಕಮಗಳೂರು, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು.ಹಾಸನ, ಕೊಡಗು ಜಿಲ್ಲೆಯಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರಿನಲ್ಲಿ ಮಳೆಯಾಗಲಿದೆ. ವಿಜಯನಗರ, ತುಮಕೂರು, ಶಿವಮೊಗ್ಗ, ರಾಮನಗರ, ಮಂಡ್ಯ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆಯಲ್ಲಿ ಒಣಹವೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಆ ಭಾಗದ ಶಾಸಕರ ಜತೆ ಪ್ರತ್ಯೇಕ ಸಭೆ: ಡಿಸಿಎಂ ಡಿ.ಕೆ. ಶಿವಕುಮಾರ್ :ರಾತ್ರಿ 7-8 ಗಂಟೆ ನಂತರ ಕರಾವಳಿ ಭಾಗ ಸ್ಥಬ್ಧ


ಬೆಂಗಳೂರು : “ರಾಜ್ಯದ ಕರಾವಳಿ ಭಾಗದಲ್ಲಿ ಆರೋಗ್ಯ, ಶೈಕ್ಷಣಿಕ, ಧಾರ್ಮಿಕ ಹಾಗೂ ವಾಣಿಜ್ಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಅವಕಾಶಗಳಿವೆ. ಹೀಗಾಗಿ ಈ ಭಾಗದ ಎಲ್ಲಾ ಶಾಸಕರ ಜತೆಗೆ ನಾನು ಹಾಗೂ ಪ್ರವಾಸೋದ್ಯಮ ಸಚಿವರು ಪ್ರತ್ಯೇಕವಾಗಿ ಸಭೆ ಮಾಡಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಅವರು ಮಂಗಳವಾರ ಮಾತನಾಡಿದರು. 

ಬಿಜೆಪಿ ಶಾಸಕ ಗುರುರಾಜಶೆಟ್ಟಿ ಗಂಟಿಹೊಳೆ ಅವರು ರಾಜ್ಯ ಪ್ರವಾಸೋದ್ಯಮ ನೀತಿ ವಿಚಾರವಾಗಿ ಕರಾವಳಿ ಭಾಗವನ್ನು ವಿಶೇಷವಾಗಿ ಪರಿಗಣಿಸಬೇಕು ಎಂದು ಕೇಳಿದಾಗ ಪ್ರವಾಸೋದ್ಯಮ ಸಚಿವರು ಈ ಬಗ್ಗೆ ನಾವು ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಈ ವೇಳೆ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಕರಾವಳಿ ಭಾಗದಲ್ಲಿ ಧಾರ್ಮಿಕ ಕೇಂದ್ರಗಳಿಗೆ ಬರುವ ಜನರನ್ನು ಇತರೇ ಪ್ರವಾಸೋದ್ಯಮ ಸ್ಥಳಗಳಿಗೆ ಆಕರ್ಷಿಸುವಂತೆ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಕುಮಾರ್ ಅವರು, “ಮಂಗಳೂರು ಹಾಗೂ ಕರಾವಳಿ ಭಾಗದಲ್ಲಿ ಬಹುತೇಕ ಯುವಕರು ಗೆದ್ದು ಶಾಸಕರಾಗಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಪ್ರವಾಸೋದ್ಯಮ, ಧಾರ್ಮಿಕ ಪ್ರವಾಸೋದ್ಯಮ, ವಾಣಿಜ್ಯೋದ್ಯಮ ಸೇರಿದಂತೆ ದೊಡ್ಡ ಅವಕಾಶ ಕರಾವಳಿ ಭಾಗದಲ್ಲಿದೆ. ಹೀಗಾಗಿ ನಮ್ಮ ಸಚಿವರಾದ ಹೆಚ್.ಕೆ ಪಾಟೀಲ್ ಅವರು ದೊಡ್ಡ ಕನಸು ಕಂಡಿದ್ದು ನಾವು ಈ ಬಗ್ಗೆ ಸಾಕಷ್ಟು ಚರ್ಚೆ ಮಾಡಿದ್ದೇವೆ. ಈ ಸಂದರ್ಭದಲ್ಲಿ ಈ ಭಾಗದ ಶಾಸಕರ ಸಭೆ ಕರೆದು ಮಾತನಾಡಬೇಕಿದೆ. ರಾತ್ರಿ 7-8 ಗಂಟೆಯ ಮೇಲೆ ಈ ಕರಾವಳಿ ಭಾಗ ಸ್ಥಬ್ಧವಾಗುತ್ತದೆ. ಯಾವುದೇ ಕಾರ್ಯಚಟುವಟಿಕೆ ಇರುವುದಿಲ್ಲ. ಧಾರ್ಮಿಕವಾದ ಭಜನೆ, ಬಯಲಾಟ ಹೊರತಾಗಿ ಬೇರೆ ಯಾವುದೇ ಚಟುವಟಿಕೆ ಇರುವುದಿಲ್ಲ. ಈ ವಿಚಾರವಾಗಿ ಅಲ್ಲಿನ ಶಾಸಕರೇ ಕೂತು ಚರ್ಚೆ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ನೀಡಬೇಕು. ಕಳೆದ ಕೆಲವು ವರ್ಷಗಳಿಂದ ಈ ಭಾಗದಲ್ಲಿ ಮಕ್ಕಳು ಶಾಲಾ ಕಾಲೇಜುಗಳಿಗೆ ಸೇರ್ಪಡೆಯಾಗುವ ಪ್ರಮಾಣವೂ ಕುಸಿಯುತ್ತಿದೆ. ಮೆಡಿಕಲ್ ಹಾಗೂ ಇಂಜಿನಿಯರಿಂಗ್ ಕಾಲೇಜು ನಡೆಸುವವರು ಈ ವಿಚಾರವಾಗಿ ನಮ್ಮ ಬಳಿ ಚರ್ಚೆ ಮಾಡುತ್ತಿದ್ದಾರೆ” ಎಂದರು.

ಈ ಮಧ್ಯೆ ರಾತ್ರಿ 8ರ ನಂತರ ಏನು ಮಾಡಬೇಕು ಎಂದು ನೀವೇ ಸಲಹೆ ನೀಡಿ ಶಾಸಕ ಅರವಿಂದ್ ಬೆಲ್ಲದ್ ಅವರು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್ ಅವರು, “ರಾತ್ರಿ 7-8 ಗಂಟೆ ನಂತರ ಮಂಗಳೂರು ಸ್ಥಬ್ಧವಾಗಿದೆ ಎಂದರೆ ಮಂಗಳೂರಿನ ಜನ ಹೆಚ್ಚಾಗಿ ಮನೆಯಿಂದಾಚೆ ಬರುವುದಿಲ್ಲ. ಹೀಗಾದರೆ ಯಾವ ಆರ್ಥಿಕ ವಹಿವಾಟು ನಡೆಯುತ್ತದೆ. ಎಸ್.ಎಂ ಕೃಷ್ಣ ಅವರ ಕಾಲದಲ್ಲಿ ಕರಾವಳಿ ಭಾಗದಲ್ಲಿ ಐಟಿ ಬಿಟಿ ಸ್ಥಾಪಿಸಲು ಪ್ರಸ್ತಾವನೆ ನೀಡಿತು. ಆದರೆ ಅಲ್ಲಿ ಒಂದೇ ಒಂದು ಕಾಂಪ್ಲೆಕ್ಸ್ ಕೂಡ ಇರಲಿಲ್ಲ. ಈಗ ಮೂರೋ, ನಾಲ್ಕೋ ತಲೆ ಎತ್ತುತ್ತಿವೆ. ರಾಜ್ಯದಲ್ಲಿ ಅತಿ ಹೆಚ್ಚು ಇಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು ಇರುವುದೆಲ್ಲ ಅಲ್ಲೇ. ಅಲ್ಲಿರುವ ಪ್ರತಿಭೆಗಳೆಲ್ಲವೂ ಬೆಂಗಳೂರು, ಮುಂಬೈ ಹಾಗೂ ಹೊರದೇಶಗಳಿಗೆ ಹೋಗುತ್ತಿದ್ದಾರೆ. ಯಾಕೆ ಈ ಪರಿಸ್ಥಿತಿ ಇದೆ? ಯಾವುದೇ ನಗರದಲ್ಲಿ ಮನರಂಜನೆಗೆ ಅವಕಾಶವಿಲ್ಲದಿದ್ದರೆ ಅಲ್ಲಿ ಯುವಕರು ಆಸಕ್ತಿ ತೋರುವುದಿಲ್ಲ. ಹೀಗಾಗಿ ಅಲ್ಲಿನ ಶಾಸಕರು ಕೂತು ಚರ್ಚೆ ಮಾಡಿ. ಈ ವಿಚಾರವಾಗಿ ನಾನು ಹಾಗೂ ಪ್ರವಾಸೋದ್ಯಮ ಸಚಿವರಿಬ್ಬರೂ ಸೇರಿ ಜಿಲ್ಲೆಯ ಎಲ್ಲಾ ಶಾಸಕರ ಜತೆ ಪ್ರತ್ಯೇಕವಾಗಿ ಸಭೆ ಮಾಡುತ್ತೇವೆ” ಎಂದು ತಿಳಿಸಿದರು. 

ರಾಜ್ಯದ ಶಾಲಾ ಕಾಲೇಜುಗಳ ಬಳಿ ಇರುವ ಬಾರ್ ನಿಷೇಧ: ಸರ್ಕಾರದಿಂದ ಮಹತ್ವದ ಆದೇಶ..!!

 


ರಾಜ್ಯ ಸರ್ಕಾರದಿಂದ ಶಾಲಾ-ಕಾಲೇಜುಗಳ ಬಳಿಯಲ್ಲಿ ತೆರೆದಿರುವಂತ ಮಧ್ಯದಂಗಡಿಗಳಿಗೆ ಬ್ರೇಕ್ ಹಾಕಲಾಗಿದೆ. ಒಂದು ವೇಳೆ ತೆರೆದಿದ್ರೆ ಶೈಕ್ಷಣಿಕ ಸಂಸ್ಥೆಗಳಿಂದ ಅಬಕಾರಿ ಇಲಾಖೆಗೆ ದೂರು ನೀಡಲು ಸೂಚಿಸಿದೆ.

ಈ ಕುರಿತಂತೆ ಪ್ರೌಢ ಶಿಕ್ಷಣದ ನಿರ್ದೇಶಕರು ರಾಜ್ಯದ ಎಲ್ಲಾ ಉಪ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಅದರಲ್ಲಿ ಮಾನ್ಯ ಆಯುಕ್ತರು ಅಬಕಾರಿ ಇಲಾಖೆಯವರು ಸರ್ಕಾರಕ್ಕೆ ಬರೆದಿರುವ ತಮ್ಮ ಪತ್ರದಲ್ಲಿ ಉಪ ಕಾರ್ಯದರ್ಶಿಗಳು, ಜುವಿನೈಲ್ ಜಹೀ ಕಮಿಟಿ, ಕರ್ನಾಟಕ ಉಚ್ಚ ನ್ಯಾಯಾಲಯ, ಬೆಂಗಳೂರು ರವರು ದಿನಾಂಕ: 12.10.2023 ರಂದು ನಡೆಸಿರುವ ಸಭೆಯಲ್ಲಿ, ವುಸ್ತಾಪಿಸಿರುವ ಅಂಶಗಳಂತೆ ಎಂದಿದ್ದಾರೆ.

ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಲು ತಿಳಿಸುತ್ತಾ ಈ ಕುರಿತು ಅಬಕಾರಿ ಇಲಾಖೆಯಿಂದ ಕಮಕೈಗೊಳ್ಳಲಾಗುವುದೆಂದು ತಿಳಿಸಿರುತ್ತಾರೆ ಎಂದು ಹೇಳಿದ್ದಾರೆ.

ವ್ಯಸನ ಮುಕ್ತಗೊಳಿಸುವ ಬಗ್ಗೆ ಸಾರ್ವಜನಿಕರು, ಶಾಲಾ ಮಕ್ಕಳು ಹಾಗೂ ಪಾಲಕರಲ್ಲಿ ಜಾಗೃತಿ ಮೂಡಿಸಲು ಕ್ರಿಯಾ ಯೋಜನೆಯನ್ನು ರೂಪಿಸಲು ಶಿಕ್ಷಣ ಇಲಾಖೆಯು ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಪ್ರಾಧಿ ಕಾರ, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಮತ್ತು ಅಬಕಾರಿ ಇಲಾಖೆ ಆಯುಕ್ತರೊಂದಿಗೆ ಸಮನ್ವಯ ಸಾಧಿಸಬೇಕು ಎಂದು ತಿಳಿಸಲಾಗಿದೆ ಎಂದಿದ್ದಾರೆ.

ಅದರಂತೆ ತಮ್ಮ ಜಿಲ್ಲಾ ವಾಪ್ತಿಯಲ್ಲಿ ಶಾಲಾ/ಕಾಲೇಜುಗಳ ಸಮೀಪ ಮದ್ಯದಂಗಡಿಗಳಿದ್ದು ಇದರಿಂದಾಗಿ ವಿಧ್ಯಾಭ್ಯಾಸಕ್ಕೆ ಹಾಗೂ ನಿರ್ವಹಣೆಗೆ, ತೊಂದರೆಯಾಗುತ್ತಿದ್ದಲ್ಲಿ ಸಂಬಂದಪಟ್ಟ ಶೈಕ್ಷಣಿಕ ಸಂಸ್ಥೆಗಳವರು ಅಬಕಾರಿ ಇಲಾಖೆಗೆ ದೂರು ಸಲ್ಲಿಸಿ ಸೂಕ್ತ ಕ್ರಮವಹಿಸಲು ತಿಳಿಸಿದ್ದಾರೆ.



ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ


ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದವರು ಸಣ್ಣ ಫೈನಾನ್ಸ್ ಸಂಸ್ಥೆಗಳಲ್ಲಿ ಸಾಲ ಪಡೆದು ಮರುಪಾವತಿಸುವಲ್ಲಿ ವಿಳಂಬಮಾಡುವ ಸಾಲಗಾರರ ಮೇಲೆ ಮೈಕ್ರೋಫೈನಾನ್ಸ್ ಸಂಸ್ಥೆಗಳು, ಸಾಲ ನೀಡಿಕೆ ಏಜೆನ್ಸಿಗಳು ಹಾಗೂ ಲೇವಾದೇವಿಗಾರರು ನೀಡುವ ಕಿರುಕುಳ ಹಾಗೂ ಬಲವಂತದ ವಸೂಲಾತಿ ಕ್ರಮಗಳನ್ನು ನಿಯಂತ್ರಿಸಲು ಸರ್ಕಾರವು ಕರ್ನಾಟಕ ಕಿರು (ಮೈಕ್ರೋ) ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ 2025ನ್ನು ಫೆಬ್ರವರಿ 12 ರಿಂದ ಜಾರಿಗೊಳಿಸಿದ್ದು, ಆದೇಶದ ಮುಖ್ಯಾಂಶಗಳು ಹೀಗಿವೆ.

ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಾರರಿಂದ ಯಾವುದೇ ಭದ್ರತೆ ಪಡೆಯಬಾರದು. ಗ್ರಾಹಕರಿಗೆ ವಿಧಿಸುವ ಬಡ್ಡಿದರಗಳ ಬಗ್ಗೆ ಪಾರದರ್ಶಕವಾಗಿ ಲಿಖಿತ ರೂಪದಲ್ಲಿ ತಿಳಿಸಬೇಕು. ಈ ಆದೇಶವು ಭಾರತೀಯ ರಿಸರ್ವ್ ಬ್ಯಾಂಕ್, ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಿಗೆ ಮಾತ್ರ ಅನ್ವಯಿಸುತ್ತದೆ. ನೊಂದಾಯಿತ ಸಂಸ್ಥೆಗಳಿಂದ ಅಂದಾಜು 60 ಸಾವಿರ ಕೋಟಿ ರೂ ಸಾಲವನ್ನು ಸುಮಾರು 1.09 ಕೋಟಿ ಸಾಲಗಾರರು ಪಡೆದಿದ್ದಾರೆ. ನೊಂದಣಿಯಾಗದ ಸಂಸ್ಥೆಗಳಿಂದ ಸಾಲ ಪಡೆದವರ ಮಾಹಿತಿ ನಿಖರವಾಗಿ ಲಭ್ಯವಿಲ್ಲವಾದರೂ, ಅಂದಾಜು 40 ಸಾವಿರ ಕೋಟಿ ರೂ ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಇದೆ.

ಮೈಕ್ರೋಫೈನಾನ್ಸ್ ಸಂಸ್ಥೆಗಳು ತಾವು ವ್ಯವಹರಿಸುತ್ತಿರುವ ಜಿಲ್ಲೆಗಳ ಜಿಲ್ಲಾಧಿಕಾರಿಗಳಲ್ಲಿ ನೊಂದಣಿಯಾಗುವುದು ಕಡ್ಡಾಯವಾಗಿದೆ. ಈ ಸಂಸ್ಥೆಗಳು ವಿಧಿಸುವ ಬಡ್ಡಿದರ, ಸಾಲಗಾರರ ಮಾಹಿತಿ ಹಾಗೂ ಸುಸ್ತಿ ಸಾಲಗಳ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ತ್ರೈ ಮಾಸಿಕ ಮತ್ತು ವಾರ್ಷಿಕ ವ್ಯವಹಾರದ ವಿವರಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಮಾಹಿತಿಯನ್ನು ಸಲ್ಲಿಸದಿದ್ದರೆ 6 ತಿಂಗಳ ಕಾರಗೃಹವಾಸ ಅಥವಾ 10 ಸಾವರಿರೂ ವರೆಗೆ ದಂಡ ಅಥವಾ ಎರಡೂ ಶಿಕ್ಷೆಗೆ ಗುರಿಯಾಗುತ್ತಾರೆ.

ವಿವಾದಗಳನ್ನು ಇತ್ಯರ್ಥಗಳನ್ನು ಒಂಬುಡ್ಸ್‍ಮನ್‍ಗಳನ್ನು ಸರ್ಕಾರ ಅಧಿಸೂಚನೆ ಮೂಲಕ ನೇಮಕ ಮಾಡುವ ಅಧಿಕಾರ ಹೊಂದಿರುತ್ತದೆ.

ಬಲವಂತದ ವಸೂಲಾತಿಗಳನ್ನು ಕೈಗೊಳ್ಳುವ ವ್ಯಕ್ತಿಯು ವಿಚಾರಣೆಗೆ ಒಳಪಡುತ್ತಾನೆ, ಹತ್ತು ವರ್ಷಗಳ ವರೆಗೆ ವಿಸ್ತರಿಸಬಹುದಾದ ಕಾರಗೃಹವಾಸ ಶಿಕ್ಷೆ ಹಾಗೂ 5 ಲಕ್ಷ ರೂ ವರೆಗೆ ವಿಧಿಸಬಹುದಾದ ಜುಲ್ಮಾನೆಗೆ ಒಳಪಡುತ್ತಾನೆ. ಈ ಅಪರಾಧಗಳು ಸಂಜ್ಞೆಯ (ಕಾಗ್ನಿಜಿಬಲ್) ಹಾಗೂ ಜಾಮೀನು ರಹಿತ (ನಾನ್ ಬೇಲೆಬಲ್) ಪ್ರಕರಣಗಳಾಗಿರುತ್ತವೆ. ಯಾವುದೇ ಪೊಲೀಸ್ ಅಧಿಕಾರಿಗಳು ಇಂತಹ ಪ್ರಕರಣಗಳನ್ನು ನೊಂದಣಿ ಮಾಡಿಕೊಳ್ಳಲು ನಿರಾಕರಿಸಬಾರದು. ಪೊಲೀಸ್ ಉಪ ಅಧೀಕ್ಷಕ (ಡಿವೈಎಸ್‍ಪಿ) ದರ್ಜೆಗಿಂತ ಕಡಿಮೆ ಇಲ್ಲದ ಅಧಿಕಾರಿಯು ಸ್ವತಃ (ಸುಮೊಟೊ) ಪ್ರಕರಣ ದಾಖಲಿಸಬಹುದು. ಸರ್ಕಾರವು ಈ ಅಧ್ಯಾದೇಶದ ಅನುಷ್ಠಾನಕ್ಕೆ ಕಾಲಕಾಲಕ್ಕೆ ನಿರ್ದೇಶನಗಳನ್ನು ನೀಡುವ ಅಧಿಕಾರ ಹೊಂದಿರುತ್ತದೆ. ಈ ಆದೇಶದಿಂದ ಆರ್.ಬಿ.ಐ ಮತ್ತು ಕೇಂದ್ರ / ರಾಜ್ಯ ಸರ್ಕಾರಗಳಿಂದ ನೊಂದಣಿಯಾಗದ ಮೈಕ್ರೋಫೈನಾನ್ಸ್ ಸಂಸ್ಥೆಗಳಲ್ಲಿ ಆರ್ಥಿಕ ಶಿಸ್ತು ಹೆಚ್ಚಿಸಲು ಹಾಗೂ ಸಾಲಗಾರರಿಗೆ ಕಿರುಕುಳ, ಬಲವಂತದ ವಸೂಲಿ ಕ್ರಮಗಳಿಂದ ಮುಕ್ತಿ ನೀಡುತ್ತದೆ.ಡಾ

. ಶಾಲಿನಿ ರಜನೀಶ್

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು

ಕುಂಭಮೇಳಕ್ಕೆ ಉಡುಪಿಯಿಂದ ವಿಶೇಷ ರೈಲು: ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆ

 


ಉಡುಪಿ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಉಡುಪಿಯಿಂದ ವಿಶೇಷ ರೈಲು ಸೇವೆ ಆರಂಭಿಸಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ.

ದಿನಾಂಕ ಫೆಬ್ರವರಿ 17 ರಂದು ಮಧ್ಯಾಹ್ನ 12.30ಕ್ಕೆ ಉಡುಪಿಯಿಂದ ರೈಲು ಹೊರಡಲಿದ್ದು, ಕುಂಭಮೇಳಕ್ಕೆ ತೆರಳುವ ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಈ ವಿಶೇಷ ರೈಲು ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯ ಪ್ರಯಾಣಿಕರಿಗೆ ವರದಾನವಾಗಿದ್ದು, ಕಡಿಮೆ ಖರ್ಚಿನಲ್ಲಿ ಕುಂಭಮೇಳಕ್ಕೆ ತೆರಳಲು ಸಾಧ್ಯವಾಗುತ್ತದೆ.

ಈ ರೈಲು ಸೇವೆಯನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಳ್ಳುವಂತೆ ಕೋರಲಾಗಿದೆ. ಟಿಕೆಟ್‌ಗಳು ಫೆಬ್ರವರಿ 14 ರಿಂದ ಲಭ್ಯವಿದ್ದು, ರೈಲ್ವೆ ಇಲಾಖೆಯ ವೆಬ್‌ಸೈಟ್ ಅಥವಾ ರೈಲು ನಿಲ್ದಾಣಗಳ ಟಿಕೆಟ್ ಕೌಂಟರ್‌ನಲ್ಲಿ ಪಡೆದುಕೊಳ್ಳಬಹುದು.

ಈ ವಿಶೇಷ ರೈಲು 17ನೇ ತಾರೀಖು ಮಧ್ಯಾಹ್ನ 12.30ಗೆ ಉಡುಪಿಯಿಂದ ಹೊರಟ ರೈಲು 19ನೇ ತಾರೀಖಿನಂದು ಬೆಳಿಗ್ಗೆ 6.30ಗಂಟೆಗೆ ಪ್ರಯಾಗ್ ರಾಜ್ ತಲುಪಲಿದೆ. ಹಾಗೂ ಮಾರನೇ ದಿನ 20ನೇ ತಾರೀಖಿನಂದು ಸಂಜೆ 6.30ಗಂಟೆಗೆ ಪ್ರಯಾಗ್ ರಾಜ್ ನಿಂದ ಹೊರಟು 22ರಂದು ಉಡುಪಿ ತಲುಪಲಿದೆ.



ಮಹಾ ಕುಂಭಮೇಳದಲ್ಲಿ ತೀಥ ಸ್ನಾನ ಮಾಡಿದ ಸ್ಪೀಕರ್ ಯುಟಿ ಖಾದರ್

 


ಮಹಾ ಕುಂಭಮೇಳಕ್ಕೆ ಭೇಟಿ ನೀಡಿದ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯುಟಿ ಖಾದರ್ ಅವರು ಪ್ರಯಾಗ್‌ರಾಜ್‌ನಲ್ಲಿನ ಪವಿತ್ರ ಸಂಗಮದಲ್ಲಿ ತೀರ್ಥ ಸ್ನಾನ ಮಾಡಿ, ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಅನುಭವಿಸಿದ್ದಾರೆ. ನಾಗಾ ಸಾಧುಗಳು ಮತ್ತು ಅಘೋರಿಗಳನ್ನು ಭೇಟಿಯಾಗಿ, ಅವರ ಜೀವನ ಶೈಲಿಯನ್ನು ಸಮೀಪದಿಂದ ನೋಡಿದ್ದಾರೆ.

ತಮ್ಮ ಸ್ನೇಹಿತರ ಜೊತೆ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿದ ಅವರು, ತೀರ್ಥ ಸ್ನಾನದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ, ಅವರು ಅಲ್ಲಿ ಭೇಟಿ ಮಾಡಿದ ನಾಗಾ ಸಾಧುಗಳು ಹಾಗೂ ಅಘೋರಿಗಳ ಚಿತ್ರಗಳನ್ನೂ ಪೋಸ್ಟ್ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿದ ಮಂಗಳೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಯುಟಿ ಖಾದರ್, ಕುಂಭಮೇಳದಲ್ಲಿ ಭಾರತ ದೇಶದ ವೈವಿಧ್ಯಮಯ ಸಂಸ್ಕೃತಿಯನ್ನು ನೋಡಲು ಸಾಧ್ಯ. ದೇಶದ ಪ್ರತಿಯೊಂದು ಸ್ಥಳಕ್ಕೆ ಹೋಗಲು ನನಗೆ ಸಾಧ್ಯವಿಲ್ಲದಿದ್ದರೂ, ಕುಂಭಮೇಳದಂಥ ಕಾರ್ಯಕ್ರಮಗಳಲ್ಲಿ ಒಂದೇ ಸ್ಥಳದಲ್ಲಿ ಎಲ್ಲರ ಸಂಸ್ಕೃತಿಯನ್ನು ಕಾಣಬಹುದು, ಎಂದು ಹೇಳಿದ್ದಾರೆ.

ಸಾಧು, ನಾಗಾ ಸಾಧು, ಮತ್ತು ಅಘೋರಿಗಳ ಜೊತೆಗಿನ ತನ್ನ ಅನುಭವವನ್ನು ಹಂಚಿಕೊಂಡಿರುವ ಅವರು, ಕುಂಭಮೇಳವು ಭಾರತೀಯ ಸಂಸ್ಕೃತಿಯ ಗಾಢಚಿತ್ರದಂತೆ ಅನಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಫೆ.7ಕ್ಕೆ ತೆರೆಗೆ ಬರ್ತಿದೆ ರೂಪೇಶ್ ಶೆಟ್ಟಿ ನಟನೆಯ 'ಅಧಿಪತ್ರ' ಸಿನಿಮಾ


ತುಳನಾಡ ಕುವರ ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ಟೈಟಲ್ ಹಾಗೂ ಸ್ಯಾಂಪಲ್ಸ್ ಮೂಲಕ ಈಗಾಗಲೇ ನಿರೀಕ್ಷೆ ಹೆಚ್ಚಿಸಿದೆ. ಕರಾವಳಿಯ ಸಂಸ್ಕೃತಿಯಾದ ಹುಲಿ ಕುಣಿತ, ಯಕ್ಷಗಾನ, ದೈವರಾಧನೆ ಹಾಗೂ ಆಟಿ ಕಳಂಜಾ ಸೇರಿದಂತೆ ಹಲವು ವಿಚಾರಗಳುಳ್ಳ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದಲ್ಲಿ ರೂಪೇಶ್ ಖಾಕಿ ತೊಟ್ಟು ಖದರ್ ತೋರಿಸಿದ್ದಾರೆ. ಫೆಬ್ರವರಿ 7ರಂದು ಚಿತ್ರ ತೆರೆಗೆ ಬರ್ತಿದ್ದು, ಈ ಹಿನ್ನೆಲೆ ಚಿತ್ರತಂಡ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ಹಮ್ಮಿಕೊಂಡಿತ್ತು. ಈ ವೇಳೆ ಇಡೀ ಚಿತ್ರತಂಡ ಹಾಜರಾಗಿತ್ತು.  

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಿರ್ದೇಶಕ ಚಯನ್ ಶೆಟ್ಟಿ, ಅಧಿಪತ್ರ ಸಿನಿಮಾ ಫೆಬ್ರವರಿ 7ರಂದು ತೆರೆಗೆ ಬರ್ತಿದೆ. ಈ ಸಿನಿಮಾ ಒಂದೊಳ್ಳೆ ಕಂಟೆಂಟ್ ಆಗಲಿದೆ ಎಂಬ ನಂಬಿಕೆ ಇದೆ. ಈ ಒಳ್ಳೆ ಕಂಟೆಂಟ್ ಆಗಲು ನಮ್ಮ ಟೆಕ್ನಿಷಿಯಲ್ ಟೀಂ, ನಿರ್ಮಾಪಕರು, ಇಡೀ ತಾರಾಬಳಗದ ಬೆಂಬಲ ತುಂಬಾನೇ ಇದೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಇದರ ಜೊತೆಗೆ ಕರಾವಳಿ ಭಾಗದ ಆಟಿ ಕಳಂಜಾ ಸಂಸ್ಕೃತಿಯನ್ನು ಅಧಿಪತ್ರ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ತಮ್ಮದೇ ಜಾಹೀರಾತು ಕಂಪನಿ ಇದೆ. ಒಂದಷ್ಟು ಕಿರುಚಿತ್ರ ನಿರ್ದೇಶನ ಮಾಡುವುದರ ಜೊತೆಗೆ ಸಹಾಯಕ ನಿರ್ದೇಶಕರಾಗಿಯೂ ಒಂದಷ್ಟು ಸಿನಿಮಾಗಳಲ್ಲಿ ದುಡಿದಿರುವುದಾಗಿ ತಿಳಿಸಿದರು.

ನಾಯಕಿ ಜಾಹ್ನವಿ ಮಾತನಾಡಿ, ಅಧಿಪತ್ರ ನನ್ನ ಚೊಚ್ಚಲ ಸಿನಿಮಾ. ಒಂದೊಳ್ಳೆ ತಂಡದೊಂದಿಗೆ ನಾನು ಸಿನಿಮಾ ಜರ್ನಿ ಪ್ರಾರಂಭಿಸುತ್ತಿರುವುದು ಖುಷಿ ಕೊಟ್ಟಿದೆ. ತುಂಬಾ ಪ್ರೊಪೆಷನಲ್ ಟೀಂ ಅನ್ನೋವುದು ಮೊದಲ ಮೀಟಿಂಗ್ ನಲ್ಲಿಯೇ ಗೊತ್ತಾಯಿತು. ಚಿತ್ರದಲ್ಲಿ ಒಂದೊಳ್ಳೆ ಗಟ್ಟಿಕಥೆ ಇದೆ. ಒಂದೊಳ್ಳೆ ತಾರಾಬಳಗ ಚಿತ್ರದಲ್ಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಕಥೆ ಚೆನ್ನಾಗಿದೆ. ಫೆಬ್ರವರಿ 7ರಂದು ಸಿನಿಮಾ ತೆರೆಗೆ ಬರ್ತಿದೆ. ನಾನು ಬೃಹತಿ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಕಥೆ ಎಷ್ಟು ಸಸ್ಪೆನ್ಸ್ ಇದೆಯೋ. ನನ್ನ ಪಾತ್ರವೂ ಹಾಗೇಯೇ ಇದೆ ಎಂದರು. 

ನಾಯಕ ರೂಪೇಶ್ ಶೆಟ್ಟಿ ಮಾತನಾಡಿ, ಟೀಸರ್ ನೋಡಿದ್ರೆ ನಿಮಗೆ ಇದು ಯಾವ ತರಹ ಸಿನಿಮಾ ಎಂದು ಗೊತ್ತಾಗಲಿದೆ. ಇದು ಹೀರೋಯಿಸ್ ಇರುವ ಚಿತ್ರವಲ್ಲ. ಇದನ್ನು ಒಪ್ಪಿಕೊಳ್ಳಲು ಬಹುಮುಖ್ಯ ಕಾರಣವೆಂದರೆ ಕಂಟೆಂಟ್. ಇದು ಗೆದ್ದರೆ ರೂಪೇಶ್ ಹಾಗೂ ಜಾಹ್ನವಿಯಿಂದ ಗೆಲ್ಲುವಂತಹ ಸಿನಿಮಾವಲ್ಲ. ಕಥೆಯಿಂದ ಗೆಲ್ಲುವ ಸಿನಿಮಾ. ಫೆಬ್ರವರಿ 7ಕ್ಕೆ ಚಿತ್ರ ಬರ್ತಿದ್ದು, ನಾನು ಪೊಲೀಸ್ ಪಾತ್ರದಲ್ಲಿ ನಟಿಸಿದ್ದೇನೆ. ನಮ್ಮ ಚಿತ್ರಕ್ಕೆ ನಿಮ್ಮ ಬೆಂಬಲ ಇರಲಿ ಎಂದು ತಿಳಿಸಿದರು.

ಅಧಿಪತ್ರ ಚಿತ್ರದಲ್ಲಿ ರೂಪೇಶ್ ಶೆಟ್ಟಿಗೆ ನಿರೂಪಕಿ ಜಾಹ್ನವಿ ಜೋಡಿ ಆಗಿದ್ದಾರೆ. ಎಂ.ಕೆ.ಮಠ, ಕಾಂತಾರ ಚಿತ್ರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ. ಶ್ರೀಹರಿ ಶ್ರೇಷ್ಠಿ ಸಂಗೀತ, ಶ್ರೀಕಾಂತ್ ಸಂಕಲನ, ರಿತ್ವಿಕ್ ಮುರುಳಿಧರ್ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ.

ಅಧಿಪತ್ರ ಚಿತ್ರಕ್ಕೆ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕರಾಗಿ ಇದು ಇವರ ಮೊದಲ ಪ್ರಯತ್ನ. ಕೆ. ಆರ್ ಸಿನಿ ಕಂಬೈನ್ಸ್ ಬ್ಯಾನರ್‌ನಡಿ‌ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮಿ ಗೌಡ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಬೆಳಕು ಫಿಲಂಸ್ ಅಡಿಯಲ್ಲಿ ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಶ್ವೇತಾ ರವಿಚಂದ್ರ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿ ಸಾಥ್ ಕೊಟ್ಟಿದ್ದಾರೆ. ಈಗಾಗಲೇ ಟೀಸರ್ ಹಾಗೂ ಹಾಡಿನ ಮೂಲಕ ಗಮನಸೆಳೆದಿರುವ ಅಧಿಪತ್ರ ಸಿನಿಮಾ ಫೆಬ್ರವರಿ 7ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


ಮಂಗಳೂರು: ಅನೈತಿಕ ಚಟುವಟಿಕೆ ಆರೋಪ : ಮಸಾಜ್ ಸೆಂಟರ್ ಮೇಲೆ ರಾಮಸೇನೆ ದಾಳಿ : ಪ್ರಸಾದ್ ಅತ್ತಾವರ್ ಬಂಧನ...!!


ದಕ್ಷಿಣ ಕನ್ನಡ : ಮಂಗಳೂರು ನಗರದ ಮಸಾಜ್ ಸೆಂಟರ್ ಒಂದರಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಸಿ ರಾಮಸೇನೆ ಸಂಘಟನೆಯಿoದ ದಾಳಿ ಮಾಡಿರುವಂತಹ ಘಟನೆ ಬಿಜೈ ಕೆಎಸ್‌ಆರ್‌ಟಿಸಿ ಬಳಿಯ ಕಲರ್ಸ್ ಹೆಸರಿನ ಮಸಾಜ್ ಸೆಂಟರ್ ನಲ್ಲಿ ನಡೆದಿದೆ.

ಮಸಾಜ್ ಸೆಂಟರ್ ನ ಗಾಜುಗಳನ್ನು ಪುಡಿಗೈದು ಆಕ್ರೋಶ ವ್ಯಕ್ತಪಡಿಸಿದ್ದು, ಮಂಗಳೂರು ನಗರದಾದ್ಯಂತ ಇರುವ ಮಸಾಜ್ ಸೆಂಟರ್‌ಗಳನ್ನು ಮುಚ್ಚುವಂತೆ ಆಗ್ರಹಿಸಿದ್ದಾರೆ.

‘ಮಸಾಜ್ ಸೆಂಟರ್‌ನಲ್ಲಿ ಡ್ರಗ್ಸ್ ನೀಡಿ ವೇಶ್ಯಾವಾಟಿಕೆ ನಡೆಸುತ್ತಿದ್ದರು’ 16, 17 ವರ್ಷದ ಹೆಣ್ಣುಮಕ್ಕಳನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಕಾರ್ಯಕರ್ತನ ಸಂಬoಧಿ ಯುವತಿಯೊಬ್ಬಳು ಇದರಲ್ಲಿ ಸಿಲುಕಿದ್ದು, ಖಚಿತ ಮಾಹಿತಿ ಮೇರೆಗೆ ಹೆಣ್ಣುಮಕ್ಕಳ ರಕ್ಷಣೆ ಉದ್ದೇಶದಿಂದ ದಾಳಿ ನಡೆಸಿದ್ದೇವೆ ಎಂದು ರಾಮಸೇನೆ ಸಂಸ್ಥಾಪಕ ಪ್ರಸಾದ್ ಅತ್ತಾವರ ಹೇಳಿದ್ದಾರೆ.

ಘಟನೆ ಬಗ್ಗೆ ಉಡುಪಿಯಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಹೇಳಿಕೆ ನೀಡಿದ್ದು, ಯಾವ ಉದ್ದೇಶಕ್ಕೆ ದಾಳಿ ನಡೆಸಿದ್ದಾರೆ ಎಂದು ಗೊತ್ತಿಲ್ಲ. ದಾಳಿ ಮಾಡಿದ್ದವರನ್ನು ತಕ್ಷಣ ಬಂಧಿಸಲು ನಾನು ಸೂಚಿಸಿದ್ದೇನೆ. ಅನೈತಿಕ ಚಟುವಟಿಕೆ ನಡೆಸುವ ಪಾರ್ಲರ್ ಗಳಿದ್ದರೆ ದೂರು ಕೊಡಿ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದಿದ್ದಾರೆ.

ನಗರದ ಬಿಜೈಯ ಮಸಾಜ್ ಸೆಂಟರ್‌ನಲ್ಲಿ ದಾಂಧಲೆ ನಡೆಸಿದ ಪ್ರಕರಣದ ಆರೋಪಿ ರಾಮಸೇನಾ ಸ್ಥಾಪಕ ಪ್ರಸಾದ್ ಅತ್ತಾವರನನ್ನು ಪೊಲೀಸರು ಬಂಧಿಸಿದ್ದಾರೆ.

ನಗರ ಹೊರವಲಯದ ಕುಡುಪು ಬಳಿಯ ಮನೆಯಿಂದ ಪ್ರಸಾದ್ ಅತ್ತಾವರನನ್ನು ಬಂಧಿಸಲಾಗಿದೆ.

ನಗರದ ಮಸಾಜ್ ಸೆಂಟರ್ ಮೇಲೆ ರಾಮ ಸೇನಾ ಸಂಘಟನೆಯ ಕಾರ್ಯಕರ್ತರು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ಪ್ರಸಾದ್ ಅತ್ತಾವರನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಸಾದ್ ಅತ್ತವಾರ ಮಾಧ್ಯಮಗಳಿಗೆ ಹೇಳಿಕೆ ನೀಡುತ್ತಿರುವಾಗಲೇ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಂಘಟನೆಯ ಕಾರ್ಯಕರ್ತರು ಮಸಾಜ್ ಸೆಂಟರ್‌ಗೆ ನುಗ್ಗಿರುವುದಾಗಿ ಪ್ರಸಾದ್ ಅತ್ತಾವರ ಒಪ್ಪಿಕೊಂಡಿರುವುದು ವರದಿಯಾಗಿದೆ. ಉಳಿದ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಮಂಗಳೂರು: ಬ್ಯಾಂಕ್ ದರೋಡೆ ಪ್ರಕರಣ; ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯ ಕಾಲಿಗೆ ಪೊಲೀಸರಿಂದ ಗುಂಡೇಟು..!!

 


ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ ದರೋಡೆ ಪ್ರಕರಣದ ಆರೋಪಿಯೊಬ್ಬನಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಮಂಗಳವಾರ ನಡೆದಿದೆ.

ತಲಪಾಡಿಯ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ದರೋಡೆ ಪ್ರಕರಣದಲ್ಲಿ ಬಂಧಿತನಾಗಿರುವ ಮುಂಬೈ ಚೆಂಬೂರು ತಿಲಕ್‌ ನಗರ ನಿವಾಸಿ ಕಣ್ಣನ್‌ ಮಣಿ ಎಂಬಾತನ ಮೇಲೆ ಮಂಗಳೂರು ಸಿಟಿ ಕ್ರೈಂ ಬ್ರ್ಯಾಂಚ್‌ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ.

ಉಳ್ಳಾಲ ಪೊಲೀಸ್‌ ಠಾಣೆ ವ್ಯಾಪ್ತಿಯ ಕರ್ನಾಟಕ - ಕೇರಳ ಗಡಿಯ ತಲಪಾಡಿ ಗ್ರಾಮದ ಕಾಟುಂಗರ ಗುಡ್ಡೆ ಬಳಿ ಈ ಘಟನೆ ನಡೆದಿದೆ. ಸ್ಥಳ ಮಹಜರು ಮಾಡುವ ವೇಳೆ ತಪ್ಪಿಸಿಕೊಳ್ಳುವ ಕಣ್ಣನ್‌ ಮಣಿ ಯತ್ನ ನಡೆಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.




ಸ್ಯಾಮ್ಸಂಗ್ ಇಂಡಿಯಾದ ನೀತಿಗಳು ವಿರುದ್ಧ ಮೊಬೈಲ್ ವ್ಯಾಪಾರಿಗಳ ಮೇಲೆ ತೊಂದರೆ : ಅಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಶನ್ ನೇತೃತ್ವದಲ್ಲಿ ಮನವಿ


ಉಡುಪಿ /ಮಂಗಳೂರು:- ಸ್ಯಾಮ್ಸಂಗ್ ಇಂಡಿಯಾದ ನೀತಿಗಳ ವಿರುದ್ಧ ಚಿಲ್ಲರೆ ವ್ಯಾಪಾರಿಗಳ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಮಂಗಳೂರಿನ ವೆಸ್ಟ್ ಕೋಸ್ಟ್ ಚೇಂಬರ್ಸ್‌ಗೆ ಆಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.

ಕರ್ನಾಟಕ ರಾಜ್ಯದ ಮೊಬೈಲ್ ಚಿಲ್ಲರೆ ವ್ಯಾಪಾರಿಗಳು ಸ್ಯಾಮ್ಸಂಗ್ ಇಂಡಿಯಾದ ಪ್ರಸ್ತುತ ನೀತಿಗಳಿಂದ ಬಾರಿ ತೊಂದರೆ ಅನುಭವಿಸುತ್ತಿದ್ದಾರೆ ಚಿಲ್ಲರೆ ವ್ಯಾಪಾರಿಗಳು ಸ್ಟಾಕ್ ಪೂರೈಕೆಯಲ್ಲಿ ದೀರ್ಘಕಾಲದ ಅಸಂಗತತೆಯನ್ನು ಎದುರಿಸುತ್ತಿದ್ದು ಇದರಿಂದಾಗಿ ಗ್ರಾಹಕರ ಬೇಡಿಕೆಯನ್ನು ಪೂರೈಸಲು ಕಷ್ಟವಾಗುತ್ತಿದೆ, ಇದಕ್ಕೆ ವ್ಯತಿರಿಕ್ತವಾಗಿ ಆನ್ಲೈನ್ ಪ್ಲಾಟ್ಫಾರ್ಮ್ ಗಳು ನಿರಂತರವಾದ ಲಭ್ಯತೆಯನ್ನು ನಿರಂತರವಾಗಿ ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಅಧಿಕೃತ ಸೇವಾ ಕೇಂದ್ರಗಳಲ್ಲಿ ಸ್ಯಾಮ್ಸಂಗ್ 25ಸರಣಿಯು ಗೊಂದಲವನ್ನು ಉಂಟು ಮಾಡುತ್ತಿದೆ. 

ಈ ನಿಟ್ಟಿನಲ್ಲಿ ಮಂಗಳೂರಿನ ಮಾರ್ಕೆಟ್ ಸ್ಟ್ಯಾಂಡ್ ಬಳಿ ಇರುವ ವೆಸ್ಟ್ ಕೋಸ್ಟ್ ಚೇಂಬರ್ಸ್‌ಗೆ ಆಲ್ ಇಂಡಿಯಾ ಮೊಬೈಲ್ ರಿಟೇಲ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯ ದರ್ಶಿ ಸುಭಾಷ್ ಕಿಣಿ ಮತ್ತು ಡು ಕುಂಬ್ರ ಪ್ರೆಸಿಡೆಂಟ್ ರಾಜೇಶ್ ಮಾ ಬಿಯನ್ ಮತ್ತು ಕಾರ್ಯ ದರ್ಶಿ ಇಮ್ಬ್ರಾನ್ ಅಹ್ಮದ್ ಹಾಗೂ ಎಲ್ಲಾ ಮೊಬೈಲ್ ಶೋಪಿನ ಮಾಲಕರು ಉಪಸ್ಥಿತರಿದ್ದರು.



ಕಂಬಳ ಅತ್ಯಂತ ಜನಪ್ರಿಯ ಗ್ರಾಮೀಣ ಕ್ರೀಡೆ: ಸಿಎಂ ಸಿದ್ದರಾಮಯ್ಯ ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ: ಸಿಎಂ ಬಣ್ಣನೆ


ಮಂಗಳೂರು : ಕಂಬಳ ಕ್ರೀಡೆ ಮತ್ತು ಕಲೆಗೆ ಜಾತಿ-ಧರ್ಮದ ಬೇಲಿ ಇಲ್ಲ. ಇದು ಸರ್ವರ ಸಂಭ್ರಮ.‌ ನಮ್ಮ ದೇಶ ಬಹುತ್ವದ ದೇಶ‌ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು. 

ಉಳ್ಳಾಲ ನರಿಂಗಾನದ ಮೂರನೇ ವರ್ಷದ ಲವ-ಕುಶ ಜೋಡುಕೆರೆ ಕಂಬಳೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. 

ಜನಪದ ಕ್ರೀಡೆ ಕಂಬಳ ಸರ್ವ ಜಾತಿ ಧರ್ಮದ ಜನಸಮುದಾಯವನ್ನು ಬೆಸೆಯುವಂತೆ ಮಾಡುತ್ತಿದೆ. 

ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಭಾರತ ಸಂಸ್ಕೃತಿಯ ಒಂದು ಭಾಗ ಕರಾವಳಿ ಜಿಲ್ಲೆಗಳ ಸಂಸ್ಕೃತಿಯಾಗಿದೆ. ನಮ್ಮ ಸರ್ಕಾರ ಕೂಡ ಎಲ್ಲಾ ಜಾತಿ, ಎಲ್ಲಾ ಧರ್ಮದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಮಹಿಳೆಯರಿಗೆ ಆರ್ಥಿಕ ಶಕ್ತಿ ಕೊಡುವ ಮೂಲಕ‌ ಕುಟುಂಬಗಳ ಮತ್ತು ಮಹಿಳಾ ಸಮಾಜದ ಆರ್ಥಿಕ‌ ಶಕ್ತಿಯನ್ನು ಹೆಚ್ಚಿಸುವ ಕಾರ್ಯಕ್ರಮಗಳನ್ನು ಇಡೀ ದೇಶದಲ್ಲಿ ಮೊದಲಿಗೆ ಕೊಟ್ಟಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರ ಬೇಡಿಕೆ ಈಡೇರಿಸಿ ಅವರು ಪ್ರತಿಭಟನೆ ಹಿಂತೆಗೆದುಕೊಳ್ಳುವಂತೆ ಮಾಡಿದ್ದು ನಮ್ಮ ಸರ್ಕಾರ. ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ 10 ಸಾವಿರ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ನಮ್ಮ ಸರ್ಕಾರ ವಹಿಸಿಕೊಂಡಿದೆ ಎಂದರು. 

ಸುಪ್ರೀಂಕೋರ್ಟ್ ನಿಷೇಧಿಸಿದ್ದ ಕಂಬಳ ಕ್ರೀಡೆಗೆ ಮರು ಚಾಲನೆ ಸಿಗುವಂತೆ ಮಾಡಿದ್ದು ನಮ್ಮ ಸರ್ಕಾರ. ಸುಪ್ರೀಂಕೋರ್ಟ್ ನಿಷೇಧವನ್ನು ತೆರವುಗೊಳಿಸಲು ಸರ್ಕಾರ ಶ್ರಮಿಸಿತು. ಇದು ಕರಾವಳಿಯ ಜನಪದ ಸಂಸ್ಕೃತಿಗೆ ನಮ್ಮ ಸರ್ಕಾರ ಕೊಟ್ಟ ಕೊಡುಗೆ ಎಂದರು. 

ತಮ್ಮ ಮನೆ ಮಕ್ಕಳಂತೆ ಕೋಣಗಳನ್ನು ಸಾಕುತ್ತಾರೆ. ಕಂಬಳ ಕ್ರೀಡೆ ಜಿಲ್ಲೆಯ ಜನಪದ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಈ ಸಾಂಪ್ರದಾಯಿಕ ಕ್ರೀಡೆಯನ್ನು ಉಳಿಸಲು ನಾನು ಮುಂದಾದೆ ಎಂದರು.

24 ಕಂಬಳಗಳನ್ನು ನಡೆಸಲು ಪ್ರತೀ ಕಂಬಳಕ್ಕೆ ತಲಾ 5 ಲಕ್ಷ ರೂಪಾಯಿ ನೆರವನ್ನು ನಮ್ಮ ಸರ್ಕರ ನೀಡಿದೆ. 

ತುಳು ಎರಡನೇ ಭಾಷೆ: ಸರ್ಕಾರ ಪರಿಗಣಿಸುತ್ತದೆ:

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ಅವರ ಬೇಡಿಕೆಯಂತೆ ತುಳು ಭಾಷೆಯನ್ನು ಎರಡನೇ ರಾಜ್ಯ ಭಾಷೆಯನ್ನಾಗಿ ಪರಿಗಣಿಸುವ ಬಗ್ಗೆ ಗಂಭೀರವಾಗಿ ಚಿಂತಿಸಲಾಗುವುದು ಎಂದರು.

ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ:

ಐದು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಯು.ಟಿ.ಖಾದರ್ ಅವರು ಸ್ಪೀಕರ್ ಆಗುವ ಮೂಲಕ ಪ್ರೋಟೋಕಾಲ್ ಪ್ರಕಾರ ನನಗಿಂತ ಎತ್ತರದಲ್ಲಿದ್ದಾರೆ. ಮುಂದೆ ಇದಕ್ಕಿಂತ ಒಳ್ಳೆಯ ಅವಕಾಶಗಳು ಸಿಗಬಹುದು. ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ ಎಂದರು.

ಯು.ಟಿ.ಖಾದರ್ ಅವರು ಸ್ಪೀಕರ್ ಆದ ಬಳಿಕ ತಮ್ಮ ಕ್ಷೇತ್ರದ ಅಭಿವೃದ್ಧಿಗೆ 1000 ಕೋಟಿಯಷ್ಟು ಅನುದಾನ ತಂದಿದ್ದಾರೆ. ಕ್ಷೇತ್ರದ ಬಗ್ಗೆ ಅಷ್ಟೊಂದು ಪ್ರೀತಿ ಇದೆ ಖಾದರ್ ಅವರಿಗೆ ಎಂದರು.

ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಚಿವ ರಹೀಂ ಖಾನ್ ಸೇರಿ ಹಲವು ಪ್ರಮುಖರು, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.



ಮಂಗಳೂರು: ಕಂಬಳಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹ: ಮುಖ್ಯಮಂತ್ರಿ ಸಿದ್ದರಾಮಯ್ಯ

 


ಮಂಗಳೂರು : ಕಂಬಳಕ್ಕೆ ಎಲ್ಲಾ ರೀತಿಯ ಪ್ರೋತ್ಸಾಹವನ್ನು ನಮ್ಮ ಸರ್ಕಾರ ನೀಡುತ್ತಿದೆ. ಕೇಂದ್ರ ಸರ್ಕಾರ ಹಾಗೂ ಸರ್ವೋಚ್ಚ ನ್ಯಾಯಾಲಯಕ್ಕೆ ಪತ್ರ ಬರೆದಿರುವುದರಿಂದ ಕಂಬಳ ಉಳಿದುಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಗಳೂರಿನಲ್ಲಿ ಇಂದು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

ಕಂಬಳದ ಕುರಿತು ಯೋಜನೆ ರೂಪಿಸುವ ಕುರಿತು ಪರಿಶೀಲಿಸಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಕಗಳ ಜೊತೆಗೆ 10 ಸಾವಿರ ರೂ.ಗಳ ಗೌರವಧನ ನೀಡಲು ಸರ್ಕಾರ ಒಪ್ಪಿದೆ. ಒಂದು ವೇಳೆ 10 ಸಾವಿರಗಳಷ್ಟು ಪ್ರೋತ್ಸಾಹಕಗಳು ಬಾರದೆ ಹೋದರೆ ಸರ್ಕಾರವೇ ಅದನ್ನು ಭರಿಸಲಿದೆ ಎಂದರು.

ನಕ್ಸಲರು ಮುಖ್ಯವಾಹಿನಿಗೆ ಬರಬೇಕು : 

ಆರು ನಕ್ಸಲರು ಶರಣಾಗಿದ್ದು ಅವರನ್ನು ಕಾಡಿನಿಂದ ನ್ಯಾಯಾಲಯಕ್ಕೆ ಕರೆತಂದು, ಅಲ್ಲಿಂದ ನಾಡಿಗೆ ಕರೆತರುವ ಪ್ರಯತ್ನ ಮಾಡಿದ್ದು, ನಕ್ಸಲರು ಶಸ್ತ್ರಾಸ್ತ್ರ ಹೋರಾಟ ನಿಲ್ಲಿಸಿ ಮುಖ್ಯವಾಹಿನಿಗೆ ಬರಬೇಕು. ಶಾಂತಿಯುತ ಹೋರಾಟಕ್ಕೆ ನಮ್ಮ ತಕರಾರೇನಿಲ್ಲ. ಸಂವಿಧಾನದಲ್ಲಿ ಶಾಂತಿಯುತ ಹೋರಾಟಕ್ಕೆ ಅವಕಾಶವಿದ್ದು, ಅದರಂತೆ ಹೋರಾಟ ಮಾಡಿದರೆ ಅದಕ್ಕೆ ಸಹಕಾರವಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ನಕ್ಸಲರ ಶರಣಾಗತಿಯ ಬಗ್ಗೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರು ಜಿಲ್ಲಾ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರ್ಕಾರಿ ನೌಕರರಾಗಿದ್ದರು. ಈಗ ರಾಜಕೀಯದಲ್ಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದು ಅವರಿಂದ ನಾವೇನು ನಿರೀಕ್ಷೆ ಮಾಡಲು ಸಾಧ್ಯ ಎಂದರು.

ನಾಡದೋಣಿ ಮೀನುಗಾರರ ಪ್ರತಿಭಟನೆ: ಜ.10ರಂದು ಮೀನುಗಾರಿಕೆಗೆ ರಜೆ ಘೋಷಣೆ

 


ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ನೇತೃತ್ವದಲ್ಲಿ ಅವೈಜ್ಞಾನಿಕ ಮೀನುಗಾರಿಕೆಯಾದ ಬೆಳಕು ಮತ್ತು ಬುಲ್ ಟ್ರಾಲ್ ಮೀನುಗಾರಿಕೆ ನಿಷೇಧದ ಅನುಷ್ಠಾನಕ್ಕಾಗಿ ಹಾಗೂ ಸೀಮೆಎಣ್ಣೆ ದರ ಕಡಿಮೆ ಮಾಡುವುದರ ಬಗ್ಗೆ ಜ.10ರಂದು ತ್ರಾಸಿ ಬೀಚ್ ನಲ್ಲಿ ನಡೆಯುವ ಪ್ರತಿಭಟನೆಗೆ ಮೂರು ಜಿಲ್ಲೆಗಳ ನಾಡದೋಣಿ ಮೀನು ಗಾರಿಕೆಗೆ ರಜೆ ಘೋಷಣೆ ಮಾಡಲಾಗಿದೆ.

ಮೂರು ಜಿಲ್ಲೆಗಳ ಮೀನುಗಾರರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾ ರೆಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಅಧ್ಯಕ್ಷ ಅಳ್ವಿಕೋಡಿ ನಾಗೇಶ್ ಖಾರ್ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಇಂದಿನಿಂದ ಜನವರಿ 5ರವರೆಗೆ ಕುಕ್ಕೆ ಕ್ಷೇತ್ರದಲ್ಲಿ ಕಿರುಷಷ್ಠಿ ಮಹೋತ್ಸವ


 ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನದಲ್ಲಿ ಜನವರಿ 5ರಂದು ಕಿರುಷಷ್ಠಿ ಮಹೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ಇದರ ಅಂಗವಾಗಿ ಜನವರಿ 2ರಿಂದ 5ರವರೆಗೆ ಧಾರ್ಮಿಕ ಉಪನ್ಯಾಸ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಜ.2 ರಿಂದ ಸಂಜೆ 5:30ರಿಂದ ಧರ್ಮ ಸಮ್ಮೇಳನ ಸಭಾ ಕಾರ್ಯಕ್ರಮ ಜರುಗಲಿದ್ದು ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ.

ಸಂಜೆ 6:30ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ಅದೇ ರೀತಿ ಜನವರಿ 5ರವರೆಗೆ ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳು ಜರುಗಲಿದ್ದು ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



© all rights reserved
made with by templateszoo