ಧರ್ಮಸ್ಥಳ ಕುಕ್ಕೆ ಸುಬ್ರಹ್ಮಣ್ಯ ದೇವಾಲಯಕ್ಕೆ ಕೋವಿಡ್ ನಿರ್ಬಂಧ ತೆರವು, ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ
ದ.ಕ : ಸೆ.7: ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಆದರೆ ವಾರಾಂತ್ಯದಲ್ಲಿ ಭಕ್ತರಿಗೆ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳನ್ನು ಅವಲೋಕಿಸಿ, ಕೋವಿಡ್ ಪಾಸಿಟಿವಿಟಿ ದರದಲ್ಲಿ ಇಳಿಕೆಯಾಗಿದ್ದರೂ, ಸಂಭಾವ್ಯ 3ನೇ ಅಲೆಯನ್ನು ಸಮರ್ಪಕವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಮುಂದಿನ ಆದೇಶದವರೆಗೆ ಕೆಲವು ನಿರ್ಬಂಧಗಳನ್ನು ಜಾರಿಗೊಳಿಸಿ, ಆದೇಶ ಹೊರಡಿಸಿದ್ದಾರೆ.
ಕಟೀಲುಶ್ರೀ ಪರಮೇಶ್ವರಿ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಮುಂದಿನ ಆದೇಶದವರೆಗೆ ಭಕ್ತರಿಗೆ ಬೆಳಗ್ಗೆ 7ರಿಂದ ಸಂಜೆ 7 ಗಂಟೆಯವರೆಗೆ ಮಾತ್ರ ತೆರೆಯಲಾಗಿರುತ್ತದೆ. ಈ ಸಂದರ್ಭದಲ್ಲಿ ಕಡ್ಡಾಯವಾಗಿ ಸುರಕ್ಷಿತ ಅಂತರ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಭಕ್ತರಿಗೆ ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ತೀರ್ಥ ಪ್ರಸಾದ, ಸೇವೆಗಳು, ಅನ್ನಸಂತರ್ಪಣೆಗೆ ಅವಕಾಶ ಇರುವುದಿಲ್ಲ.
ವಾರಾಂತ್ಯದಲ್ಲಿ (ಶನಿವಾರ-ರವಿವಾರ) ಭಕ್ತರ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ವಸತಿ ಗೃಹಗಳಲ್ಲಿ ತಂಗುವುದಾಗಲೀ ಅಥವಾ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಶನಿವಾರ ಮತ್ತು ರವಿವಾರ ಎಲ್ಲ ರೀತಿಯ, ಉತ್ಸವ, ಸೇವೆಗಳ, ತೀರ್ಥ, ಪ್ರಸಾದ, ಮುಡಿ ಸೇವೆ ವಸತಿಗಳನ್ನು ನಿರ್ಬಂಧಿಸಿ, ಅರ್ಚಕರಿಂದ ಸಾಂಪ್ರಾದಾಯಿಕ ಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಜಾತ್ರೆಗಳು, ದೇವಾಲಯದ ಉತ್ಸವಗಳು ಹಾಗೂ ಮೆರವಣಿಗೆಗಳನ್ನು ಸಹ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.