ಕುಂದಾಪುರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕುಂದಾಪುರ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಕುಂದಾಪುರ:-ಕಂಠಪೂರ್ತಿ ಕುಡಿದು ಮಹಿಳೆಯರನ್ನು ಚುಡಾಯಿಸುತ್ತಿದ್ದವನಿಗೆ ಬಿತ್ತು ಲಾಠಿ ಏಟು..!12-8-2022


ಕುಂದಾಪುರ : ಕುಡುಕನೊಬ್ಬನಿಗೆ ಮಹಿಳಾ ಎಸ್ಸೈ ಲಾಠಿ ರುಚಿ ತೋರಿಸಿದ ಘಟನೆ ಕುಂದಾಪುರದಲ್ಲಿ ನಡೆದಿದೆ.ಇಲ್ಲಿನ ತಾಲೂಕು ಸರ್ಕಾರಿ ಬಸ್ ನಿಲ್ದಾಣದಲ್ಲಿ ಮಹಿಳೆಯರನ್ನು ಚುಡಾಯಿಸುತ್ತಿದ್ದ ಹುಡುಗನಿಗೆ ಟ್ರಾಫಿಕ್ ಸಬ್ ಇನ್ಸ್ಪೆಕ್ಟರ್ ಸುಧಾ ಪ್ರಭು ಲಾಠಿ ರುಚಿ ತೋರಿಸಿದ್ದಾರೆ.



ಬಸ್ ನಿಲ್ದಾಣ ಪರಿಸರದಲ್ಲಿ ಕಂಠಪೂರ್ತಿ ಕುಡಿದ ವ್ಯಕ್ತಿಯು ಬಸ್ಸಿಗಾಗಿ ಕಾಯುತ್ತಿದ್ದ ಮಹಿಳೆಯರಿಗೆ ಕೀಟಲೆ ಮಾಡಲು ಮುಂದಾಗಿದ್ದಾನೆ. ಇದೇ ವೇಳೆ ರೌಂಡ್ಸ್ ನಲ್ಲಿದ್ದ ಎಸ್ಐ ಸುಧಾ ಪ್ರಭು ಆತನಿಗೆ ಬುದ್ಧಿಮಾತು ಹೇಳಿದ್ದಾರೆ. ಇನ್ನು ಮುಂದೆ ತೊಂದರೆ ಕೊಟ್ಟರೆ ಕೇಸ್ ಹಾಕುತ್ತೇನೆ, ಜಾಗ ಖಾಲಿ ಮಾಡು ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಕೆರಳಿದ ಕುಡುಕ ಎಸ್ಐ ಮೇಲೆಯೇ ಹಲ್ಲೆಗೆ ಮುಂದಾಗಿದ್ದು ಈ ವೇಳೆ ಎಸ್ ಐ ಲಾಠಿ ರುಚಿ ತೋರಿಸಿದ್ದಾರೆ .ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕುಂದಾಪುರ:- ಇನ್ನೂ ಪತ್ತೆಯಾಗದ ಸನ್ನಿಧಿ 8-8-2022


ಕುಂದಾಪುರ : ಕಾಲುಸಂಕದಿಂದ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಾಲಕಿ ಸನ್ನಿಧಿ ಇನ್ನೂ ಪತ್ತೆಯಾಗಿಲ್ಲ. ಶಾಲೆ ಮುಗಿಸಿ ಮನೆಗೆ ಹೊರಟ್ಟಿದ್ದ ಸನ್ನಿದ್ದ ಮನೆ ಹತ್ತಿರುವ ಇರುವ ಕಾಲುಸಂಕ ದಾಟಲು ಹೋಗಿ ಆಯತಪ್ಪಿ ಹೊಳೆಗೆ ಬಿದಿದ್ದು, ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾಳೆ.

ಬೈಂದೂರು ತಾಲ್ಲೂಕಿನ ಕಾಲ್ತೋಡು ಗ್ರಾಮದಲ್ಲಿ ದುರ್ಘಟನೆ ನಡೆದಿದ್ದು ಆಕೆಯ ಪತ್ತೆಗೆ ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು, ಸ್ಥಳೀಯರು ತೀವ್ರ ಶೋಧ ನಡೆಸುತ್ತಿದ್ದರೂ ಸನ್ನಿಧಿ ಇನ್ನೂ ಪತ್ತೆಯಾಗಿಲ್ಲ. ಚಪ್ಪರಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ಸನ್ನಿಧಿ ನಿನ್ನೆ ಸೋಮವಾರ ಮನೆಗೆ ಆಯಾ ಜೊತೆ ಹಿಂತಿರುಗುವಾಗ ಬೀಜಮಕ್ಕಿ ಎಂಬಲ್ಲಿ ಈ ಅವಘಡ ನಡೆದಿದೆ. ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಭೇಟಿ ಕೊಟ್ಟು ಪರಿಸ್ಥಿತಿ ಅವಲೋಕಿಸಿದ್ದಾರೆ. ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.




ಇಂದು ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೂರ್ಮಾರಾವ್ ಭೇಟಿ ನೀಡಿದ್ದಾರೆ. ಈ ಸಂದರ್ಭ ಊರಿನ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮುಂದೆ ಕಾಲ್ತೋಡು ಗ್ರಾಮಸ್ಥರು ಹೇಳಿಕೊಂಡಿದ್ದು. ಶೀಘ್ರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿ ನೀಡಿದ್ದಾರೆ.

ಗಂಗೊಳ್ಳಿ: ಸರಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಹತ್ತು ಲಕ್ಷ ಪಂಗನಾಮ..!8-8-2022

 


ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂ. ಪಡೆದು ವಂಚನೆ ಮಾಡಿರುವ ಘಟನೆ ಕುಂದಾಪುರ ತಾಲೂಕಿನ ತ್ರಾಸಿ ಗ್ರಾಮದಲ್ಲಿ ನಡೆದಿದೆ.


ತ್ರಾಸಿ ನಿವಾಸಿ ರೆಹಾನ್ ಅಹಮ್ಮದ್ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಇವರಿಗೆ ಒಂದು ವರ್ಷದ ಹಿಂದೆ ಲತೇಶ್ ಸಂಜೀವ ಕುಂಬ್ಲೆ ಎಂಬವರ ಪರಿಚಯವಾಗಿತ್ತು. ಆತ ತನಗೆ ದೊಡ್ಡ ದೊಡ್ಡ ರಾಜಕಾರಣಿಗಳ ಪರಿಚಯವಿದೆಯೆಂದು ಕೆಲವು ರಾಜಕಾರಣಿಗಳ ಜೊತೆ ತೆಗೆಸಿಕೊಂಡಿರುವ ಫೋಟೋಗಳನ್ನು ತೋರಿಸಿದ್ದಾನೆ.




ಅಲ್ಲದೆ, ರೆಹಾನ್ ಅವರ ಅಕ್ಕ ಸಬೀನಾ ಅಖ್ತರ್ ಅವರಿಗೆ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, 10 ಲಕ್ಷ ರೂ. ಕೇಳಿದ್ದನು‌. ಅದರಂತೆ ರೆಹಾನ್ ಅವರು ಬ್ಯಾಂಕ್ ಖಾತೆಯ ಮೂಲಕ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ, ಈವರೆಗೂ ಕೆಲಸವನ್ನು ಕೊಡಿಸಿಲ್ಲ‌. ಅದನ್ನು ಪ್ರಶ್ನಿಸಿದಾಗ ಆರೋಪಿ ಲತೇಶ್ 6 ಲಕ್ಷ ರೂ. ವಾಪಾಸು ನೀಡುವುದಾಗಿ ಹೇಳಿ, ಹೆಚ್.ಡಿ.ಎಫ್.ಸಿ ಬ್ಯಾಂಕಿನ ಚೆಕ್ ನ್ನು ನೀಡಿದ್ದನು. ಅದನ್ನು ಬ್ಯಾಂಕ್ ಗೆ ಹಾಕಿದಾಗ ಚೆಕ್ ಬೌನ್ಸ್ ಆಗಿದೆ. ಆರೋಪಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದುಕೊಂಡು ಬಳಿಕ ಕೆಲಸ ಕೊಡಿಸದೆ ಮೋಸ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಕುಂದಾಪುರ ನ್ಯಾಯಾಲಯದಲ್ಲಿ ದಾಖಲಾದ ಖಾಸಗಿ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಕುಂದಾಪುರ: ಎ.ಬಿ.ವಿ.ಪಿ ವತಿಯಿಂದ ಮಂಗಳೂರು ವಿಶ್ವವಿದ್ಯಾಲಯದ ವಿರುದ್ದ ಧರಣಿ 06.08.202

 


ಕುಂದಾಪುರ : ಮಿನಿ ವಿಧಾನಸೌಧದ ಎದುರುಗಡೆ ಇಂದು ಕುಂದಾಪುರದ ಆಸುಪಾಸಿನ ವಿದ್ಯಾರ್ಥಿಗಳು ಜೊತೆ ಸೇರಿ ಮಂಗಳೂರು ವಿಶ್ವವಿದ್ಯಾಲಯದ ವಿರುದ್ದ ಧರಣಿ ನಡೆಸಿದರು.

ಇತ್ತೀಚಿನ ದಿನಗಳಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ವಿಧ್ಯಾರ್ಥಿಗಳಿಗೆ ಹಲವು ಸಮಸ್ಯೆಗಳು ಎದುರಾಗಿದ್ದು ವಿದ್ಯಾರ್ಥಿಗಳು ಇದರ ವಿರುದ್ಧ ಎಷ್ಟೇ ಮನವರಿಕೆ ಮಾಡಿದರು ವಿಶ್ವವಿದ್ಯಾಲಯ ಒಂದಲ್ಲ ಒಂದು ರೀತಿಯ ನಿರಂತರ ಸಮಸ್ಯೆಯನ್ನು ವಿಧ್ಯಾರ್ಥಿಗಳ ಭವಿಷ್ಯದಲ್ಲಿ ತಂದೊಡ್ಡುತ್ತಿದೆ.


ಇನ್ನು ಧರಣಿ ವಿಷಯಕ್ಕೆ ಸಂಬಂಧಿಸಿದಂತೆ ಕುಂದಾಪುರ ಭಾಗದ ಆಸುಪಾಸಿನ ವಿದ್ಯಾರ್ಥಿಗಳು ಸಂಘಟಿತರಾಗಿ ತಮಗಾದ ಸಮಸ್ಯೆಯ ವಿರುದ್ಧ ಕುಂದಾಪುರದ ಶಾಸ್ತ್ರೀ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಮಿನಿ ವಿಧಾನಸೌಧವನ್ನು ಮುತ್ತಿಗೆ ಹಾಕಿದರು.





ಇನ್ನು ವಿಧ್ಯಾರ್ಥಿಗಳು ಈಗಾಗಲೇ ನಾಲ್ಕನೇ ಸೆಮಿಸ್ಟರ್ ನ ಪರೀಕ್ಷೆ ಬರೆದಿದ್ದು ಅದರ ಫಲಿತಾಂಶ ಇನ್ನು ಪ್ರಕಟವಾಗಿಲ್ಲ ಜೊತೆಗೆ ಅಂಕಪಟ್ಟಿಯನ್ನು ನೀಡಿರುವುದಿಲ್ಲ. ಅದಲ್ಲದೆ ಪ್ರಸ್ತುತ ಐದನೇ ಸೆಮಿಸ್ಟರ್ ನ ಪರೀಕ್ಷೆಯ ಫಲಿತಾಂಶ ಬಂದಿದ್ದು ವಿಧ್ಯಾರ್ಥಿಗಳು ಫಲಿತಾಂಶವನ್ನು ನೋಡಿ ಬೆಚ್ಚಿಬಿದ್ದಿದ್ದಾರೆ.


 ಐದನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶದಲ್ಲಿ ಹೆಚ್ಚಿನ ವಿದ್ಯಾರ್ಥಿಗಳನ್ನು ಅನುತ್ತೀರ್ಣ ಮಾಡಲಾಗಿದ್ದು ಅದಲ್ಲದೆ ಬರೆದಿದ್ದಕ್ಕೆ ಸರಿಯಾದ ಅಂಕಗಳನ್ನು ವಿಶ್ವ ವಿದ್ಯಾಲಯ ನೀಡಿಲ್ಲ ಎಂದು‌ ವಿಧ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.



ವಿಧ್ಯಾರ್ಥಿಗಳ ಜೊತೆ ಮಾತನಾಡಿದ ಮಿನಿ ವಿಧಾನಸೌಧದ ಅಧಿಕಾರಿಯವರು ಇನ್ನು ಎರಡು ಮೂರು ವಾರದ ಒಳಗೆ ವಿದ್ಯಾರ್ಥಿಗಳ ಸಮಸ್ಯೆಯನ್ನು ಬಗೆಹರಿಸುವುದಾಗಿ ಪ್ರತಿಕ್ರಿಯೆ ನೀಡಿರುವುದಾಗಿ ಮಾಹಿತಿ ಲಭ್ಯವಾಗಿದೆ.




ಕುಂದಾಪುರ : ಅನ್ನಭಾಗ್ಯದ ಅಕ್ಕಿ ಅಕ್ರಮ ದಾಸ್ತಾನು : ಪೋಲಿಸ್ ಅತಿಥಿಯಾಗಿರುವ ಆರೋಪಿ 06.08.2022

 ಕುಂದಾಪುರ : ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪಿಯನ್ನು ಕುಂದಾಪುರ ಆಹಾರ ನಿರೀಕ್ಷಕರ ಹಾಗೂ ಪೊಲೀಸರ ನೇತೃತ್ವದ ತಂಡ ಆ.4ರಂದು ಬೆಳಗ್ಗೆ ಬಂಧಿಸಿದೆ.





ತಲ್ಲೂರು ಗ್ರಾಮದ ಪಾರ್ತಿಕಟ್ಟೆ ರಸ್ತೆಯ ಅಬ್ದುಲ್ ಮುನಾಫ್ ಬಂಧಿತ ಆರೋಪಿ.





ಈತ ಮನೆಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಮಾರಾಟ ಮಾಡಲು ದಾಸ್ತಾನು ಇರಿಸಿರುವುದಾಗಿ ಬಂದ ಮಾಹಿತಿಯಂತೆ ಕುಂದಾಪುರದ ಆಹಾರ ನಿರೀಕ್ಷಕ ಸುರೇಶ್ ಎಚ್.ಎಸ್. ಹಾಗೂ ಕುಂದಾಪುರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.



ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ 80 ಸಾವಿರ ರೂ. ಮೌಲ್ಯದ ರಿಕ್ಷಾ, ರಿಕ್ಷಾದಲ್ಲಿ ಮತ್ತು ಮನೆಯ ರೂಮಿನಲ್ಲಿದ್ದ 45100 ರೂ. ಮೌಲ್ಯದ 41 ಅಕ್ಕಿ ಚೀಲದಲ್ಲಿ ರುವ 2050 ಕಿಲೋ ತೂಕದ ಅಕ್ಕಿ, 3000 ರೂ. ಮೌಲ್ಯದ ಇಲೆಕ್ಟ್ರಾನಿಕ್ ತೂಕದ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.



ಕುಂದಾಪುರ: ಶಾಲೆಯಿಂದ ಬರುವ ಮಗುವಿಗಾಗಿ ಕಾಯುತಿದ್ದ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ : ಚಿನ್ನಾಭರಣ ಕಳವು 06.08.2022

 ಕುಂದಾಪುರ : ಶಾಲಾ ವಾಹನದಲ್ಲಿ ಮನೆಗೆ ಬರುತ್ತಿದ್ದ ಮಗುವಿಗಾಗಿ ರಸ್ತೆ ಸಮೀಪದಲ್ಲಿ ಕಾಯುತ್ತಾ ನಿಂತಿದ್ದ ಮಹಿಳೆಯ ಮೇಲೆ ದುಷ್ಕರ್ಮಿಯೋರ್ವ ಮಾರಣಾಂತಿವಾಗಿ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿ-ಹೆಸ್ಕುತ್ತೂರು ಎಂಬಲ್ಲಿ ನಡೆದಿದೆ.



ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ನಿವಾಸಿ ದೇವಕಿ (32 ವರ್ಷ) ಎಂಬವರೇ ಹಲ್ಲೆಗೆ ಒಳಗಾದವರು. ಶುಕ್ರವಾರ ಸಂಜೆಯ ವೇಳೆಯಲ್ಲಿತೆಕ್ಕಟ್ಟೆ- ದಬ್ಬೆಕಟ್ಟೆ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಂತು ಮಹಿಳೆಯೋರ್ವರು ತನ್ನ ಮಗುವಿಗಾಗಿ ಕಾಯುತ್ತಿದ್ದರು. ಈ ವೇಳೆಯಲ್ಲಿ ಬೈಕ್‌ ನಲ್ಲಿ ಬಂದ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಮಹಿಳೆಯ ಬಳಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.





ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ರಸ್ತೆಯಲ್ಲಿ ಅಪರಿಚಿತ ಬೈಕ್‌ವೊಂದು ಓಡಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ದೂರದಲ್ಲಿ ಬೈಕ್‌ ನಿಲ್ಲಿಸಿ ಬಂದು ಹಲ್ಲೆ ನಡೆಸಿ ನಂತರ ಎಸ್ಕೇಪ್‌ ಆಗಿರುವ ಸಾಧ್ಯತೆಯಿದೆ. ಇದೀಗ ಸ್ಥಳೀಯರು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.



ನಿತ್ಯವೂ ನೂರಾರು ಜನರು ದೂರದ ಊರುಗಳಲ್ಲಿರುವ ಶಾಲೆಗಳಿಗೆ ತೆರಳಿ ವಾಪಾಸಾಗುವ ಮಕ್ಕಳನ್ನು ಮನೆಗೆ ಕರೆದೊಯ್ಯಲು ರಸ್ತೆಯಲ್ಲಿ ಕಾಯುವ ಸ್ಥಿತಿಯಿದೆ. ಆದ್ರೀಗ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರೋದು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿದೆ.



ಕುಂಭಾಶಿ : ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಖಾಸಗಿ ಬಸ್ಸು 16.07.2022

 ಕುಂದಾಪುರ: ರಾಷ್ಟ್ರೀಯ ಹೆದ್ದಾರಿಯ ಹೊಂಡಗಳ ಪರಿಣಾಮವಾಗಿ ಬಸ್ ಒಂದು ಹೊಂಡಕ್ಕಿಳಿದು ಚಾಲಕನ ನಿಯಂತ್ರಣ ತಪ್ಪಿ ಸೀದಾ ಡಿವೈಡರ್ ಮೇಲೆ ಏರಿದ ಘಟನೆ ನಡೆದಿದೆ.




ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರ ಬೆನ್ನಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಂಡಗಳು ಇದೀಗ ಯಮಸ್ವರೂಪಿಯಾಗಲಾರಂಭಿಸಿವೆ.



ಸುಮಾರು ಎರಡು ಅಡಿ ಹೊಂಡಕ್ಕೆ ಬಸ್‌ ಇಳಿದ ಪರಿಣಾಮ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು 300 ಮೀಟರ್ ದೂರ ಡಿವೈಡರ್ ಮೇಲೆ ಚಲಿಸಿದ ಘಟನೆ ತಾಲೂಕಿನ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಶನಿವಾರ ನಡೆದಿದೆ.



ಮುಂಬೈನಿಂದ ಮಂಗಳೂರಿನತ್ತ ಸಾಗುತ್ತಿದ್ದ ಆನಂದ್ ಹೆಸರಿನ ಖಾಸಗಿ ಬಸ್ ಕುಂಭಾಸಿ ಸಮೀಪದ ಕೊರವಡಿ ಕ್ರಾಸ್ ಬಳಿ ಹೆದ್ದಾರಿ ಹೊಂಡಕ್ಕೆ ಬಸ್‌ ಟಯರ್ ಇಳಿದಾಗ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಸುಮಾರು 300 ಮೀಟರ್ ದೂರ ಡಿವೈಡರ್ ಏರಿ ಸಾಗಿದ್ದು, ಚಾಲಕನ ಜಾಗರುಕತೆಯಿಂದಾಗಿ ಪಲ್ಟಿಯಾಗುವುದು ತಪ್ಪಿದಂತಾಗಿದೆ. ಹೀಗೆ ಅಪಾಯದಲ್ಲಿ ಸಾಗಿದ ಬಸ್ ಕನ್ನುಕರೆ ಮಸೀದಿ ಎದುರು ಡಿವೈಡರ್ ಏರಿ ನಿಂತಿದೆ. ಬಸ್ಸಿನಲ್ಲಿ 40ಕ್ಕೂ ಅಧಿಕ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದ್ದು ಯಾವುದೇ ಅಪಾಯ ಸಂಭವಿಸಿಲ್ಲ.




ಏಷಿಯನ್ ಚಾಂಪಿಯನ್ ಶಿಪ್ 2022:-ಕುಂದಾಪುರ ಮೂಲದ ಇಬ್ಬರಿಗೆ ಬಂಗಾರದ ಪದಕ21-6-2022


ನಮ್ಮ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಹೆಮ್ಮೆಯ ಪ್ರತಿಭೆ ಸತೀಶ್ ಖಾರ್ವಿ ಮತ್ತು ಉಪೇಂದ್ರ ಕುಮಾರ್ ಭಾರತವನ್ನು ಪ್ರತಿನಿಧಿಸಿ 2 ಚಿನ್ನದ ಪದಕ ಹಾಗೂ 2 ಬೆಳ್ಳಿಯ ಪದಕ ಗಳಿಸುವುದರ ಮೂಲಕ ಪ್ರಥಮ ಸ್ಥಾನವನ್ನು ಮಡಿಲಿಗೇರಿಸಿಕೊಂಡಿದ್ದಾರೆ.



ನಂತರ ದ್ವಿತೀಯ ಸ್ಥಾನದಲ್ಲಿ ಇರಾನ್ ದೇಶದ ಅಮಿರ್ ರೇಝಾ ಹಾಗೂ ಉಪೇಂದ್ರ ಕುಮಾರ್ ತೃತೀಯ ಸ್ಥಾನವನ್ನು ಗಳಿಸಿಕೊಂಡಿದ್ದಾರೆ. ಅವರನ್ನು ರಾಷ್ಟ್ರಗೀತೆಯ ಮೂಲಕ ಗೌರವಿಸಲಾಯಿತು.



ಈ ಸ್ಪರ್ಧೆಯಲ್ಲಿ ಆಯ್ಕೆಯಾದ ಸತೀಶ್ ಖಾರ್ವಿಯವರು ಈ ಬಾರಿ ನ್ಯೂಜಿಲೆಂಡ್ ನಲ್ಲಿ ನಡೆಯುವ ಕಾಮಾನ್ ವೆಲ್ತ್ ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನ ಸ್ಪರ್ಧೆಯಲ್ಲಿ ಮತ್ತೊಮ್ಮೆ ಭಾರತವನ್ನು ಪ್ರತಿನಿಧಿಸಲಿದ್ದಾರೆ.


ಸತೀಶ್ ಖಾರ್ವಿಯವರ ಈ ಕ್ರೀಡಾಕ್ಷೇತ್ರದ ಸಾಧನೆ ಗುರುತಿಸುವ ಫಲವಾಗಿ ಜೂನ್ .22ರಂದು ವಿಜಯಪುರದಲ್ಲಿ ನಡೆಯುವ ಚೆನ್ನಮ್ಮ ವಿದ್ಯಾವರ್ಧಕ ಸಂಸ್ಥೆಯಿಂದ ಕೊಡಮಾಡುವ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ರಾಜ್ಯ ಮಟ್ಟದ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.




ಕುಂದಾಪುರ:-ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು 16-6-2022

 


ಕುಂದಾಪುರ:- ಮನೆಯ ಕಾಪಾಟಿನಲ್ಲಿದ್ದ ಚಿನ್ನಾಭರಣ ಕಳವಾಗಿದ್ದು, ಮನೆ ಕೆಲಸದಾಕೆ ಮೇಲೆ ಶಂಕೆ ವ್ಯಕ್ತಪಡಿಸಿ ಮನೆಯವರು ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ನರಸಿಂಹ ಗಾಣಿಗ ಎಂಬವರ ಮನೆಯಲ್ಲಿ ಉಡುಪಿ ಕೊರಂಗ್ರಪಾಡಿಯ ಮಂಜುಳಾ(21) ಎಂಬಾಕೆ ಮನೆಕೆಲಸ ಮಾಡುತ್ತಿದ್ದು, ಮೇ 25ರಂದು ಮಂಜುಳಾ ತನ್ನ ಮನೆಗೆ ಹೋಗಿ ಬರುವುದಾಗಿ ಹೇಳಿ ಹೋದವಳು ವಾಪಾಸ್ಸು ಬಂದಿರುವುದಿಲ್ಲ.ಮೇ 27ರಂದು ಮನೆಯ ಕಾಪಾಟು ನೋಡಿದಾಗ 28 ಗ್ರಾಂ ತೂಕದ 2 ಚಿನ್ನದ ಬಳೆ ನಾಪತ್ತೆಯಾಗಿರುವುದು ಕಂಡುಬಂತು.




ನಂತರ ಮನೆ ಕೆಲಸದಾಕೆ ಮಂಜುಳಾಳನ್ನು ವಿಚಾರಿಸಿದಾಗ ಸರಿಯಾಗಿ ಉತ್ತರಿಸಲಿಲ್ಲ ಎನ್ನಲಾಗಿದೆ. ಈ ಚಿನ್ನದ ಬಳೆಗಳನ್ನು ಮಂಜುಳಾ ಕಳವು ಮಾಡಿದ್ದು, ಆಕೆಯ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಳವಾದ ಚಿನ್ನದ ಬಳೆಗಳ ಒಟ್ಟು ಮೌಲ್ಯ ಸುಮಾರು 1,10,000 ರೂ. ಎಂದು ಅಂದಾಜಿಸಲಾಗಿದೆ.




ಬಾಳ್ಕುದ್ರು:-ನೂತನ ಶಾಲಾ ಕಟ್ಟಡ ಉದ್ಘಾಟಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ 10-6-2022

 


ಬಾಳ್ಕುದ್ರು : ನೂತನ ಶಾಲಾ ಕಟ್ಟಡ ಉದ್ಘಾಟನೆ ಇಂದು ಸರ್ಕಾರಿ. ಹಿರಿಯ. ಪ್ರಾಥಮಿಕ. ಶಾಲೆ. ಬಾಳ್ಕುದ್ರು ಹಂಗಾರಕಟ್ಟೆಯಲ್ಲಿ ನಡೆಯಿತು.


ಶಾಲಾ ಕಟ್ಟಡವನ್ನು ಮಾನ್ಯ ಶಾಸಕರು ಕೋಟ ಶ್ರೀನಿವಾಸ ಪೂಜಾರಿಯವರ ನೇತೃತ್ವದಲ್ಲಿ ಉದ್ಘಾಟನೆ ಗೊಂಡಿತು.



ಈ ಸಂದರ್ಭದಲ್ಲಿ ಚೇತನ. ಪ್ರೌಢಶಾಲಾ ಮುಖ್ಯಸ್ಥರಾದ ಗಣೇಶ್.ಜಿ, ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಕುಸುಮ ಪೂಜಾರಿ, ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ನ ನಾರಾಯಣ ಕೋಟ್ಯಾನ್, ಸಿ.ಆರ್.ಪಿ, ಅನುಪಮ, ಮಾನ್ಯ ಸಚಿವರಾದ ಶ್ರೀಯುತ ಶ್ರೀನಿವಾಸ ಪೂಜಾರಿಯವರು ಉಪಸ್ಥಿತರಿದ್ದರು.



ಸಮಾರಂಭದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದಂತಹ ಸುರೇಶ್ ಪೂಜಾರಿ ಮತ್ತು ಮಂಜುನಾಥ ಅವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಯುತ ಶ್ರೀ ಕಾಂತ್ ಸಾಮಂತ್ ನಿರೂಪಿಸಿ ವಂದಿಸಿದರು.




ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಶಾಲೆಯಲ್ಲಿ ಶ್ರಮದಾನ ಕಾರ್ಯಕ್ರಮ5-6-2022

 


ಬಾಳ್ಕುದ್ರು : ಇನ್ನೆರಡು ವರ್ಷಗಳಲ್ಲಿ ಶತಮಾನೋತ್ಸವವನ್ನು ಆಚರಿಸಿಕೊಳ್ಳಲಿರುವ ಸರಕಾರಿ. ಹಿರಿಯ. ಪ್ರಾಥಮಿಕ ಶಾಲೆ. ಬಾಳ್ಕುದ್ರುವಿನಲ್ಲಿ ಜೂನ್ 05ರ ವಿಶೇಷವಾಗಿ ವಿಶ್ವ ಪರಿಸರ ದಿನದ ಅಂಗವಾಗಿ ಶಾಲೆಯ ಸುತ್ತ ಮುತ್ತ ಶ್ರಮದಾನ ಮಾಡಲಾಯಿತು.



ಶಾಲೆಯ ಇಂದಿನ ವಿದ್ಯಾರ್ಥಿಗಳು ಮತ್ತು ಅಂದಿನ ಹಳೆ ವಿದ್ಯಾರ್ಥಿಗಳು ಮನೆಯಿಂದಲೇ ಬರುವಾಗ ಸ್ವಚ್ಚತೆ ಮಾಡಲು ಬೇಕಾಗುವ ಪರಿಕರಗಳನ್ನು ತಂದು ಶಾಲೆಯ ಸುತ್ತ ಮುತ್ತ ಪರಿಸರವನ್ನು ಸ್ವಚ್ಚಗೊಳಿಸಿದರು.



ಇವರ ಈ ಒಂದು ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸನೀಯ ಮಾತುಗಳನ್ನು ವ್ಯಕ್ತಪಡಿಸುವುದಲ್ಲದೆ ತಂಪು ಪಾನೀಯಗಳನ್ನು ನೀಡುವುದರ ಮೂಲಕ ಇನ್ನಷ್ಟು ಉತ್ತಮ ಕಾರ್ಯವನ್ನು ಮಾಡುವಂತೆ ಹುರಿದುಂಬಿಸಿದರು.


ಈ ಸಂದರ್ಭದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಶ್ರೀಯುತ ಶ್ರೀ ಕಾಂತ್ ಸಾಮಂತ್, ಶಾಲೆಯ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.




ಕುಂದಾಪುರ:-ಅಕ್ರಮ ಕೆಂಪು ಕಲ್ಲು ಗಣಿ ಮೇಲೆ ಅಧಿಕಾರಿಗಳ ದಾಳಿ ಗಣಿ ಮಾಲೀಕರಿಗೆ 80000 ರೂ. ದಂಡ5-6-2022

 


ಕುಂದಾಪುರ: ಆಲೂರು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಕೆಂಪು ಕಲ್ಲು ಗಣಿ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ, ಕಂದಾಯ ಇಲಾಖೆ ಆರ್ ಐ, ಗ್ರಾಮ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿ ಗಣಿ ಮಾಲೀಕರಿಗೆ 80000 ರೂ. ದಂಡ ವಿಧಿಸಿರುವ ಮಾಹಿತಿ ಲಭ್ಯವಾಗಿದೆ. 



ಇನ್ನು ಈ ವೇಳೆ ಆಲೂರಿನ ಉಳಿದ ಗಣಿ ಮಾಲೀಕರು, ಅಧಿಕಾರಿಗಳು ಬರುವ ಸುಳಿವು ತಿಳಿದು ಜಾಗ ಖಾಲಿ ಮಾಡಿದ್ದರು. 



ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಕುಮಾರಿ, ಕಂದಾಯ ಇಲಾಖೆ ವಂಡ್ಸೆ ವಲಯ ಕಂದಾಯ ನಿರೀಕ್ಷಕ ರಾಘವೇಂದ್ರ ದೇವಾಡಿಗ, ಗ್ರಾಮಕರಣಿಕ ಉದಯ ಅವರನ್ನೊಳಗೊಂಡ ತಂಡ ದಾಳಿ ನಡೆಸಿದ್ದು ಅಕ್ರಮ ಗಣಿ ಮಾಲೀಕರಿಗೆ ದಂಡ ವಿಧಿಸಿ ಕಲ್ಲುಕ್ವಾರಿ ಹೊಂಡ ಮುಚ್ಚಿ ಶಾಲಾ ಮಕ್ಕಳ ತಿರುಗಾಟಕ್ಕೆ ಅವಕಾಶ ನೀಡುವಂತೆ ತಾಕೀತು ಮಾಡಿದರು.




© all rights reserved
made with by templateszoo