ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ದೊಡ್ಡ ದೊಡ್ಡ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳ ತ್ಯಾಜ್ಯ ನೀರನ್ನು ಮಳೆ ನೀರು ಹರಿಯುವ ಚರಂಡಿಗಳಿಗೆ ಬಿಡುತ್ತಿರುವವರನ್ನು ಪತ್ತೆಹಚ್ಚಿದ್ದು ಆಯಾ ಕಟ್ಟಡಗಳ ಮಾಲಕರಿಗೆ ನೊಟೀಸ್ ನೀಡಲಾಗಿದೆ. ತಮ್ಮ ಕಟ್ಟಡದ ತ್ಯಾಜ್ಯ ನೀರನ್ನು ವೈಜ್ಞಾನಿಕವಾಗಿ ವಿಲೇ ಮಾಡಿಕೊಳ್ಳಲು ನೋಟಿಸ್ ನೀಡಿ ತಿಳುವಳಿಕೆ ನೀಡಲಾಗಿದ್ದರೂ, ಮಣಿಪಾಲ ಭಾಗದಲ್ಲಿ ನಗರಸಭೆಯ ನೋಟೀಸ್‌ಗೆ ಎಚ್ಚೆತ್ತುಕೊಳ್ಳದ ಕಟ್ಟಡ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವ ಸಲುವಾಗಿ ಪ್ರಾಯೋಗಿಕವಾಗಿ ಮಳೆ ನೀರು ಹರಿಯುವ ಚರಂಡಿಗಳಿಗೆ ತ್ಯಾಜ್ಯ ನೀರು ಬಿಡುತ್ತಿರುವ ಮೂಲವನ್ನು ಪರಿಶೀಲಿಸಿ ಎಂಡ್ ಕ್ಯಾಪ್ ಹಾಕಿಸಿ ದಂಡ ವಿಧಿಸಲಾಗಿದೆ.
ಮುಂದಿನ ದಿನಗಳಲ್ಲಿ ಇದೇ ರೀತಿ ಯಾವುದೇ ಕಟ್ಟಡ ಮಾಲಕರು ತಮ್ಮ ಕಟ್ಟಡದ ಕೊಳಚೆ ನೀರನ್ನು, ಮಳೆ ನೀರು ಹರಿಯುವ ಚರಂಡಿಗೆ ಬಿಡುತ್ತಿರುವುದು ಕಂಡು ಬಂದಲ್ಲಿ ದಂಡವನ್ನು ವಿಧಿಸಲಾಗುತ್ತದೆ. ಮಾತ್ರವಲ್ಲ ಜಲಮಾಲಿನ್ಯ ತಡೆ ಕಾಯ್ದೆ ಅನ್ವಯ ಕಾನೂನು ಕ್ರಮವನ್ನು ಜರುಗಿಸಿ, ಕಟ್ಟಡಗಳ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಲು ಕ್ರಮ ವಹಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ