ವಿಜಯಪುರ ಶಾಸಕ, ಹಿಂದು ಹುಲಿ ಎಂದೇ ಖ್ಯಾತಿ ಪಡೆದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿ ಆದೇಶ ಹೊರಡಿಸಲಾಗಿದೆ.
ರಾಜ್ಯಾಧ್ಯಕ್ಷರ ವಿರುದ್ಧ ಅವಹೇಳನ ಮತ್ತು ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರಿಂದ ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟನೆ ಮಾಡಲಾಗಿದೆ.
ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ನಾಲಿಗೆ ಹರಿಬಿಟ್ಟು ಅವರ ಬಗ್ಗೆ ಅವಹೇಳನವಾಗಿ ಮಾತನಾಡಿದ್ದರು. ಜೊತೆಗೆ, ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ್ದರು. ಹೀಗಾಗಿ, ಬಿಜೆಪಿ ಹೈಕಮಾಂಡ್‌ನಿಂದ ಶೋಕಾಸ್ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು.
ಅದಕ್ಕೆ ಉತ್ತರವನ್ನೂ ಕೊಟ್ಟಿದ್ದರು. ಇದೀಗ ದೆಹಲಿ ಬಿಜೆಪಿ ಹೈಕಮಾಂಡ್‌ಗೆ ಯತ್ನಾಳ್ ಅವರಿಗೆ ನೀಡಿದ್ದ ಶೋಕಾಸ್ ನೋಟಿಸ್ ನ ಉತ್ತರ ತೃಪ್ತಿದಾಯಕವಾಗಿರಲಿಲ್ಲ ಎಂದು ಶಾಸಕ ಯತ್ನಾಳ್ ಅವರನ್ನು ಉಚ್ಛಾಟನೆ ಮಾಡಲಾಗಿದೆ.
ಇನ್ನು ಅವರ ಶಾಸಕ ಸ್ಥಾನಕ್ಕೂ ಕುತ್ತು ಬರುತ್ತಾ ಎಂಬ ಪ್ರಶ್ನೆ ಶುರುವಾಗಿದೆ. ಶಾಸಕ ಸ್ಥಾನದಲ್ಲಿ ಅವರು ಸ್ವತಂತ್ರವಾಗಿ ಮುಂದುವರೆಯಬಹುದು. ಒಂದು ವೇಳೆ ಪಕ್ಷದ ಚಿಹ್ನೆಯಡಿ ಗೆದ್ದಿರುವುದು ತನಗೆ ಬೇಡವೆಂದು ರಾಜೀನಾಮೆ ಕೊಟ್ಟರೆ, ಶಾಸಕ ಸ್ಥಾನ ರದ್ದಾಗಿ ಪುನಃ ಚುನಾವಣೆಗೆ ಹೋಗಬಹುದು.
ಉಚ್ಛಾಟನೆ ಆದೇಶದಲ್ಲಿ ಏನಿದೆ?......
ಪಕ್ಷದ ಕೇಂದ್ರ ಶಿಸ್ತು ಸಮಿತಿಯು 2025 ಫೆಬ್ರವರಿ 10 ರಂದು ನೀಡಿದ್ದ ಶೋಕಾಸ್ ನೋಟಿಸ್‌ಗೆ ನಿಮ್ಮ ಪ್ರತಿಕ್ರಿಯೆಯನ್ನು ಪರಿಗಣಿಸಿದೆ ಮತ್ತು ಹಿಂದಿನ ಶೋಕಾಸ್ ನೋಟಿಸ್‌ಗಳಿಗೆ ಪ್ರತಿಕ್ರಿಯೆಯಾಗಿ ಉತ್ತಮ ನಡವಳಿಕೆ ಮತ್ತು ನಡವಳಿಕೆಯ ಭರವಸೆಗಳನ್ನು ನೀಡಿದ್ದರೂ ಸಹ, ನೀವು ಪಕ್ಷದ ಶಿಸ್ತಿನ್ನು ಪದೇ ಪದೇ ಉಲ್ಲಂಘಿಸುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದೆ. ಆದ್ದರಿಂದ, ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಅವಧಿಗೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಮತ್ತು ನೀವು ಇಲ್ಲಿಯವರೆಗೆ ಹೊಂದಿದ್ದ ಯಾವುದೇ ಪಕ್ಷದ ಹುದ್ದೆಯಿಂದ ನಿಮ್ಮನ್ನು ತೆಗೆದುಹಾಕಲಾಗಿದೆ ಎಂದು ಬಿಜೆಪಿ ಕೇಂದ್ರ ಶಿಸ್ತು ಸಮಿತಿಯ ಕಾರ್ಯದರ್ಶಿ ಓಂ ಪಾಠಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ