ಉಡುಪಿ: ರಾಜ್ಯದ ಬಳ್ಳಾರಿ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿರುವ ಹಿನ್ನೆಲೆ ಯಲ್ಲಿ ಉಡುಪಿ ಜಿಲ್ಲೆಯಲ್ಲೂ ಕೋಳಿ ಫಾರಂಗಳ ಮತ್ತು ಮಾಂಸದ ಅಂಗಡಿಗಳ ಮೇಲೆ ನಿಗಾ ಇಡಲು, ಆರೋಗ್ಯ ಮತ್ತು ಪಶು ಸಂಗೋಪನೆ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.
ಜಿಲ್ಲೆಯ 334 ಮಾಂಸದ (ಬಾಯ್ಲರ್) ಕೋಳಿ ಫಾರಂಗಳಲ್ಲಿ ಒಟ್ಟು 12.50 ಲಕ್ಷ ಕೋಳಿಗಳು, ಒಂದು ಮೊಟ್ಟೆ (ಲೇಯರ್) ಕೋಳಿ ಫಾರಂನಲ್ಲಿ 35,000 ಕೋಳಿಗಳು ಹಾಗೂ 2.50 ಲಕ್ಷ ಹಿತ್ತಲ ಕೋಳಿಗಳು ಇವೆ. ಜಿಲ್ಲೆಯಲ್ಲಿ ಇದುವರೆಗೆ ಹಕ್ಕಿಜ್ವರದ ಯಾವುದೇ ಪ್ರಕರಣಗಳು ವರದಿ ಯಾಗಿಲ್ಲ ಎಂದು ಅವರು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಕ್ಕಿಜ್ವರವು (ಹಕ್ಕಿಗಳಿಗೆ ಸಂಬಂಧಿಸಿದ) ವೈರಾಣುಗಳಿಂದ (ವೈರಸ್) ಉಂಟಾಗುತ್ತದೆ. ಅದು ಪ್ರಸ್ತುತ ಸೋಂಕು ತಗುಲಿದ ಹಕ್ಕಿಗಳಿಂದಾಗುವ ವಿಸರ್ಜನೆ, ಉಸಿರಾಟ ಕ್ರಿಯೆ ಮತ್ತು ರಕ್ತದಿಂದ ಹರಡುತ್ತದೆ ಎಂದು ಅವರು ವಿವರಿಸಿದ್ದಾರೆ.
ಕೋಳಿ ಸಾಕಾಣಿಕೆದಾರರಿಗೆ ಮುನ್ನೆಚ್ಚರಿಕೆ: ಕೋಳಿ ಸಾಕಾಣಿಕೆದಾರರು ಕೋಳಿ ಫಾರಂಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಸೂಕ್ತ ಔಷಧದಿಂದ ಫಾರಂಗಳನ್ನು ಸ್ಯಾನಿಟೈಸ್ ಮಾಡಬೇಕು. ಕೋಳಿಗಳ ಅಸಹಜ ಮರಣದ ಮಾಹಿತಿಯನ್ನು ತಕ್ಷಣ ಪಶುವೈದ್ಯರಿಗೆ ನೀಡಬೇಕು. ಸತ್ತ ಕೋಳಿಗಳ ಮರಣೋತ್ತರ ಪರೀಕ್ಷೆ ಮತ್ತು ಮಾದರಿಗಳನ್ನು ಪ್ರಯೋಗಾಲಯ ಪರೀಕ್ಷೆಗೆ ನೀಡಬೇಕು. ಕಾಡುಹಕ್ಕಿಗಳು ಮತ್ತು ವಲಸೆ ಹಕ್ಕಿಗಳು, ಹಿತ್ತಲ ಕೋಳಿ ಅಥವಾ ಫಾರಂ ಕೋಳಿಗಳ ಸಂಪರ್ಕಕ್ಕೆ ಬಾರದಂತೆ ಎಚ್ಚರ ವಹಿಸಬೇಕು. ಸತ್ತ ಕೋಳಿ ಗಳನ್ನು ಹಾಗೂ ಅವುಗಳ ಪುಕ್ಕ, ಹಿಕ್ಕೆ, ಒಳ ಅಂಗಾಂಗಗಳನ್ನು ಗುಂಡಿತೋಡಿ ಹೂಳಬೇಕು ಹಾಗೂ ಸರಕಾರಿ ಅಧಿಕಾರಿಗಳಿಗೆ ಭೇಟಿ ನೀಡಿ ಪರಿಶೀಲಿಸಲು ಅನುವು ಮಾಡಿಕೊಡಬೇಕು.
ಸಾರ್ವಜನಿಕರಿಗೆ ಮುನ್ನೆಚ್ಚರಿಕೆ: ವ್ಯಾದಿಗೊಳಗಾದ ಅಥವಾ ಆಕಸ್ಮಿಕವಾಗಿ ಮರಣ ಹೊಂದಿದ ಹಕ್ಕಿ ಗಳನ್ನು ಕೈಯಿಂದ ಮುಟ್ಟಬಾರದು. ಮನೆಯಲ್ಲಿ ಸೋಂಕು ತಗುಲಿದ ಹಕ್ಕಿಗಳ ಪುಕ್ಕಗಳನ್ನು ತೆಗೆಯ ಬಾರದು, ಕೊಲ್ಲಬಾರದು ಅಥವಾ ಕೈಯಿಂದ ಮುಟ್ಟಬಾರದು. ಹಕ್ಕಿಗಳು ವೈರಾಣು ಸೋಂಕನ್ನು ಹೊಂದಿರಬಹುದಾದ ಕಾರಣ ಮಕ್ಕಳು ಅಂತಹ ಹಕ್ಕಿಗಳನ್ನು ಸ್ಪರ್ಶ ಮಾಡುವುದಕ್ಕಾಗಲಿ, ಅವುಗಳೊಂದಿಗೆ ಆಟ ಆಡುವುದಕ್ಕಾಗಲಿ ಅಥವಾ ಸಾಗಿಸುವುದಕ್ಕಾಗಲಿ ಬಿಡಬಾರದು.
ಹಕ್ಕಿಗಳನ್ನು ಕೈಯಿಂದ ಮುಟ್ಟಿದರೆ, ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ತೊಳೆದುಕೊಂಡು ಶುಭ್ರಗೊಳಿಸಿಕೊಳ್ಳಬೇಕು. ಹಕ್ಕಿಗಳನ್ನು ವಿಶೇಷವಾಗಿ ಕೋಳಿ ಮರಿಗಳನ್ನು ಕೈಗಳಿಂದ ಮುಟ್ಟುವ ಸಂದರ್ಭ ಬಂದಾಗ ಮೂಗು ಮತ್ತು ಬಾಯಿಗೆ ವಸ್ತ್ರ/ ಬಟ್ಟೆಯ ಮುಸುಕು ಹಾಕಿಕೊಳ್ಳಬೇಕು. ಹಕ್ಕಿಗಳನ್ನು ಮುಟ್ಟಿದ ನಂತರ ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಉಜ್ಜಿಕೊಳ್ಳಬಾರದು.
ಕೋಳಿ ಮಾಂಸ ಮತ್ತು ಮೊಟ್ಟೆಗಳನ್ನು ತಿನ್ನಲು ಉಪಯೋಗಿಸುವ ಮುಂಚಿತವಾಗಿ ಅವನ್ನು ಚೆನ್ನಾಗಿ ಬೇಯಿಸಿ ತಿನ್ನಬೇಕು. ಕೋಳಿಯ ಕಚ್ಚಾ ಉತ್ಪನ್ನಗಳನ್ನು ತಿನ್ನಲು ಉಪಯೋಗಿಸಬಾರದು. ಹಕ್ಕಿಗಳ ಅಸಹಜ ಸಾವಿನ ವಿಷಯ ತಿಳದು ಬಂದರೆ ಕೂಡಲೇ ಸ್ಥಳೀಯ ಅಧಿಕಾರಿಗಳಿಗೆ ವರದಿ ಮಾಡಿ, ಸತ್ತ ಹಕ್ಕಿಗಳನ್ನು ವಿಲೇವಾರಿ ಮಾಡುವಾಗ ಎಚ್ಚರಿಕೆಯನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ