ಮಂಗಳೂರು, ಮಾ. 21: ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳು ಮಾ. 22 (ಶನಿವಾರ) ರಂದು ಕರೆ ನೀಡಿದ್ದ ರಾಜ್ಯ ಬಂದ್ ಗೆ ದಕ್ಷಿಣ ಕನ್ನಡ ಮತ್ತು ಕೆನರಾ ಬಸ್ ಮಾಲಕರ ಸಂಘಗಳು ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿವೆ. ಸಾರ್ವಜನಿಕರ ಹಿತದೃಷ್ಟಿ ಹಾಗೂ ವಿದ್ಯಾರ್ಥಿಗಳ ಪರೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಗಳು ತಿಳಿಸಿವೆ.
ಬಸ್ ಮಾಲಕರ ಸಂಘಗಳ ಅಧ್ಯಕ್ಷರುಗಳಾದ ಅಝೀಜ್ ಪರ್ತಿಪಾಡಿ (ದಕ್ಷಿಣ ಕನ್ನಡ) ಮತ್ತು ರಾಜವರ್ಮ ಬಳ್ಳಾಲ್ (ಕೆನರಾ) ಅವರು, ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ತಪ್ಪಿಸಲು ಹಾಗೂ ಪರೀಕ್ಷೆಗಳು ನಡೆಯುತ್ತಿರುವ ಕಾರಣದಿಂದ ಬಸ್ ಸಂಚಾರವನ್ನು ಎಂದಿನಂತೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
"ಕನ್ನಡ ಪರ ಸಂಘಟನೆಗಳ ಬೇಡಿಕೆಗಳಿಗೆ ನಮ್ಮ ಸಹಮತವಿದೆ. ಆದರೆ, ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ. ಆದ್ದರಿಂದ ಬಂದ್ ಗೆ ಬೆಂಬಲ ನೀಡುವುದಿಲ್ಲ," ಎಂದು ಅಝೀಜ್ ಪರ್ತಿಪಾಡಿ ಹೇಳಿದ್ದಾರೆ.
ರಾಜವರ್ಮ ಬಳ್ಳಾಲ್ ಅವರು, "ಬಂದ್ ಗೆ ಯಾವುದೇ ಸಂಘಟನೆಗಳು ನಮ್ಮನ್ನು ಕೇಳಿಕೊಂಡಿಲ್ಲ. ಸಾರ್ವಜನಿಕರಿಗೆ ಸಮಸ್ಯೆಯಾಗುವ ಕಾರಣದಿಂದ ಬಂದ್ ಮಾಡುವುದು ಸರಿಯಲ್ಲ" ಎಂದು ಪ್ರತಿಕ್ರಿಯಿಸಿದ್ದಾರೆ.
ಈ ನಿರ್ಧಾರದೊಂದಿಗೆ, ದಕ್ಷಿಣ ಕನ್ನಡ ಮತ್ತು ಕೆನರಾ ಬಸ್ ಮಾಲಕರ ಸಂಘಗಳು ಶನಿವಾರದಂದು ಎಂದಿನಂತೆ ಬಸ್ ಸಂಚಾರವನ್ನು ಮುಂದುವರೆಸಲಿವೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ