ಉಡುಪಿ: ಜಿಲ್ಲೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವಾ ಸೌಲಭ್ಯಗಳಿದ್ದರೂ ಪ್ರಸಕ್ತ ಸಾಲಿನಲ್ಲಿ ಈವರೆಗೆ 73 ಶಿಶು ಮರಣಗಳು ಸಂಭವಿಸಿವೆ. ಇದಕ್ಕೆ ಕಾರಣಗಳನ್ನು ಅರಿಯಲು ಉನ್ನತ ಮಟ್ಟದ ಸಮಿತಿಯನ್ನು ರಚಿಸಿ, ಅದರಿಂದ ಸಮಗ್ರ ವರದಿಯನ್ನು ಪಡೆದು ಶಿಶು ಮರಣದ ಸಂಖ್ಯೆಯನ್ನು ಕಡಿಮೆ ಗೊಳಿಸಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು.
ಮಂಗಳವಾರ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ನಡೆದ ಆರೋಗ್ಯ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಮಕ್ಕಳಿಗೆ ರೋಗ ನಿರೋಧಕ ಚುಚ್ಚು ಮದ್ದು ನೀಡುವ ಕಾರ್ಯ ಸಮರ್ಪಕ ರೀತಿಯಲ್ಲಿ ನಡೆಯಬೇಕು. ಯಾವುದೇ ಮಗು ಲಸಿಕೆಯಿಂದ ವಂಚಿತ ಆಗದಂತೆ ನೋಡಿಕೊಳ್ಳಬೇಕು. ಹೆಪಟೈಟಿಸ್ ಬಿ ಚುಚ್ಚು ಮದ್ದುಗಳನ್ನು ಮಗು ಜನಿಸಿದ 24 ಗಂಟೆಯ ಒಳಗೆ ನೀಡಬೇಕು. ಆದರೆ ಕೆಲವು ಖಾಸಗಿ ಆಸ್ಪತ್ರೆಗಳಲ್ಲಿ ನೀಡದೇ ಇರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನಿಗಾ ವಹಿಸಿ ಕ್ರಮಕೈಗೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಕ್ಷಯರೋಗ ತಪಾಸಣೆಗಾಗಿ ಈವರೆಗೆ 47,590 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದೆ. ಇವುಗಳಲ್ಲಿ 1414 ಪ್ರಕರಣಗಳು ಕಂಡು ಬಂದಿವೆ. ಇವರಿಗೆ ಅಗತ್ಯವಿರುವ ಚಿಕಿತ್ಸೆಯನ್ನು ನೀಡಲಾಗು ತ್ತಿದೆ ಎಂದ ಜಿಲ್ಲಾಧಿಕಾರಿ, ಕ್ಷಯರೋಗಿಗಳಿಗೆ ಅಗತ್ಯವಿರುವ ಪೌಷ್ಠಿಕ ಆಹಾರಗಳನ್ನು ಒದಗಿಸಲು ಸಹಾಯ ಧನವನ್ನು ಸ್ಥಳೀಯ ಗ್ರಾಮ ಪಂಚಾಯತಿಗಳು ನೀಡಬೇಕು. ನಿಕ್ಷಯ್ ಪೋಷಣಾ ಯೋಜನೆಯ ಸೌಲಭ್ಯಗಳನ್ನು ಒದಗಿಸ ಬೇಕು.ಜಿಲ್ಲೆಯಲ್ಲಿ ಕ್ಷಯರೋಗ ನಿರ್ಮೂಲನೆಗೆ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ಹಾವು ಕಚ್ಚಿ 3 ಸಾವು: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ 3717 ನಾಯಿ ಕಚ್ಚಿದ ಹಾಗೂ 70 ಹಾವು ಕಚ್ಚಿದ ಪ್ರಕರಣಗಳು ವರದಿಯಾಗಿದ್ದು, ಹಾವು ಕಚ್ಚಿದ ಮೂವರು ಮರಣಹೊಂದಿದ್ದಾರೆ. ನಾಯಿಯ ಸಂತಾನ ಹರಣ ಶಸ್ತ್ರ ಚಿಕಿತ್ಸೆಯನ್ನು ಆದ್ಯತೆಯ ಮೇಲೆ ಕೈಗೊಂಡು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಬೇಕು. ರೇಬೀಸ್ ಹೊಂದಿರುವ ನಾಯಿಗಳು ಮರಣ ಹೊಂದಿದ್ದಲ್ಲಿ ಹಾಗೂ ಹುಚ್ಚು ನಾಯಿ ಕಡಿತದಿಂದ ಮರಣ ಹೊಂದಿದ ಇತರೆ ಜಾನುವಾರು ಗಳನ್ನು ಆಳವಾಗಿ ಗುಂಡಿ ತೆಗೆದು ಹೂಳುವಂತೆ ಸಾರ್ವಜನಿಕರು ನೋಡಿಕೊಳ್ಳಬೇಕು. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು ಎಂದರು.
ಮಂಗನ ಕಾಯಿಲೆ ಬಗ್ಗೆ ಎಚ್ಚರ: ಹೆಚ್ಚು ಉಷ್ಣಾಂಶ ವಾತಾವರಣ ಇರುವ ಬೇಸಿಗೆಯ ಇಂದಿನ ಸಂದರ್ಭ ಗಳಲ್ಲಿ ಸಾಮಾನ್ಯವಾಗಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ. ಪಶ್ಚಿಮ ಘಟ್ಟದ ಕಾಡಂಚಿನಲ್ಲಿ ವಾಸಿಸುವ ಜನರಿಗೆ ಈ ಕಾಯಿಲೆ ಹರಡುವ ಬಗ್ಗೆ ಅರಿವು ಮೂಡಿಸಬೇಕು. ಗ್ರಾಮ ಪಂಚಾಯತಿ ಮಟ್ಟದಲ್ಲಿ ಪಿಡಿಓ, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸಮನ್ವಯ ಸಮಿತಿಯನ್ನು ರಚಿಸಿಕೊಂಡು ಸಭೆಗಳನ್ನು ನಡೆಸಿ, ರೋಗ ಹರಡದಂತೆ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಹಕ್ಕಿಜ್ವರ ಪ್ರಕರಣಗಳಿಲ್ಲ: ಜಿಲ್ಲೆಯಲ್ಲಿ ಈವರೆಗೆ ಯಾವುದೇ ರೀತಿಯ ಹಕ್ಕಿ ಜ್ವರದ ಪ್ರಕರಣ ಗಳು ಕಂಡುಬಂದಿಲ್ಲ. ಆದರೆ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಪ್ರಕರಣಗಳು ಕಂಡುಬಂದಿವೆ. ಜನರಲ್ಲಿ ಹಕ್ಕಿ ಜ್ವರದ ಕುರಿತಂತೆ ಹಾಗೂ ಅದರ ನಿಯಂತ್ರಣದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಬೇಕು. ಪಶುಪಾಲನಾ ಇಲಾಖೆಯ ಅಧಿಕಾರಿಗಳು, ಕೋಳಿ ಫಾರಂಗಳಿಗೆ ಆಗಾಗ್ಗೆ ಭೇಟಿ ನೀಡಿ, ಪರಿಶೀಲನೆ ಮಾಡಬೇಕು. ಅದೇ ರೀತಿ ಹಂದಿಜ್ವರದ ಬಗ್ಗೆಯೂ ಸಹ ಕ್ರಮವಹಿಸಬೇಕು ಎಂದರು.
ಡೆಂಗಿ ನಿಯಂತ್ರಣಕ್ಕೆ ಕ್ರಮ ಪ್ರಾರಂಭಿಸಿ: ಜಿಲ್ಲೆಯಲ್ಲಿ ಮಳೆ ಪ್ರಾರಂಭ ವಾಗುತಿದ್ದಂತೆ ಮಳೆಯ ನೀರು ಎಲ್ಲೆಂದರಲ್ಲಿ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ, ಮಲೇರಿಯಾ ಹಾಗೂ ಡೆಂಗಿ ಪ್ರಕರಣಗಳು ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಈಗಿನಿಂದಲೇ ಇವುಗಳ ನಿಯಂತ್ರಣಕ್ಕೆ ತೆಗೆದುಕೊಳ್ಳ ಬಹುದಾದ ಕ್ರಮಗಳ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಅರಿವು ಮೂಡಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶ್ರೀರಾಮರಾವ್, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಡಿಎಸ್‌ಓ ಡಾ. ನಾಗರತ್ನ, ಜಿಲ್ಲಾ ಏಡ್ಸ್ ರೋಗ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು, ಜಿಲ್ಲಾ ಸರ್ಜನ್ ಡಾ. ಹೆಚ್ .ಅಶೋಕ್, ಕೆಎಂಸಿಯ ತಜ್ಞ ವೈದ್ಯರಾದ ಡಾ. ಲೆಸ್ಸಿ ಲೂಯಿಸ್, ಡಾ. ಶಂಕರ ಬಕ್ಕಣ್ಣ, ಡಾ. ರಾಜೇಶ್ವರಿ, ಡಾ. ಯಶ್ ಅಲೋಕ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕು ಆರೋಗ್ಯಾಧಿಕಾರಿಗಳು ಹಾಗೂ ತಜ್ಞ ವೈದ್ಯರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ