ಉಡುಪಿ : ನಗರದಲ್ಲಿ ಕಾರ್ಯಾಚರಿಸುತ್ತಿರುವ ರಿಕ್ಷಾ ನಿಲ್ದಾಣಗಳಿಗೆ ನಿಯಮಾವಳಿ ರಚನೆ, ಮೂಲಭೂತ ಸೌಕರ್ಯ ಹಾಗೂ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ಕುರಿತು ಅಭಿಪ್ರಾಯ ಸಂಗ್ರಹಿಸುವ ನಿಟ್ಟಿನಲ್ಲಿ ಉಡುಪಿ ನಗರಸಭೆ ವತಿಯಿಂದ ರಿಕ್ಷಾ ಚಾಲಕರ ಸಭೆ ಇಂದು ನಗರಸಭೆಯ ಸತ್ಯಮೂರ್ತಿ ಸಭಾಂಗಣದಲ್ಲಿ ನಡೆಯಿತು.
ರಿಕ್ಷಾ ಚಾಲಕರ ಸಂಘದ ಪದಾಧಿಕಾರಿ ಶಿವಾನಂದ ಮೂಡಬೆಟ್ಟು ಮಾತನಾಡಿ, ಗ್ರಾಮೀಣ ಪ್ರದೇಶದ ವಲಯ ಎರಡರ ರಿಕ್ಷಾಗಳು ತುರ್ತು ಬಾಡಿಗೆಗೆ ನಗರಕ್ಕೆ ಬಂದರೆ ಪೊಲೀಸರು ದಂಡ ವಿಧಿಸುತ್ತಿದ್ದಾರೆ. ಸಿಎನ್‌ಜಿ ತುಂಬಿಸಲು ನಗರಕ್ಕೆ ಬರಲು ತೊಂದರೆ ಆಗುತ್ತದೆ. ವಲಯ 2ರ ರಿಕ್ಷಾಗಳು ಹಲವು ವರ್ಷಗಳಿಂದ ಇಲ್ಲೇ ಇದ್ದವು. ಇದೀಗ ನಗರಕ್ಕೆ ಬರಬಾರದು ಎಂಬುದಾಗಿ ದೌರ್ಜನ್ಯ ಮಾಡಲಾಗುತ್ತಿದೆ. ಈ ಬಗ್ಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಪದಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಮಾತನಾಡಿ, ಉಡುಪಿ ನಗರಸಭೆ ವ್ಯಾಪ್ತಿಯಲ್ಲಿ 2000ರವರೆಗೆ 40 ರಿಕ್ಷಾ ನಿಲ್ದಾಣಕ್ಕೆ ಅನುಮತಿ ನೀಡಿ, ಒಂದೊಂದು ನಿಲ್ದಾಣದಲ್ಲಿ ಇಂತಿಷ್ಟು ರಿಕ್ಷಾಗಳಿಗೆ ಮಿತಿ ನಿಗದಿಪಡಿಸಲಾಗಿತ್ತು. ಇದೀಗ ರಿಕ್ಷಾಗಳ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಅದರ ನಂತರ ಅಧಿಕೃತ ಯಾವುದೇ ನಿಲ್ದಾಣಗಳು ಆಗಿಲ್ಲ. ಸದ್ಯ 60 ನಿಲ್ದಾಣ ಗಳಿದ್ದು, ಇದರಲ್ಲಿ 20 ಅನಧಿಕೃತ ಇದೆ ಎಂದರು.
2024ರ ಫೆ.7ರವರೆಗೆ ವಲಯ ಒಂದರಲ್ಲಿ 3395 ರಿಕ್ಷಾಗಳಿದ್ದು, ಈ ಸಂಖ್ಯೆಯ ರಿಕ್ಷಾಗಳಿಗೆ ನಿಲ್ಲಲು ಇಲ್ಲಿ ನಿಲ್ದಾಣಗಳೇ ಇಲ್ಲ. ವಲಯ 2ರ ಗ್ರಾಮೀಣ ಪ್ರದೇಶದಲ್ಲಿ 3643 ರಿಕ್ಷಾಗಳಿವೆ. ರಿಕ್ಷಾ ಚಾಲಕ ಮಾಲಕರ ಒಟ್ಟು ಏಳು ಯೂನಿಯನ್ ಗಳು ಆಗಿವೆ. ಇದರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಸಭೆಯಲ್ಲಿ ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಮಾತನಾಡಿ, ರಿಕ್ಷಾ ಚಾಲಕರ ಎಲ್ಲ ಸಮಸ್ಯೆಗಳನ್ನು ಗಮನದಲ್ಲಿರಿಸಿ ಕೊಂಡು ಚಾಲಕರ ವೃತ್ತಿಗೆ ನ್ಯಾಯ ಒದಗಿಸಿಕೊಡುವ ರೀತಿಯಲ್ಲಿ ಮತ್ತು ಜನರಿಗೆ ಉತ್ತಮ ಸೇವೆ, ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಎಲ್ಲರ ಅಭಿಪ್ರಾಯ ಪಡೆದು ವಾರದೊಳಗೆ ಸೂಕ್ತ ನಿರ್ಣಯವನ್ನು ತೆಗೆದುಕೊಳ್ಳಲಾಗುವುದು. ನಗರಸಭೆ ತೆಗೆದುಕೊಳ್ಳುವ ಈ ನಿರ್ಣಯಕ್ಕೆ ಎಲ್ಲ ರಿಕ್ಷಾ ಚಾಲಕರು ಬದ್ಧರಾಗಿರಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಪೌರಾಯುಕ್ತ ಡಾ.ಉದಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತಿ ಇದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ