ಇಡೀ ದೇಶದ ಗಮನ ಸೆಳೆದಿದ್ದ ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಹೊರಬಿದ್ದಿದ್ದು, ಬರೋಬ್ಬರಿ 48 ಕ್ಷೇತ್ರಗಳಲ್ಲಿ ಬಿಜೆಪಿಯು ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.
27 ವರ್ಷಗಳ ಬಳಿಕ ಬಿಜೆಪಿಗೆ ದಿಲ್ಲಿಯ ಮತದಾರು ಆಶೀರ್ವದಿಸಿದ್ದು, ಸತತ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿದ್ದ ಆಮ್ ಆದ್ಮಿ ಪಕ್ಷದ ಕನಸು ಭಗ್ನವಾಗಿದೆ.
ಚುನಾವಣಾ ಆಯೋಗದ ಮಾಹಿತಿ ಪ್ರಕಾರ, ಬಿಜೆಪಿ 48 ಹಾಗೂ ಆಮ್ ಆದ್ಮಿ ಪಕ್ಷವು 22 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಆಮ್ ಆದ್ಮಿ ಪಕ್ಷದ ಘಟಾನುಘಟಿ ನಾಯಕರಾದ ಅರವಿಂದ್ ಕೇಜ್ರಿವಾಲ್ ಅವರು ನವದೆಹಲಿಯ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ್ವೇಶ್ ಸಾಹಿಬ್ ವರ್ಮಾ ವಿರುದ್ಧ ಪರಾಭವಗೊಂಡರು. ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಹೀನಾಯ ಸೋಲುಂಡರೆ, ಆಪ್ನ ಅತಿಶಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಸತತ ಮೂರನೆ ಬಾರಿ ಶೂನ್ಯ ಸಂಪಾದನೆ ಮಾಡಿದೆ.
ಪರ್ವೇಶ್ ವರ್ಮಾ ಸೇರಿದಂತೆ 4-5 ಜನ ಬಿಜೆಪಿ ನಾಯಕರು ಸಿಎಂ ರೇಸ್ನಲ್ಲಿದ್ದಾರೆ. ಫೆ.5ರಂದು 70 ವಿಧಾನಸಭೆಗಳಿಗೆ ಮತದಾನ ನಡೆದಿದ್ದು, ಇಂದು ಫಲಿತಾಂಶ ಪ್ರಕಟವಾಗಿದೆ. ಅತ್ತ ಉತ್ತರ ಪ್ರದೇಶದ ಮಿಲ್ಕಿಪುರ್ ವಿಧಾನಸಭೆಯ ಉಪಚುನಾವಣೆಯಲ್ಲೂ ಬಿಜೆಪಿ ಗೆದ್ದು ಬೀಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ