ಕುಂದಾಪುರ, ಫೆಬ್ರವರಿ 10: ಕುಂದಾಪುರ ತಾಲೂಕಿನ ಕಟ್ ಬೇಲ್ತೂರು ಗ್ರಾಮದಲ್ಲಿ ಕ್ರಿಕೆಟ್ ಪಂದ್ಯಾವಳಿಯ ವೇಳೆ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಸತೀಶ್ (41) ಎಂಬುವವರು ನೀಡಿದ ದೂರಿನ ಮೇರೆಗೆ ಅಕ್ಷಯ್ ಎಂಬಾತನ ವಿರುದ್ಧ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ದೂರಿನಲ್ಲಿ ಏನಿದೆ?
ದಿನಾಂಕ 09/02/2025 ರಂದು ಸಂಜೆ 6:00 ಗಂಟೆಗೆ ಸತೀಶ್ ಅವರು ತಮ್ಮ ಅಂಗಡಿ ಬಳಿ ಕುಳಿತು ಸಮೀಪದ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯವನ್ನು ನೋಡುತ್ತಿದ್ದರು. ಈ ವೇಳೆ ಅವರ ಪರಿಚಯದ ಅಕ್ಷಯ್ ಎಂಬಾತನು ಅಲ್ಲಿಗೆ ಬಂದು, "ನಾನು ಕ್ರಿಕೆಟ್ ಪಂದ್ಯದಲ್ಲಿ ಬೌಲಿಂಗ್ ಮಾಡಲು ಅವಕಾಶ ಕೊಡಬಾರದು ಎಂದು ಹೇಳಿದ್ದೀಯಂತೆ. ನಿನ್ನನ್ನು ಕೊಂದು ಹಾಕುತ್ತೇನೆ" ಎಂದು ಬೆದರಿಕೆ ಹಾಕಿದ್ದಾನೆ. ಬಳಿಕ ತನ್ನ ಕೈಯಲ್ಲಿದ್ದ ಮರದ ಕೋಲಿನಿಂದ ಸತೀಶ್ ಅವರ ಬಲ ಕೆನ್ನೆಗೆ ಮತ್ತು ಬಲಗಾಲಿನ ಮೊಣಗಂಟಿಗೆ ಹಲ್ಲೆ ಮಾಡಿದ್ದಾನೆ. ಅಲ್ಲದೆ, ಕಾಲಿನಿಂದ ತುಳಿದು ಕೈಯಿಂದ ಹೊಡೆದು ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ
ಸತೀಶ್ ಅವರನ್ನು ಹಲ್ಲೆ ಮಾಡುತ್ತಿರುವುದನ್ನು ನೋಡಿದ ಸಮೀಪದಲ್ಲಿ ಆಟವಾಡುತ್ತಿದ್ದವರು ಓಡಿ ಬಂದು ಅಕ್ಷಯ್‌ನನ್ನು ತಡೆದಿದ್ದಾರೆ. ಈ ವೇಳೆ ಅಕ್ಷಯ್ ಬೆದರಿಕೆ ಹಾಕಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ಪ್ರಕರಣ ದಾಖಲು
ಸತೀಶ್ ಅವರ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 06/2025 ಕಲಂ: 115 (2), 118 (1), 352, 351 (2) BNS ರಂತೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ