ರಾಜ್ಯ ಸರಕಾರ ಕರ್ನಾಟಕ ಮುನ್ಸಿಪಲ್ ಕಾಯ್ದೆ 2025ನ್ನು ಜಾರಿಗೊಳಿಸಿದ್ದು, ಇದರಂತೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 2024ರ ಸೆ.10ರೊಳಗೆ ನಿರ್ಮಾಣಗೊಂಡ ಅನಧಿಕೃತ ಲೇಔಟ್(ಬಡಾವಣೆ), ಸೈಟು ಹಾಗೂ ಮನೆಗಳಿಗೆ ಬಿ ಖಾತಾ ತೆರೆದು ನೋಂದಣಿ ಹಾಗೂ ವ್ಯವಹಾರಕ್ಕೆ ರಾಜ್ಯ ಸರಕಾರ ಕಾಯಿದೆ ತಿದ್ದುಪಡಿ ಮೂಲಕ ಅವಕಾಶ ಕಲ್ಪಿಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ತಿಳಿಸಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ತಿಂಗಳೊಳಗೆ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದ್ದು, ನಂತರ ಯಾವುದೇ ಅನಧಿಕೃತ ಲೇಔಟ್, ಸೈಟು, ಮನೆಗಳಿಗೆ ನಗರಾ ಭಿವೃದ್ಧಿ ಪ್ರಾಧಿಕಾರದ ಅಂಗೀಕಾರ, ಪರವಾನಗಿ ಸಿಗುವುದಿಲ್ಲ. ಅದನ್ನು ಅಧಿಕೃತಗೊಳಿಸುವುದಿಲ್ಲ. ದಂಡನೆಗೆ ಸಂಬಂಧಿತ ಅಧಿಕಾರಿಗಳು, ಖಾತೆ ಮಾಡಿಕೊಟ್ಟವರು ಒಳಗಾಗಲಿದ್ದಾರೆ ಎಂದರು.
ಉಡುಪಿ ನಗರಸಭೆ, ಕುಂದಾಪುರ, ಕಾರ್ಕಳ, ಕಾಪು ಪುರಸಭೆ, ಸಾಲಿಗ್ರಾಮ, ಬೈಂದೂರು ಪಟ್ಟಣ ಪಂಚಾಯಿತಿ ವ್ಯಾಪ್ತಿ ಯಲ್ಲಿ ಆಂದೋಲನ ರೂಪದಲ್ಲಿ ಬಿ ಖಾತಾ ಪ್ರಕ್ರಿಯೆ ನಡೆಸುವಂತೆ ತಿಳಿಸಲಾಗಿದ್ದು, ಅನಧಿಕೃತ ಮನೆ, ನಿವೇಶನ, ಬಡಾವಣೆ ಹೊಂದಿದವರು ಶೇ. 200ರಷ್ಟು ತೆರಿಗೆ, ದಂಡ ಪಾವತಿಸಬೇಕು. ಮಾಲೀಕತ್ವ ಸಾಬೀತು ಸಹಿತ ಋಣಭಾರ, ಆಸ್ತಿ ತೆರಿಗೆಯ ದಾಖಲೆ ಪತ್ರಗಳನ್ನು ಸಲ್ಲಿಸಬೇಕು ಎಂದರು.
ಈಗ ಒಂದು ವರ್ಷ ಮಾತ್ರ ಶೇ.200ರಷ್ಟು ದಂಡ ತೆರಿಗೆ ಪಾವತಿಸ ಬೇಕಾಗಿದ್ದು, ಮುಂದಿನ ವರ್ಷದಿಂದ ವಾಮೂಲು ತೆರಿಗೆ ಪಾವತಿಸಬೇಕು ಎಂದು ಅವರು ಮಾಹಿತಿ ನೀಡಿದರು.
ಸದ್ಯದ ಮಾಹಿತಿಯಂತೆ ಉಡುಪಿ ಜಿಲ್ಲೆಯಲ್ಲಿ 5,849 ಅನಧಿಕೃತ ಆಸ್ತಿಗಳಿದ್ದು, ಇವುಗಳಿಗೆ ಬಿಖಾತೆ ಮಾಡಲು ದುಪ್ಪಟ್ಟು ತೆರಿಗೆ ಪಾವತಿಸ ಬೇಕಿದೆ. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ 1,546, ಕಾಪು: 2,784, ಕುಂದಾಪುರ: 702, ಕಾರ್ಕಳ: 152, ಸಾಲಿಗ್ರಾಮ: 336, ಬೈಂದೂರು: 329 ಅನಧಿಕೃತ ಆಸ್ತಿಗಳಿರುವ ಮಾಹಿತಿ ಇದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸದ್ಯ ನಗರ ಸ್ಥಳೀಯ ಸಂಸ್ಥೆಗಳಿಗೆ ಇದನ್ನು ಜಾರಿ ಮಾಡಲಾಗಿದ್ದು, ಗ್ರಾಮೀಣ ಭಾಗದವರಿಗೆ (ಗ್ರಾಪಂ ವ್ಯಾಪ್ತಿ) ಶೀಘ್ರವೇ ಬಿ ಖಾತಾ ಜಾರಿಗೊಳಿಸುವ ಸೂಚನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ ಎಂದೂ ಡಾ.ವಿದ್ಯಾಕುಮಾರಿ ತಿಳಿಸಿದರು.
ಮೈಕ್ರೊ ಫೈನಾನ್ಸ್: 30ದಿನದೊಳಗೆ ನೋಂದಣಿ
ಮೈಕ್ರೋ ಫೈನಾನ್ಸ್ ಅಧ್ಯಾದೇಶ ರಾಜ್ಯದಲ್ಲಿ ಜಾರಿಗೆಯಾಗಿದ್ದು ಮೈಕ್ರೋ ಫೈನಾನ್ಸ್‌ಗಳು 30ದಿನದೊಳಗೆ ನೋಂದಣಿ ಮಾಡಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅವರಿಗೆ ಯಾವುದೇ ವ್ಯವಹಾರ ಮಾಡಲು ಅವಕಾಶವಿಲ್ಲ. ಜಿಲ್ಲಾಧಿಕಾರಿ ಕಚೇರಿ ನೋಂದಣಿ ಪ್ರಾಧಿಕಾರವಾಗಿದೆ. ರಿಸರ್ವ್ ಬ್ಯಾಂಕಿನಿಂದ ಪರವಾನಿಗೆ ಪಡೆದ ಸಂಸ್ಥೆ ಸಹ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೊಸ ಅಧ್ಯಾದೇಶದಲ್ಲಿ ಪೊಲೀಸರಿಗೆ ಹೆಚ್ಚಿನ ಅಧಿಕಾರ ನೀಡಿದ್ದು ಕಾನೂನು ಪ್ರಕಾರ ಕ್ರಿಮಿನಲ್ ಮೊಕದ್ದಮೆ ಹೂಡಲು ಅವರಿಗೆ ಅವಕಾಶ ನೀಡಲಾಗಿದೆ. ಬಂಧಿಸಲು ಸಹ ಅವಕಾಶವಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಮೈಕ್ರೋ ಫೈನಾನ್ಸ್ ವಿರುದ್ಧ ಉಡುಪಿ ಜಿಲ್ಲೆಯಲ್ಲಿ ಎರಡು ಪ್ರಕರಣ ದಾಖಲಾಗಿವೆ. ಎರಡೂ ಉಡುಪಿಯಲ್ಲಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಿರುದ್ಧ ಒಂದು ಪ್ರಕರಣ ದಾಖಲಾಗಿದೆ ಎಂದು ಅವರು ಹೇಳಿದರು..
ರಾತ್ರಿ 10ರ ಬಳಿಕ ಮೈಕ್ ಬಳಸುವಂತಿಲ್ಲ
ಸುಪ್ರೀಂ ಕೋರ್ಟಿನ ಆದೇಶದಂತೆ ರಾತ್ರಿ 10ರ ಬಳಿಕ ಮೈಕ್ ಬಳಸುವಂತಿಲ್ಲ. ಕೋಳಿ ಅಂಕ ಒಂದೂವರೆ ವರ್ಷದಿಂದ ನಿಂತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಕ್ರಮಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಆರಾಧನೆ ದೃಷ್ಟಿಯಿಂದ ಅನುಮತಿ ಪಡೆದು ಸಾಂಪ್ರದಾಯಿಕ ರೀತಿಯಲ್ಲಿ ಕೋಳಿ ಅಂಕ ಮಾಡಬಹುದು. ಆದರೆ ಜೂಜು ಸಲ್ಲದು ಎಂದು ಜಿಲ್ಲಾಧಿಕಾರಿ ಡಾ.ವಿದ್ಯಾಕುಮಾರಿ ಹೇಳಿದರು.
ಯಕ್ಷಗಾನ ಪ್ರದರ್ಶನದ ವೇಳೆಯೂ ನಿಗದಿತ ಅವಧಿ ಬಳಿಕ ಸಾರ್ವಜನಿಕರಿಗೆ ತೊಂದರೆಯಾಗದಂತೆ ಪ್ರದರ್ಶನ ನಡೆಸಬಹುದು. ಈಗ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಸಮೀಪಿಸುತಿರುವುದರಿಂದ ಎಲ್ಲರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ