ಬ್ರಹ್ಮಾವರ: ಫೆಬ್ರವರಿ 24 (ಉಡುಪಿ ಫಸ್ಟ್ ವರದಿ): ಬ್ರಹ್ಮಾವರ ಸಮೀಪದ ಚಾಂತಾರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಓಮಿನಿ ಕಾರು ಪಲ್ಟಿಯಾಗಿ ಎಂಟು ಮಂದಿಗೆ ಗಾಯಗಳಾಗಿವೆ.
ನಿನ್ನೆ ರಾತ್ರಿ 11:30 ರ ಸುಮಾರಿಗೆ ಈ ದುರ್ಘಟನೆ ನಡೆದಿದೆ. ಮಂಗಳೂರಿನ ಬಳಕುಂಜೆ ಗ್ರಾಮದ ಮುಸ್ತಾಫ್ (41) ಅವರು ತಮ್ಮ ಕುಟುಂಬ ಸದಸ್ಯರಾದ ನೌಲತ್, ಜುಲ್ಪಿಯಾ, ನೋಮನ್, ನೈಮುದ್ಧೀನ್, ಇರ್ಫಾನ್, ಇರ್ಷಾದ್ ಮತ್ತು ಆಸೀಫ್ ರವರನ್ನು ತಮ್ಮ ಮಾರುತಿ ಓಮಿನಿ ಕಾರಿನಲ್ಲಿ ಕುಂದಾಪುರದಿಂದ ಉಡುಪಿ ಕಡೆಗೆ ಚಲಾಯಿಸುತ್ತಿದ್ದರು. ಚಾಂತಾರು ಗ್ರಾಮದ ಬ್ರಹ್ಮಾವರ ಆಶ್ರಯ ಹೋಟೆಲ್ ಬಳಿ ಡಿವೈಡರ್ ತಲುಪುವಾಗ, ಉಡುಪಿಯಿಂದ ಬ್ರಹ್ಮಾವರದ ಕಡೆಗೆ ಬರುತ್ತಿದ್ದ ಮತ್ತೊಂದು ಕಾರು (KA-20-ME-1850) ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಡಿವೈಡರ್‌ನಲ್ಲಿ "U" ಟರ್ನ್ ಮಾಡಲು ರಸ್ತೆಯ ಬಲಕ್ಕೆ ತಿರುಗಿತು. ಪರಿಣಾಮವಾಗಿ, ಮುಸ್ತಾಫ್ ಅವರ ಓಮಿನಿ ಕಾರು ನಿಯಂತ್ರಣ ತಪ್ಪಿ ಎದುರುಗಡೆಯ ಕಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿ ರಸ್ತೆಗೆ ಬಿದ್ದಿದೆ.
ಈ ಅಪಘಾತದಲ್ಲಿ ಓಮಿನಿ ಕಾರಿನಲ್ಲಿದ್ದ ಮುಸ್ತಾಫ್, ನೌಲತ್, ಜುಲ್ಪಿಯಾ, ನೋಮನ್, ನೈಮುದ್ಧೀನ್, ಇರ್ಫಾನ್ ಮತ್ತು ಇರ್ಷಾದ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ, ಆಸೀಫ್ ಅವರ ಹಣೆಗೆ, ಬಲಕೈ ಮೊಣಗಂಟಿಗೆ ರಕ್ತಗಾಯವಾಗಿದ್ದು, ಎರಡೂ ಕಾಲುಗಳ ಮೊಣಗಂಟಿನ ಕೆಳಗೆ ಮೂಳೆ ಮುರಿತವಾಗಿದೆ. ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಗೆ ಕಾರಣವಾದ ಮತ್ತೊಂದು ಕಾರಿನ ಚಾಲಕ ಸುನಿಲ್ ಶೆಟ್ಟಿ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ