ಉಡುಪಿ, ಫೆಬ್ರವರಿ 19: ಅಂಬಲಪಾಡಿ ಗ್ರಾಮದ ಕುಂಜಿಗುಡ್ಡೆ ಬಳಿ ನಿರ್ಮಾಣ ಹಂತದ ಮನೆಯೊಂದರಲ್ಲಿ ಕೆಲಸ ಮಾಡುವಾಗ ಕಾರ್ಮಿಕರೊಬ್ಬರು ಆಯತಪ್ಪಿ ಬಿದ್ದು ಮೃತಪಟ್ಟ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
ಮೃತರನ್ನು ಅಂಬಲಪಾಡಿ ಗ್ರಾಮದ ನಿವಾಸಿ ಸುರೇಶ್ (36) ಎಂದು ಗುರುತಿಸಲಾಗಿದೆ. ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದು, ಭರತ್ ಎಂಬುವವರು ಕಾಂಟ್ರಾಕ್ಟ್ ತೆಗೆದುಕೊಂಡಿದ್ದ ಮುಕೇಶ್ ಹೆಮ್ಮಾಡಿ ಅವರ ಮನೆಯಲ್ಲಿ ಕಳೆದ ಎರಡು ವಾರಗಳಿಂದ ಕೆಲಸ ಮಾಡುತ್ತಿದ್ದರು.
ಘಟನೆಯ ವಿವರ:
ಸೋಮವಾರ ಮಧ್ಯಾಹ್ನ ಸುರೇಶ್ ಮತ್ತು ಅವರ ಸಹೋದ್ಯೋಗಿ ಗಣೇಶ್ ಅವರು ರೂಫ್ ಮೇಲೆ ಅಳವಡಿಸಿದ್ದ ತಗಡು ಶೀಟು ಮೇಲೆ ಹೋಗಿ ಗಟರ್ ಡ್ರಾಫ್‌ಗೆ ಸ್ಕ್ರೂ ಅಳವಡಿಸುತ್ತಿದ್ದರು. ಸಂಜೆ 6 ಗಂಟೆ ಸುಮಾರಿಗೆ ಸುರೇಶ್ ಆಯತಪ್ಪಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದಿದ್ದಾರೆ. ತಲೆಗೆ ಗಂಭೀರವಾದ ರಕ್ತಸ್ರಾವವಾಗಿತ್ತು. ಕೂಡಲೇ ಅವರನ್ನು ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 9:45ಕ್ಕೆ ಅವರು ಕೊನೆಯುಸಿರೆಳೆದರು.
ನಿರ್ಲಕ್ಷ್ಯ ಆರೋಪ:
ಕಾಂಟ್ರಾಕ್ಟರ್ ಭರತ್ ಮತ್ತು ಕಟ್ಟಡದ ಇಂಜಿನಿಯರ್ ದೀಪಕ್ ಕುಮಾರ್ ಅವರು ಕಾಮಗಾರಿ ನಡೆಸುವಾಗ ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಿಲ್ಲ ಎಂದು ಮೃತರ ಪತ್ನಿ ದೂರು ನೀಡಿದ್ದಾರೆ. ಅವರ ನಿರ್ಲಕ್ಷ್ಯದಿಂದಲೇ ಈ ದುರಂತ ಸಂಭವಿಸಿದೆ ಎಂದು ಆರೋಪಿಸಲಾಗಿದೆ.
ಈ ದೂರಿನ ಆಧಾರದ ಮೇಲೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ