Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಭ್ರೂಣಲಿಂಗ ಪತ್ತೆ ಹಚ್ಚುವವರ ವಿರುದ್ಧ ಸೂಕ್ತ ಕ್ರಮ: ಡಾ. ಪ್ರತಾಪ್ ಕುಮಾರ್


 ಉಡುಪಿ: ಗರ್ಭಧಾರಣೆ ಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಹಚ್ಚಿ ಘೋಷಿಸುವ ವ್ಯಕ್ತಿಗಳು, ಸ್ಕ್ಯಾನಿಂಗ್ ಕೇಂದ್ರಗಳು ಹಾಗೂ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಶಾಂತ್ ಭಟ್ ಹೇಳಿದರು. ಅವರು ಇಂದು ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಯವರ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಿ.ಸಿ.ಪಿ.ಡಿ.ಎನ್.ಟಿ ಕಾಯಿದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಒಂದೊಮ್ಮೆ ಲಿಂಗ ಪತ್ತೆ ಮಾಡಿದ ಪ್ರಕರಣಗಳು ಕಂಡುಬಂದಲ್ಲಿ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಸರ್ಕಾರದ ನಿಯಮಾನುಸಾರ ಕಾರ್ಯಚಟುವಟಿಕೆಗಳನ್ನು ಮಾಡದೇ ಇರುವಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಗರ್ಭ ಪೂರ್ವ ಮತ್ತು ಪ್ರಸವ ಪೂರ್ವ

ಭ್ರೂಣ ಲಿಂಗ ಪತ್ತೆ ಹಚ್ಚುವುದು ಕಾನೂನಿನ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಭ್ರೂಣಲಿಂಗ ಪತ್ತೆಯಿಂದ ಹೆಣ್ಣು ಮತ್ತು ಗಂಡು ಮಕ್ಕಳ ಅನುಪಾತದಲ್ಲಿ ಹೆಚ್ಚಿನ ವ್ಯತ್ಯಾಸವಾಗಿ ಸಮಾಜದಲ್ಲಿ ಅಸಮತೋಲನ ಉಂಟಾಗಿ ಮಹಿಳೆಯರ ಮೇಲೆ ಅಪರಾಧಿಕ ಪ್ರಕರಣಗಳೂ ಸಹ ಹೆಚ್ಚಾಗುವ ಸಾಧ್ಯತೆಗಳು ಇರುತ್ತವೆ. ಇದಕ್ಕೆ ಆಸ್ಪದ ನೀಡಬಾರದು ಎಂದರು. ಜಿಲ್ಲೆಯಲ್ಲಿ 2024 ರ ಏಪ್ರಿಲ್ ನಿಂದ ನವೆಂಬರ್ ವರೆಗೆ ಗಂಡು ಮತ್ತು ಹೆಣ್ಣಿನ ಲಿಂಗಾನುಪಾತ 966 ಇದೆ ಎಂದ ಅವರು, ಹೆಣ್ಣು ಮಕ್ಕಳ ಅನುಪಾತ ಕಡಿಮೆಯಿರುವ ಗ್ರಾಮಗಳಲ್ಲಿ ಹೆಣ್ಣೂ ಮಕ್ಕಳ ಲಿಂಗಾನುಪಾತ ಕಡಿಮೆ ಇರುವುದರಿಂದ ಆಗುವ ಸಾಮಾಜಿಕ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಶಾಲೆಯ ಎನ್.ಎಸ್.ಎಸ್ ವಿದ್ಯಾರ್ಥಿಗಳಿಂದ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಮಟ್ಟದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಕಾಯಿದೆ ಸಲಹಾ ಸಮಿತಿಯ ಅಧ್ಯಕ್ಷ ಡಾ. ಪ್ರತಾಪ್ ಕುಮಾರ್ ಮಾತನಾಡಿ, ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಭ್ರೂಣಲಿಂಗ ಪತ್ತೆ ಹಚ್ಚುವುದು ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಎದ್ದು ಕಾಣುವ ರೀತಿಯಲ್ಲಿ ಫಲಕಗಳನ್ನು ಪ್ರದರ್ಶಿಸಬೇಕು ಹಾಗೂ ಸರ್ಕಾರದ ನಿಯಮಾನುಸಾರ ರಿಜಿಸ್ಟರ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸಬೇಕು ಎಂದ ಅವರು, 5 ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಎಫ್ ಫಾರ್ಮ್ ಸೇರಿದಂತೆ ಮತ್ತಿತರ ದಾಖಲಾತಿಗಳನ್ನು ನಿರ್ವಹಿಸದ ಕಾರಣ ಕೇಳಿ ನೋಟೀಸ್ ನೀಡಲಾಗಿದೆ ಎಂದರು. ಪಿ.ಸಿ & ಪಿ.ಎನ್.ಡಿ.ಟಿ ಸಮಿತಿಯ ಸದಸ್ಯರುಗಳು ಅನಿರೀಕ್ಷಿತವಾಗಿ ಆಗಿಂದಾಗ್ಗೆ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು ಎಂದ ಅವರು, ಹೊಸದಾಗಿ ಸ್ಕ್ಯಾನಿಂಗ್ ಸೆಂಟರ್‌ಗಳನ್ನು ತೆರೆಯಲು ಅರ್ಜಿ ಸಲ್ಲಿಸಿದ್ದಲ್ಲಿ ಸೂಕ್ತ ದಾಖಲೆಗಳನ್ನು ಪರಿಶೀಲಿಸಿ, ಅನುಮತಿ ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ರಾಮರಾವ್, ಮಣಿಪಾಲ ಕೆ.ಎಂ.ಸಿ ಯ ಮಕ್ಕಳ ತಜ್ಞ ಡಾ. ಕಿರಣ ಹೆಬ್ಬಾರ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ, ಸಮಾಜ ಸೇವಕ ಡಾ. ಗಣೇಶ್ ಪೈ, ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ದೀಕ್ಷಿತಾ ಹಾಗೂ ಮತ್ತಿತರರು ಉಪಸ್ಥಿತರಿದ್ದರು

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo