Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಅಕ್ರಮ ಮರಳು ಸಾಗಾಟ: ವಾಹನ ಚಾಲಕನ ಬಂಧನ


ಕಾಪು: ಕಾಪು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ವಾಹನವೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ವಾಹನ ಚಾಲಕನನ್ನು ಬಂಧಿಸಲಾಗಿದೆ.

ದಿನಾಂಕ 20/02/2025 ರಂದು ಕಾಪು ಪೊಲೀಸ್ ಠಾಣೆಯ ಉಪನಿರೀಕ್ಷಕ ರಮೇಶ್ ನಾಯ್ಕ್ ಮತ್ತು ಸಿಬ್ಬಂದಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ, ದೇಂದೂರು ಕಟ್ಟೆ ಬಳಿಯಿಂದ 407 ವಾಹನವೊಂದು ಅಕ್ರಮವಾಗಿ ಮರಳು ತುಂಬಿಸಿಕೊಂಡು ಕಟಪಾಡಿ ಕಡೆಗೆ ಬರುತ್ತಿರುವ ಬಗ್ಗೆ ಮಾಹಿತಿ ಬಂದಿತ್ತು. ಅದರಂತೆ ಪೊಲೀಸರು ವಾಹನಕ್ಕಾಗಿ ಕಾಯುತ್ತಿದ್ದರು.

ಶಿರ್ವಾ ರಸ್ತೆಯ ಕಡೆಯಿಂದ KL-01-BQ-9193 ನೋಂದಣಿ ಸಂಖ್ಯೆಯ 407 ವಾಹನವೊಂದು ಬಂದಿದ್ದು, ವಾಹನದಲ್ಲಿ ಚಾಲಕ ಮಾತ್ರ ಇದ್ದರು. ವಾಹನವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 1 ಯೂನಿಟ್ ಮರಳನ್ನು ತುಂಬಲಾಗಿತ್ತು. ಚಾಲಕನನ್ನು ವಿಚಾರಿಸಿದಾಗ ಆತನ ಹೆಸರು ಡೇರಿಕ್ ಡಿಸೋಜಾ ಎಂದು ತಿಳಿದುಬಂದಿದೆ. ವಾಹನದ ಮಾಲೀಕರ ಬಗ್ಗೆ ವಿಚಾರಿಸಿದಾಗ, ವಾಹನವು ಶಿರ್ವಾ ನಿವಾಸಿ ಪ್ರಕಾಶ್ ರೋಷನ್ ಡಿಸೋಜಾ ಅವರಿಗೆ ಸೇರಿದ್ದು, ಅವರು ಪ್ರಸ್ತುತ ದುಬೈನಲ್ಲಿದ್ದಾರೆ ಮತ್ತು ಐದು ತಿಂಗಳ ಹಿಂದೆ ವಾಹನವನ್ನು ಚಾಲಕನಿಗೆ ಜಿಪಿಎ ಮಾಡಿಕೊಟ್ಟಿದ್ದಾರೆ ಎಂದು ಚಾಲಕ ತಿಳಿಸಿದ್ದಾನೆ.

ಮರಳಿನ ಬಗ್ಗೆ ವಿಚಾರಿಸಿದಾಗ, ಮರಳು ಸಾಗಾಟಕ್ಕೆ ಟ್ರಿಪ್ ಶೀಟ್ ಹೊಂದಿದ್ದು, ಪರಿಶೀಲಿಸಲಾಗಿ ಟ್ರಿಪ್ ಶೀಟ್ ಬೆಳಿಗ್ಗೆ 10:35 ರಿಂದ 11:35 ರವರೆಗೆ ಮಾತ್ರ ಚಾಲ್ತಿಯಲ್ಲಿತ್ತು. ಈ ಬಗ್ಗೆ ವಿಚಾರಿಸಿದಾಗ, ತಾನು ದಿನಕ್ಕೆ ಒಂದು ಅಥವಾ ಎರಡು ಟ್ರಿಪ್ ಶೀಟ್ ಪಡೆದುಕೊಂಡು, ಅಧಿಕ ಲಾಭ ಮಾಡುವ ಉದ್ದೇಶದಿಂದ ಅದೇ ಟ್ರಿಪ್ ಶೀಟ್ ಗಳಲ್ಲಿ ದೇಂದೂರು ಕಟ್ಟೆಯ ಪಾಪನಾಶಿನಿ ಹೊಳೆಯಿಂದ ಹೆಚ್ಚುವರಿಯಾಗಿ ಮರಳನ್ನು ತೆಗೆದು ಸಾಗಾಟ ಮಾಡುವುದಾಗಿ ಚಾಲಕ ಒಪ್ಪಿಕೊಂಡಿದ್ದಾನೆ.

ಆರೋಪಿತನು ಸ್ವಂತ ಲಾಭಕ್ಕಾಗಿ ಸರ್ಕಾರಿ ಸ್ವತ್ತಾದ ಖನಿಜವನ್ನು ಕಳವು ಮಾಡಿ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದು, ಅಪರಾಧ ಎಸಗಿರುವುದು ಕಂಡುಬಂದಿದ್ದರಿಂದ, ಮರಳು ಸಾಗಿಸುತ್ತಿದ್ದ ವಾಹನ ಮತ್ತು ಮರಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo