Slider

ಉಡುಪಿ: ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ: ಜಿಲ್ಲಾಧಿಕಾರಿ ಡಾ.ವಿದ್ಯಾ ಕುಮಾರಿ


ಉಡುಪಿ : ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ನಾಯಿ ಕಡಿತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ಬಗ್ಗೆ ಅನೇಕ ದೂರುಗಳು ಸಹ ಬರುತ್ತಿವೆ. ಈ ನಿಟ್ಟಿನಲ್ಲಿ ನಗರ ಹಾಗೂ ಗ್ರಾಮೀಣ ಭಾಗದ ಸ್ಥಳೀಯ ಸಂಸ್ಥೆಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಅಗತ್ಯ ಇರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಉಡುಪಿ ಜಿಲ್ಲಾಧಿಕಾರಿ ಡಾ ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ಪ್ರಾಣಿ ದಯಾ ಸಂಘದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು. 

ನಗರ ಹಾಗೂ ಗ್ರಾಮೀಣ ಮಟ್ಟದ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್ ಹಾಗೂ ಗ್ರಾಪಂಗಳು ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆ ಮೂಲಕ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣಕ್ಕಾಗಿ ಬಜೆಟ್‌ನಲ್ಲಿ ಅನುದಾನ ಮಿಸಲಿರಿಸಬೇಕು ಎಂದು ಅವರು ಸೂಚನೆ ನೀಡಿದರು.

ಸ್ಥಳೀಯ ಸಂಸ್ಥೆಗಳು ಪ್ರತೀ ಮೂರು ತಿಂಗಳಿಗೊಮ್ಮೆ ಬೀದಿ ನಾಯಿಗಳ ಗಣತಿ ಕಾರ್ಯ ಕೈಗೊಳ್ಳಬೇಕು. ಒಂದೊಮ್ಮೆ ತಕ್ಷಣದಲ್ಲಿ ಗಣತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದೆ ಇದ್ದಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಪ್ರದೇಶದ ಜನ ಸಂಖ್ಯೆಯ ಶೇ.2ರಷ್ಟು ಬೀದಿ ನಾಯಿಗಳು ಇವೆ ಎಂದು ಪರಿಗಣಿಸಿ, ಒಟ್ಟು ನಾಯಿಗಳ ಅರ್ಧದಷ್ಟು ಪ್ರತೀ ವರ್ಷ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಿರುವ ನಾಯಿಗಳ ಸಂಖ್ಯೆ ಎಂದು ಪರಿಗಣಿಸಬೇಕು ಎಂದರು. 

ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯ್ದೆಯನ್ವಯ ನಾಯಿಗಳ ಸಂತಾನೋತ್ಪತ್ತಿ ಮತ್ತು ಮಾರಾಟ ಹಾಗೂ ಮುದ್ದಿನ ಪ್ರಾಣಿಗಳ ಅಂಗಡಿ ಚಟುವಟಿಕೆಗಳನ್ನು ನಡೆಸಲು ವ್ಯಕಿತಿಗಳು ಅಥವಾ ಸಂಸ್ಥೆಗಳು ಕಡ್ಡಾಯವಾಗಿ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಹಾಗೂ ಗ್ರಾಮೀಣ ಮತುತಿ ನಗರ ಮಿತಿಯ ಸ್ಥಳೀಯ ಸಂಸ್ಥೆಗಳಲ್ಲಿ ಪರವಾನಿಗೆ ಯನ್ನು ಪಡೆಯಬೇಕು ಎಂದರು.

ಕಳೆದ ಸಾಲಿನಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳಲ್ಲಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳಲು ಅನುದಾನ ಕಾಯ್ದಿರಿಸಿ, ಟೆಂಡರ್ ಪ್ರಕಟಣೆಯನ್ನು ಕರೆದರೂ ಯಾವುದೇ ಏಜೆನ್ಸಿಗಳು ಬಾರದೇ ಇರುವುದರಿಂದಾಗಿ ಅನುಷ್ಠಾನ ಗೊಳಿ ಸಲು ಸಾಧ್ಯವಾಗದೇ ಇರುವುದು ಕಂಡುಬಂದಿದೆ. ಇದರ ಅನುಷ್ಠಾನಕ್ಕಾಗಿ ಸ್ಥಳೀಯ ಪ್ರಾಣಿ ದಯಾ ಸಂಘದ ಸಹಕಾರ ಅಥವಾ ಪಶು ಪಾಲನಾ ಇಲಾಖೆಯ ಸಹಕಾರದೊಂದಿಗೆ ಇವುಗಳ ಕಾರ್ಯರೂಪಕ್ಕೆ ಮುಂದಾಗಬೇಕು ಎಂದರು. 

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಮಾತನಾಡಿ, ಸರಕಾರ ಪ್ರಾಣಿಗಳ ಹಿತಕ್ಕಾಗಿ ಅನೇಕ ಕಾನೂನುಗಳು ಹಾಗೂ ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಪ್ರತಿಯೊಬ್ಬರೂ ಪಾಲಿಸ ಬೇಕು. ಒಂದೊಮ್ಮೆ ಉಲ್ಲಂಘನೆ ಗೊಂಡಲ್ಲಿ ಕಾನೂನಿನ ಅನ್ವಯ ಕ್ರಮಕ್ಕೆ ಆಸ್ಪದವಾಗುತ್ತದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು. ಅವುಗಳಿಗೂ ಸಹ ನಮ್ಮ ಹಾಗೆ ಭೂಮಿಯ ಮೇಲೆ ವಾಸಿಸುವ ಹಕ್ಕು ಇದೆ ಎಂದರು. 

ಸಭೆಯಲ್ಲಿ ಪ್ರಭಾರ ಅಪರ ಜಿಲ್ಲಾಧಿಕಾರಿ ನಾಗರಾಜ್ ವಿ.ನಾಯಕ್, ಪಶು ಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ.ರೆಡ್ಡಪ್ಪ, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು. 




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo