Slider

ಅಭಿವೃದ್ಧಿ ವಿಚಾರದಲ್ಲಿ ಕೇಂದ್ರಕ್ಕೆ ರಾಜ್ಯದ ಅಸಹಕಾರ; ಹೆಚ್.ಡಿ.ಕುಮಾರಸ್ವಾಮಿ ನೇರ ಆರೋಪ


ನವದೆಹಲಿ: ಅಭಿವೃದ್ಧಿ ವಿಚಾರದಲ್ಲಿ ಕರ್ನಾಟಕ ಸರಕಾರವು ಕೇಂದ್ರ ಸರಕಾರಕ್ಕೆ ಸಹಕಾರ ನೀಡುತ್ತಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ನವದೆಹಲಿಯ ಉಕ್ಕು ಸಚಿವಾಲಯದಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು; ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆ ಪುನಶ್ಚೇತನ ವಿಚಾರಕ್ಕೆ ರಾಜ್ಯ ಸರಕಾರ ತಮ್ಮ ಜತೆ ಚರ್ಚೆ ಮಾಡಿಲ್ಲ. ನನ್ನ ತವರು ರಾಜ್ಯ ಎನ್ನುವ ಕಾರಣಕ್ಕೆ ನಾನು ಕೆಲಸ ಮಾಡುತ್ತಿದ್ದೇನೆ. ಎಲ್ಲವನ್ನು ಜನರು ಗಮನಿಸುತ್ತಿದ್ದಾರೆ ಎಂದರು.

ಕೇಂದ್ರ ಸರಕಾರಕ್ಕೆ ಕರ್ನಾಟಕ ಸರಕಾರ ಸಹಕಾರ ನೀಡುತ್ತಿಲ್ಲ, ಬದಲಿಗೆ ಪ್ರತಿನಿತ್ಯ ಪ್ರಧಾನಿಯನ್ನು ನಿಂದಿಸುವುದೇ ಆಗಿದೆ. ದಿನವೂ ಪ್ರಧಾನಿಯನ್ನು ನಿಂದಿಸಿದರೆ ರಾಜ್ಯ ಅಭಿವೃದ್ಧಿ ಆಗುತ್ತದೆಯೇ ಎಂದು ಕುಮಾರಸ್ವಾಮಿ ಅವರು ಪ್ರಶ್ನಿಸಿದರು.

ನಾಯ್ಡು ಅವರನ್ನು ನೋಡಿ ಕಲಿಯಲಿ:

ವೈಜಾಗ್ ಸ್ಟೀಲ್ ವಿಚಾರವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಅನೇಕ ಸಲ ನನ್ನನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಅನೇಕ ಸಲ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದರು. ಅವರ ರಾಜ್ಯದ ಅಭಿವೃದ್ಧಿ ಬಗ್ಗೆ ಅವರಿಗೆಷ್ಟು ಬದ್ಧತೆ ಇದೆ ಎಂಬುದನ್ನು ನೋಡಿ ಇವರು ಕಲಿಯಬೇಕು. ರಾಜಕೀಯ ದ್ವೇಷ ಕಾರಣಕ್ಕೆ ರಾಜ್ಯದಲ್ಲಿ ನಾನು ಏನೇ ಮಾಡಲು ಹೋದರೂ ರಾಜ್ಯ ಸರಕಾರ ಅಡ್ಡಿಪಡಿಸುವುದನ್ನೇ ಪರಿಪಾಠ ಮಾಡಿಕೊಂಡಿದೆ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ರಾಜ್ಯದಿಂದ ಯಾವ ಮನವಿಯೂ ಬಂದಿಲ್ಲ:

ಕರ್ನಾಟಕ ಸರಕಾರ ಈ ಕ್ಷಣದವರೆಗೆ ನಾನು ತೆಗೆದುಕೊಳ್ಳುವ ವಿಚಾರವಾಗಿ ಎಷ್ಟು ಆಡಚಣೆ ಮಾಡುತ್ತಿದ್ದಿರಿ ಎಂದು ನೀವೇ ನೋಡುತ್ತಿದ್ದಿರಿ ಎಂದು ಮಾಧ್ಯಮ ವರದಿಗಾರರಿಗೆ ಹೇಳಿದ ಅವರು; ಈ ತನಕ ಕರ್ನಾಟಕದಿಂದ ಒಂದೇ ಒಂದು ಪತ್ರ ಬಂದಿಲ್ಲ. ಏಳು ತಿಂಗಳು ಕಳೆದರೂ ನನ್ನನ್ನು ಯಾರು ಭೇಟಿಯಾಗಿಲ್ಲ. ನೀವು ಕುದುರೆಮುಖ ಕಂಪನಿಯ ವಿಚಾರದಲ್ಲಿ ರಾಜ್ಯ ಸರಕಾರ ಕೊಟ್ಟ ಕಿರುಕುಳವನ್ನು ನೋಡಿ. ರಾಜ್ಯ ಸರಕಾರ ಕನಿಷ್ಠ ಸೌಜನ್ಯಕ್ಕೆ ಪತ್ರ ಬರೆಯಲಿಲ್ಲ. ಆ ಕಂಪನಿ ಮುಚ್ಚುವ ಹಂತಕ್ಕೆ ಬಂದಿದೆ. ರಾಜ್ಯ ಸರಕಾರದ ತಪ್ಪಿಗೆ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಆರೋಪ ಮಾಡಿದರು.

ಕುದುರೆಮುಖ ಕಂಪನಿಗೆ ಗಣಿ ಇಲ್ಲ ಎನ್ನುವ ಕಾರಣಕ್ಕೆ ದೇವದಾರಿ ಗಣಿ ಯೋಜನೆಗೆ ಹಣಕಾಸು ಅನುಮೋದನೆಗೆ ನಾನು ಹಸಿರು ನಿಶಾನೆ ನೀಡಿದ್ದೆ. ನಾನು ಉಕ್ಕು ಸಚಿವನಾಗಿ ಅಧಿಕಾರ ಸ್ವೀಕಾರ ಮಾಡಿದ ಮೇಲೆ ಮೊತ್ತ ಮೊದಲಿಗೆ ಹಾಕಿದ ಸಹಿ ಅದು. ನಾನೇ ಗಣಿಗಾರಿಕೆಗೆ ಒಪ್ಪಿಗೆ ಕೊಟ್ಟೆ ಎಂದು ರಾಜ್ಯ ಸರಕಾರ ಅಪಪ್ರಚಾರ ಮಾಡಿತು. ನಿಜಕ್ಕಾದರೆ ದೇವದಾರಿಗೆ ಒಪ್ಪಿಗೆ ನೀಡಿದ್ದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ. ಕೊನೆಗೆ ನಾನು ಉಕ್ಕು ಸಚಿವ ಎನ್ನುವ ಕಾರಣಕ್ಕೆ ಅವರೇ ಕಿರುಕುಳ ನೀಡುತ್ತಿದ್ದಾರೆ. ಹೀಗಾದರೆ ರಾಜ್ಯ ಅಭಿವೃದ್ಧಿ ಆಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.

ಹೀಗಾದರೆ ಕುದುರೆಮುಖ (ಕೆಐಒಸಿಎಲ್) ಹೇಗೆ ಉಳಿಯುತ್ತದೆ. ವೈಜಾಗ್ ಸ್ಟೀಲ್ ನಂತೆ ಮಂಗಳೂರು ಸಮುದ್ರ ದಂಡೆಯಲ್ಲಿರುವ ಕಾರ್ಖಾನೆ ಸಂಕಷ್ಟದಲ್ಲಿದೆ. ಹೇಗಾದರೂ ಅದನ್ನು ಉಳಿಸಬೇಕು ಎನ್ನುವ ಕಾರಣಕ್ಕೆ ನಾನು ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದ ಅವರು; ಕಾಂಗ್ರೆಸ್ ನವರು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವುದೇ ರಾಜ್ಯವನ್ನು ಲೂಟಿ ಮಾಡಲಿಕ್ಕೆ ಎಂದು ಕಿಡಿಕಾರಿದರು.

ಇನ್ನು ರಾಜ್ಯವಷ್ಟೇ ಅಲ್ಲ , ಇಡೀ ದೇಶದ ಹೆಮ್ಮೆಯ ಕಂಪನಿ ಆಗಿದ್ದ ಹೆಚ್ ಎಮ್ ಟಿ ಬಗ್ಗೆ ರಾಜ್ಯ ಸರಕಾರ ನಡೆದುಕೊಳ್ಳುತ್ತಿರುವ ರೀತಿಯನ್ನು ಗಮನಿಸಿ. ಈಗ ಹೆಚ್ ಎಮ್ ಟಿ ಜಾಗ ಹೊಡೆಯಲು ಹೊರಟ್ಟಿದ್ದಾರೆ? ಆರಂಭದಲ್ಲಿಯೇ ಕಂಪನಿ ಮೈಸೂರು ಮಹಾರಾಜರಿಂದ ಹಣ ಕೊಟ್ಟು ಭೂಮಿ ಖರೀದಿ ಮಾಡಿದೆ. ಅದಕ್ಕೆ ದಾಖಲೆಗಳು ಇವೆ. ಆ ಕಂಪನಿಗೆ ಜೀವದಾನ ಮಾಡಲು ಹೊರಟರೆ ಅದಕ್ಕೂ ರಾಜ್ಯ ಸರಕಾರ ಕೊಕ್ಕೆ ಹಾಕಲು ಬರುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದು ಕುಮಾರಸ್ವಾಮಿ ಅವರು ಆರೋಪಿಸಿದರು.

ಈಗ ಹೆಚ್ ಎಂಟಿ ಕಾರ್ಖಾನೆಯ ಭೂಮಿಯನ್ನು ವಾಪಸ್ ಪಡೆಯುವ ಬಗ್ಗೆ ರಾಜ್ಯ ಸರಕಾರ ಹೇಳಿಕೆ ನೀಡುತ್ತಿದೆ. ಹಾಗಾದರೆ, ಈ ಮೊದಲೇ ಪರಭಾರೆ ಆಗಿರುವ ಎಲ್ಲಾ ಸ್ವತ್ತುಗಳನ್ನು ಕೂಡ ವಶಕ್ಕೆ ತೆಗೆದುಕೊಳ್ಳಲಿ. ಕಾರ್ಖಾನೆಯ ಜಾಗದಲ್ಲಿ ದೊಡ್ಡ ದೊಡ್ಡ ಕಟ್ಟಡ ಒತ್ತಿಕೊಂಡಿರುವವರ ಹಿಂದೆ ಯಾರ ಕೈವಾಡ ಇದೆ ಎಂಬುದು ಗೊತ್ತಿದೆ. ಎಲ್ಲವನ್ನು ಜನರ ಮುಂದೆ ಇರಿಸಲಾಗುವುದು ಎಂದು ಅವರು ಹೇಳಿದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo