ಬ್ರಹ್ಮಾವರ: ಉಪ್ಪೂರು ಗ್ರಾಮದ ರತ್ನಾಕರ ಡಿ (75) ಅವರ 1.29 ಎಕರೆ ಕೃಷಿ ಜಮೀನಿಗೆ ಅತಿಕ್ರಮಿಸಿ ಸುಮಾರು 150 ಮಾವಿನ ಮರಗಳನ್ನು ಧ್ವಂಸ ಮಾಡಿರುವ ಆರೋಪದ ಮೇಲೆ ಸುಮನಾ ಮತ್ತು ಅವರ ಪತಿ ಎಚ್.ಎಸ್. ಶೆಟ್ಟಿ ಸೇರಿದಂತೆ ಇತರರ ವಿರುದ್ಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರತ್ನಾಕರ ಅವರು ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದು, ಕಾಡು ಪ್ರಾಣಿಗಳ ಹಾವಳಿ ತಪ್ಪಿಸಲು ಬೇಲಿ ಹಾಕಿ ಸೋಲಾರ್ ವಿದ್ಯುತ್ ಸಂಪರ್ಕ ಕೂಡ ನೀಡಿದ್ದರು. ಆದರೆ, ಸುಮನಾ ಅವರೊಂದಿಗೆ ಈ ಜಮೀನಿನ ವಿಚಾರದಲ್ಲಿ ನ್ಯಾಯಾಲಯದಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ಇಬ್ಬರ ನಡುವೆ ವಿವಾದವಿತ್ತು.
ಜನವರಿ 25 ರಂದು ಸುಮನಾ ಮತ್ತು ಅವರ ಪತಿ ಸರ್ವೇ ಅಧಿಕಾರಿಗಳೊಂದಿಗೆ ಬಂದು ಬೇಲಿ ತೆರವು ಮಾಡಲು ಒತ್ತಾಯಿಸಿದ್ದರು. ಫಿರ್ಯಾದಿ ಇದಕ್ಕೆ ಒಪ್ಪದಿದ್ದಾಗ ಆರೋಪಿಗಳು ತಡರಾತ್ರಿ ಜೆಸಿಬಿ ಬಳಸಿ ಬೇಲಿಯನ್ನು ಹಾನಿಗೊಳಿಸಿ, ಸೋಲಾರ್ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಜಮೀನಿನೊಳಗೆ ಅಕ್ರಮವಾಗಿ ಪ್ರವೇಶಿಸಿ ಸುಮಾರು 150 ಮಾವಿನ ಮರಗಳ ಜೊತೆಗೆ ಇತರ ಬೆಲೆಬಾಳುವ ಮರಗಿಡಗಳನ್ನು ಧ್ವಂಸ ಮಾಡಿದ್ದಾರೆ. ಜೊತೆಗೆ ಸಿಸಿಟಿವಿ ಕ್ಯಾಮೆರಾ ಮತ್ತು ಸೋಲಾರ್ ಬ್ಯಾಟರಿಗಳನ್ನು ಕದ್ದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಘಟನೆಯ ಸಂಬಂಧ ಬ್ರಹ್ಮಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ