Slider

"ಗುಡ್ಡೆಯಂಗಡಿ" ತುಳು ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್..!

Guddeangadi tulu movie, ಗುಡ್ಡೆಯಂಗಡಿ ತುಳು ಚಿತ್ರ

ತುಳು ಚಿತ್ರರಂಗಕ್ಕೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಹೊಸಬರ ತಂಡಗಳು ಬರುತ್ತಿವೆ. ಅದರಲ್ಲೂ ರಂಗಭೂಮಿಯಲ್ಲಿ ಕೆಲಸ ಮಾಡಿ ಅನುಭವ ಗಳಿಸಿರುವ ಒಂದಿಷ್ಟು ಯುವಕರು, ತುಳು ಚಿತ್ರರಂಗಕ್ಕೆ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಬರುತ್ತಿದ್ದಾರೆ. ರಂಗಭೂಮಿಯಲ್ಲಿ ವರ್ಷಾಂತರಗಳ ಕಾಲ ಪಳಗಿಕೊಂಡಿರುವ ಪ್ರತಿಭಾನ್ವಿತರ ತಂಡವೊಂದು ಚಿತ್ರರಂಗಕ್ಕೆ ಆಗಮಿಸಿದೆ. ಈ ಸಾಲಿಗೆ ಮತ್ತೊಂದು ಚಿತ್ರ" ಗುಡ್ಡೆಯಂಗಡಿ" ಸೇರಿಕೊಂಡಿದೆ.

" ಗುಡ್ಡೆಯಂಗಡಿ" ಶೀರ್ಷಿಕೆಯಲ್ಲಿಯೇ ಕಥೆಯ ಬಗೆಗಿನ ನಿಗೂಢ ಬಚ್ಚಿಟ್ಟುಕೊಂಡಂತಿರುವ ಈ ಚಿತ್ರವನ್ನು ಶಶಿ ಶಿರ್ಲಾಲು ನಿರ್ದೇಶನ ಮಾಡಿದ್ದಾರೆ. ಇದೀಗ ಈ ಚಿತ್ರದ ಟೈಟಲ್ ಟ್ರ್ಯಾಕ್ ದೃಷ್ಟಿ ರೆಕಾರ್ಡ್ಸ್ ತುಳು ಯುಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ. ಈ ಮೂಲಕವೇ ಸದರಿ ಚಿತ್ರದ ಬಗ್ಗೆ ನಾನಾ ಆಯಾಮಗಳಲ್ಲಿ ನಿರೀಕ್ಷೆಗಳು ಮೂಡಿಕೊಂಡಿವೆ.

ದೃಷ್ಟಿ ಸ್ಟುಡಿಯೋಸ್ ಬ್ಯಾನರಿನಡಿಯಲ್ಲಿ ಎಸ್.ಬಿ.ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇದರ ಪೋಸ್ಟರ್ ಒಂದು ಬಿಡುಗಡೆಗೊಂಡಿತ್ತು. ಆ ಮೂಲಕ ಕುತೂಹಲ ಮೂಡಿಸಿದ್ದ ಚಿತ್ರತಂಡವೀಗ ಟೈಟಲ್ ಟ್ರ್ಯಾಕ್ ಮೂಲಕ ಪ್ರೇಕ್ಷಕರನ್ನು ಮತ್ತಷ್ಟು ತೀವ್ರವಾಗಿ ಸೆಳೆದುಕೊಂಡಿದೆ. ಇದು ಕ್ರೈಂ ಜಾನರಿನ ಚಿತ್ರವಾಗಿದ್ದು, ಒಂದು ಪ್ರಕರಣದ ತನಿಖೆಯ ಸುತ್ತ ಸಾಗುವ ರೋಚಕ ಕಥನದೊಂದಿಗೆ ಇದನ್ನು ರೂಪಿಸಲಾಗಿದೆಯಂತೆ. ಆಗಾಗ ತುಳು ಚಿತ್ರರಂಗದಲ್ಲಿ ಈ ಜಾನರಿನ ಚಿತ್ರಗಳು ತೆರೆಗಾಣುತ್ತಿರುತ್ತವೆ. ಅದೆಲ್ಲಕ್ಕಿಂತಲೂ ಭಿನ್ನವಾದ ಅಂಶಗಳು ಇಲ್ಲಿವೆ ಎಂಬ ತುಂಬು ಭರವಸೆ ಚಿತ್ರತಂಡದಲ್ಲಿದೆ.

ರಂಗಭೂಮಿಯಲ್ಲಿ ಸಕ್ರಿಯವಾಗಿದ್ದುಕೊಂಡು, ವರ್ಷಾಂತರಗಳಿಂದ ತಯಾರಿ ನಡೆಸಿದ್ದ ತಂಡವೊಂದು ಈ ಚಿತ್ರದ ಹಿಂದಿದೆ. ಅವರೆಲ್ಲರೂ ರಂಗಭೂಮಿಗೆ ಹಳಬರಾದರೂ, ಚಿತ್ರರಂಗಕ್ಕೆ ಹೊಸಬರು. ಸಿದ್ಧಸೂತ್ರದಾಚೆಗೆ ಏನೋ ಮಾಡಬೇಕೆಂಬ ತುಡಿತವನ್ನು ಈ ತಂಡ `ಗುಡ್ಡೆಯಂಗಡಿ’ ಚಿತ್ರದ ಮೂಲಕ ಸಾಕಾರಗೊಳಿಸಿದೆಯಂತೆ.

ರಂಗಭೂಮಿಯ ಹಿರಿಯ ಕಲಾವಿದ ಪ್ರೀತಮ್ ಶೆಟ್ಟಿ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ, ರಂಜಿತ್ ಶಿರ್ಲಾಲು, ಸಂದೀಪ್ ಪೂಜಾರಿ, ಸಂಕೇತ್ ಕುಲಾಲ್, ಹರೀಶ್ ತೂಮಿನಾಡ್ ಪವನ್, ಗಣೇಶ್ ಆಚಾರ್ಯ ಮುಂತಾದವರ ತಾರಾಗಣವಿದೆ. 

ಅನಿಲ್ ಲಕ್ಷ್ಮಣ್ ಉಡುಪಿ ಮತ್ತು ಹರೀಶ್ ಪುತ್ತೂರು ಛಾಯಾಗ್ರಹಣ, ರಂಜಿತ್ ಶಿರ್ಲಾಲು ಸಾಹಿತ್ಯದ ಹಾಡಿಗೆ ಸ್ವಸ್ತಿಕ್ ಕಡಿಯಾಳಿ ಧ್ವನಿಯಾಗಿ, ಮೋಹನ್ ಪಿ ನಾಯರ್ ಸಂಗೀತ ನಿರ್ದೇಶನವನ್ನು ನೀಡಿದ್ದಾರೆ

ಉಡುಪಿ , ಕಾರ್ಕಳ ಮುಂತಾದೆಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಟ್ರೈಲರ್ ಬಿಡುಗಡೆಗೊಳಿಸಿ, ಅದಾದ ಬಳಿಕ ಈ ಸಿನಿಮಾ ಬಿಡುಗಡೆ ದಿನಾಂಕ ಘೋಶಣೆ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ.


0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo