ಉಡುಪಿ: ಸಂಸತ್ತಿನಲ್ಲಿ ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಹಾಗೂ ಸದನದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಮಾನಹಾನಿ ಪದ ಬಳಕೆ ಮಾಡಿರುವ ಸಿ.ಟಿ. ರವಿ ವಿರುದ್ಧ ಉಡುಪಿ ಕಾಂಗ್ರೆಸ್ ಎಸ್.ಸಿ ಘಟಕ ಹಾಗೂ ಉಡುಪಿ ಮಹಿಳಾ ಕಾಂಗ್ರೆಸ್ ನೇತೃತ್ವದಲ್ಲಿ ಬ್ರಹ್ಮಗಿರಿ ಸರ್ಕಲ್ ನಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ಕಾಂಗ್ರೆಸ್ ಭವನದಿಂದ ಬ್ರಹ್ಮಗಿರಿ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಸಚಿವ ಅಮಿತ್ ಶಾ ಹಾಗೂ ಸಿಟಿ ರವಿ ವಿರುದ್ಧ ದಿಕ್ಕಾರ ಕೂಗಿದರು. ಅಮಿತ್ ಶಾ ಅವರನ್ನು ಕೂಡಲೇ ಗೃಹ ಸಚಿವ ಸ್ಥಾನದಿಂದ ವಜಾಗೊಳಿಸಿ ಬಂಧಿಸಬೇಕು. ಸಿಟಿ ರವಿ ಅವರ ಪರಿಷತ್ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಅವರು, ಬಿಜೆಪಿಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪ್ರಧಾನಿಯಾಗಲು, ಸರಕಾರ ನಡೆಸಲು, ಅಧಿಕಾರಕ್ಕಾಗಿ ಸಂವಿಧಾನ ಬೇಕು. ಆದರೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಬಿಜೆಪಿಗರಿಗೆ ತಾತ್ಸರ ಎಂದು ಆಕ್ರೋಶ ಹೊರಹಾಕಿದರು.
ಬಿಜೆಪಿ ಇಂದು ನೇರವಾಗಿ ಸಂವಿಧಾನವನ್ನು ವಿರೋಧ ಮಾಡುವ ಪ್ರಕಿಯೆ ಕಾಣುತ್ತಿದ್ದೇವೆ. ಅಮಿತ್ ಶಾ ಗೋಧ್ರಾ ಕರ್ಮಕಾಂಡದಲ್ಲಿ ಗಡೀಪಾರದ ವ್ಯಕ್ತಿ. ಅಂಬೇಡ್ಕರ್ ಕುರಿತು ಅವಹೇಳನಕಾರಿ ಮಾತನಾಡಿ ರಾಷ್ಟ್ರ ದ್ರೋಹ ಮಾಡಿದ್ದು ಕೂಡಲೇ ಅವರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರ ಮನಸ್ಸಿನಲ್ಲಿ ಮಹಿಳೆಯರ ಕುರಿತು ಏನಿದೇ ಎಂಬುವುದು ಸಾಬೀತಾಗಿದೆ. ಸಿಟಿ ರವಿ ಆಡಿದ ಮಾತಿಗೆ ಕ್ಷಮೆ ಕೇಳಬೇಕು. ಅವರ ವಿರುದ್ಧ ಉಗ್ರ ಶಿಕ್ಷೆ ವಿಧಿಸಬೇಕು. ವಿಧಾನ ಪರಿಷತ್ ಸದಸ್ಯತ್ವದಿಂದ ವಜಾಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಅಶೋಕ್ ಕುಮಾರ್, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ,ರಮೇಶ್ ಕಾಂಚನ್,ಹರೀಶ್ ಕಿಣಿ, ವೇರೊನಿಕಾ ಕರ್ನೆಲಿಯೋ, ನಾಗೇಶ್ ಉದ್ಯಾವರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ