ಉಡುಪಿ : ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್ ನಕಲಿ ಅಲ್ಲ. ಎನ್‌ಕೌಂಟರ್ ನಕಲಿ ಎಂದು ಅನುಮಾನ ಪಡುವುದು ಬೇಡ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಉಡುಪಿಯಯಲ್ಲಿ ಮಾತನಾಡಿದ ಸಚಿವೆ ಹೆಬ್ಬಾಳ್ಕರ್, ಎನ್ ಕೌಂಟರ್ ಕುರಿತು ನ್ಯಾಯಾಂಗ ತನಿಖೆಯ ಅವಶ್ಯಕತೆ ಇಲ್ಲ. ಅಗತ್ಯವಿದ್ದರೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರೊಂದಿಗೆ ಚರ್ಚೆ ನಡೆಸಲಾಗುವುದು ಎಂದರು.
ಕಾನೂನು ಪ್ರಕಾರ ಕಾನೂನು ಚೌಕಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ವಿಕ್ರಮ್ ಗೌಡ ವಿರುದ್ಧ ಹಲವು ಪ್ರಕರಣಗಳು ಇದ್ದವು. ನಕ್ಸಲೇಟ್ ಗಳನ್ನು ಕಟ್ಟಿ ಹಾಕಬೇಕು ಎಂಬುದು ಸರ್ಕಾರದ ನಿರ್ಧಾರ. ಕೂಂಬಿಂಗ್ ಮಾಡುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ವಿಕ್ರಂ ಗೌಡ ಬಳಿ ಕೂಡ ಶಸ್ತ್ರಾಸ್ತ್ರಗಳು ಇದ್ದವು. ವಿಕ್ರಂ ಗೌಡ ಒಂದು ಬಾರಿ ಫೈರಿಂಗ್ ಮಾಡಿದ್ದರಿಂದ ಪ್ರತಿ ದಾಳಿ ಮಾಡದಿದ್ದರೆ ಪೊಲೀಸರ ಜೀವಕ್ಕೆ ಹಾನಿ ಆಗುತ್ತಿತ್ತು ಎಂದರು.
ನಕ್ಸಲೈಟನ್ನು ಬೇರು ಸಮೇತ ಕಿತ್ತು ಹಾಕಬೇಕು. ಇದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಲುವು. ಪರ ವಿರೋಧ ಚರ್ಚೆ ಎಲ್ಲಾ ಸಂದರ್ಭದಲ್ಲಿ ಇರುತ್ತದೆ. ಸರ್ಕಾರ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆ. ಸಂಶಯ ಇದ್ದವರಿಗೆ ನಾವು ಮತ್ತೆ ಸ್ಪಷ್ಟನೆ ಕೊಡಲು ತಯಾರಿದ್ದೇವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ