ಉಡುಪಿ: 15ಲಕ್ಷ ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ: ಶಾಸಕ ಯಶ್ಪಾಲ್ ಸುವರ್ಣ
ಭಾರತ ದೇಶದ ಮುಂದಿನ ಭವಿಷ್ಯವನ್ನು ರೂಪಿಸಲಿರುವ ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆಯ ಉಡುಗೊರೆಯಾಗಿ ಕಳೆದ ವರ್ಷದಂತೆ ಉಡುಪಿ ವಿಧಾನಸಭಾ ಕ್ಷೇತ್ರದ ಸರಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜಿನ ಸುಮಾರು 20,000 ವಿದ್ಯಾರ್ಥಿಗಳಿಗೆ ರೂ. 15 ಲಕ್ಷ ವೆಚ್ಚದಲ್ಲಿ ಪೆನ್ ವಿತರಣೆ ಮಾಡುವುದಾಗಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದ 127 ಶಾಲಾ ಕಾಲೇಜುಗಳಿಗೆ ಸ್ಥಳೀಯ ಜನಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು ಹಾಗೂ ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ತೆರಳಿ ವಿದ್ಯಾರ್ಥಿಗಳಿಗೆ ಪೆನ್ ವಿತರಣೆ ಮಾಡಲಾಗುವುದು.
ಉಡುಪಿ ಜಿಲ್ಲೆ ಶಿಕ್ಷಣ ವ್ಯವಸ್ಥೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಶಿಕ್ಷಣಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈಗಾಗಲೇ ಸರಕಾರಿ ಶಾಲಾ ಕಾಲೇಜುಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಸರಕಾರಿ ಅನುದಾನದ ಜೊತೆ ಜೊತೆಗೆ ಹಲವಾರು ಕಂಪೆನಿಗಳ ಸಿ. ಎಸ್. ಆರ್. ನಿಧಿ ಹಾಗೂ ದಾನಿಗಳ ಸಹಕಾರ ಪಡೆದು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಶಾಸಕನ ನೆಲೆಯಲ್ಲಿ ವಿಶೇಷ ಆದ್ಯತೆ ನೀಡಿ ಕಾರ್ಯಪ್ರವೃತ್ತವಾಗಿದ್ದೇನೆ.
ಪ್ರತಿವರ್ಷ ಶಾಲಾರಂಭದ ದಿನದಂದು ಕೂಡ ಕ್ಷೇತ್ರದ 20 ಸಾವಿರ ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ ಸ್ವಾಗತಿಸುವ ಕಾರ್ಯಕ್ರಮ ಮಾಡುತ್ತಿದ್ದು, ಹಲವು ವರ್ಷಗಳಿಂದ ನಿರಂತರವಾಗಿ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಹಾಗೂ ಪುಷ್ಪಾನಂದ ಫೌಂಡೇಶನ್ ಮೂರು ಸಂಸ್ಥೆಗಳ ಮೂಲಕವೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿ ಉತ್ತೇಜಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ