Slider


ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಬರ್ಖಾಸ್ತು: ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ

Udupinews






 ಮಲ್ಪೆ ಬೀಚ್ ಅಭಿವೃದ್ಧಿ ಸಮಿತಿ ಬರ್ಖಾಸ್ತು: ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾ ಕುಮಾರಿ


ಉಡುಪಿ : ಕಳೆದ 20 ವರ್ಷಗಳಿಂದ ಮಲ್ಪೆ ಬೀಚ್ ಹಾಗೂ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆಯನ್ನು ನಿರ್ವಹಿಸುತ್ತಾ ಬಂದಿರುವ ಮಲ್ಪೆ ಅಭಿವೃದ್ಧಿ ಸಮಿತಿಯನ್ನು ಬರ್ಖಾಸ್ತುಗೊಳಿಸಲಾಗಿದೆ. ಅದರ ಅಧಿಕಾರ ಹಾಗೂ ಅದು ನಿರ್ವಹಿಸುತ್ತಿರುವ ಎಲ್ಲಾ ಕಾರ್ಯಗಳನ್ನು ಮತ್ತೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ತಿಳಿಸಿದ್ದಾರೆ.

ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಅವರು ಇದನ್ನು ಪ್ರಕಟಿಸಿದರು. ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.

20 ವರ್ಷಗಳ ಹಿಂದೆ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಮಲ್ಪೆ ಬೀಚ್ ಹಾಗೂ ಸೈಂಟ್ ಮೇರೀಸ್ ದ್ವೀಪದ ನಿರ್ವಹಣೆಯನ್ನು ಮಲ್ಪೆ ಅಭಿವೃದ್ಧಿ ಸಮಿತಿಗೆ ನೀಡಿತ್ತು. ಆದರೆ ಪ್ರಸ್ತುತ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗೆ ಹಾಗೂ ಸಮಿತಿಯ ಕಾರ್ಯ ವ್ಯಾಪ್ತಿಗೆ ಇದು ಅಡೆತಡೆಯಾಗುತ್ತಿರುವುದರಿಂದ ಹಾಗೂ ಕಾನೂನು ವ್ಯಾಪ್ತಿಯಲ್ಲೂ ತೊಂದರೆಯಾ ಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ನಿರ್ವಹಣೆಯ ಅಧಿಕಾರವನ್ನು ಹಿಂದಕ್ಕೆ ಪಡೆದು ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಮರಳಿ ನೀಡಲಾಗಿದೆ ಎಂದವರು ತಿಳಿಸಿದರು.

ಮಲ್ಪೆಯ ಕಡಲತೀರದಲ್ಲಿ ನಿರ್ಮಾಣಗೊಂಡಿರುವ ಪ್ಲೋಟಿಂಗ್ ಬ್ರಿಡ್ಜ್ ಚಟುವಟಿಕೆಯನ್ನು ಖಾಸಗಿಯವರು ನಿರ್ವಹಿಸು ತ್ತಿದ್ದು, ಇದರ ಆದಾಯದಲ್ಲಿ ಶೇ.75:25 ಅನುಪಾತದ ಅಡಿಯಲ್ಲಿ ನಿರ್ವಹಣೆ ಹಾಗೂ ಬೀಚ್ ಸ್ವಚ್ಛತಾ ನಿರ್ವಹಣೆಯನ್ನು ಬೀಚ್ ಅಭಿವೃದ್ಧಿ ಸಮಿತಿಯೇ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಮಲ್ಪೆ ಬೀಚ್‌ನಲ್ಲಿ ಜಿಪ್‌ಲೈನ್ ಚಟುವಟಿಕೆ ನಡೆಸಲು ಕೆಲವರು ಮುಂದೆ ಬಂದಿದ್ದು, ಅವರು ಸೂಕ್ತ ಪ್ರಾಧಿಕಾರದ ಪರವಾ ನಿಗೆ ಮತ್ತು ಎನ್‌ಓಸಿ ಪಡೆದು ಪ್ರವಾಸಿಗರ ಸುರಕ್ಷತೆಗೆ ಆದ್ಯತೆ ನೀಡಿ ಅವುಗಳನ್ನು ನಡೆಸುವುದು ಸೂಕ್ತ ಎಂದರು.

ಮಲ್ಪೆ-ಪಡುಕೆರೆ ಸೇತುವೆ ಪ್ರಾರಂಭಗೊಳ್ಳುವ ಸ್ಥಳದ ಸಮೀಪದ ಬೋಟ್ ಮೇಲೆ ಎಳೆಯುವ ಜಾಗದಿಂದ ಪ್ರವಾಸಿಗರನ್ನು ಬೆಳಗಿನಿಂದ ಸಂಜೆಯವರೆಗೆ ಸಮುದ್ರ ಹಾಗೂ ನದಿಯಲ್ಲಿ ವಿಹಾರ ನಡೆಸಿಕೊಂಡು ಬರುವ ಬೋಟ್ ನಡೆಸಲು ಖಾಸಗಿಯ ವರು ಮುಂದೆ ಬಂದಿದ್ದು, ಈ ಸಂಬಂಧ ಸಾಧಕ- ಬಾಧಕಗಳನ್ನು ಪರಿಶೀಲಿಸಿ, ನಿಯಮಾನುಸಾರ ಅನುಮತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.

ಪಡುಕೆರೆ-ಕಾಪು ಸೈಕಲ್ ಟ್ರ್ಯಾಕ್: ಕೇಂದ್ರ ಸರಕಾರದ ಸ್ವದೇಶ ದರ್ಶನ ಯೋಜನೆಯಡಿಯಲ್ಲಿ'ಚಾಲೆಂಜ್ ಬೇಸಡ್ ಡೆಸ್ಟಿನೇಷನ್ ಡೆವಲಪ್‌ಮೆಂಟ್' ಆಧಾರದಲ್ಲಿ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಇಕೋ ಟೂರಿಸಂ ಮತ್ತು ಅಮೃತ್ ಧರೋಹರ್ ಸೈಟ್ಸ್‌ಗಳಲ್ಲಿ 10 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಇದರಲ್ಲಿ ಪಡುಕೆರೆ ಯಿಂದ ಕಾಪುವರೆಗೆ ಸೈಕಲ್ ಟ್ರ್ಯಾಕ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ಯೋಜನಾ ವರದಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದೆ ಎಂದರು.

ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಸ್ಪೆಷಲ್ ಅಸಿಸ್ಟೆನ್ಸ್ ಟು ಸ್ಟೇಟ್ ಫಾರ್ ಕ್ಯಾಪಿಟಲ್ ಇನ್‌ವೆಸ್ಟ್‌ಮೆಂಟ್ ಯೋಜನೆಯಡಿ ಜಿಲ್ಲೆಯ ಬೈಂದೂರು ತಾಲೂಕು ಪಡುವರಿ ಗ್ರಾಮದ ಸೋಮೇಶ್ವರ ಬೀಚ್ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ ಎಂದೂ ಡಾ.ವಿದ್ಯಾಕುಮಾರಿ ಸಭೆಗೆ ತಿಳಿಸಿದರು.

ಸಭೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಎ ಸುವರ್ಣ, ಕುಂದಾಪುರ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.












0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo