ಬೀಚ್ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ, ಭದ್ರತೆಗೆ ಅಗತ್ಯಕ್ರಮ: ಉಡುಪಿ ಡಿಸಿ ವಿದ್ಯಾಕುಮಾರಿ ಸೂಚನೆ
ಉಡುಪಿ : ವಿವಿಧ ಜಿಲ್ಲೆ ಹಾಗೂ ಹೊರರಾಜ್ಯಗಳಿಂದ ಮಲ್ಪೆ ಕಡಲ ತೀರಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗೆ ಆದ್ಯತೆ ಯೊಂದಿಗೆ ಅಗತ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ವಾರದ ಕೊನೆಯ ದಿನಗಳಲ್ಲಿ ನಿರೀಕ್ಷೆಗೂ ಮೀರಿ ಪ್ರವಾಸಿಗರು ಹೊರ ರಾಜ್ಯ ಹಾಗೂ ಹೊರಜಿಲ್ಲೆಗಳಿಂದ ಆಗಮಿಸುತಿದ್ದಾರೆ. ಆದರೆ ಅವರಿಗೆ ಸ್ಥಳೀಯ ಕಡಲತೀರದ ಕುರಿತಂತೆ ಮಾಹಿತಿ ಇರುವುದಿಲ್ಲ. ಅವರಿಗೆ ಸರಿಯಾದ ಮಾಹಿತಿಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಯಾವುದೇ ಅವಘಡಗಳು ಸಂಭವಿಸದಂತೆ ತಡೆಯಲು ಸಾಧ್ಯ ಎಂದರು.
ಮಲ್ಪೆ ಕಡಲ ತೀರಕ್ಕೆ ಇದೀಗ ಅಧಿಕ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದರಿಂದ ಅವರ ಅನುಕೂಲಕ್ಕೆ ಅಗತ್ಯವಿರುವ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಮಲ್ಪೆ, ಪಡುಕೆರೆ ಬೀಚ್ ಪ್ರದೇಶದ ಸ್ವಚ್ಚತಾ ನಿರ್ವಹಣೆ, ಫುಡ್ಕೋರ್ಟ್, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒಳಗೊಂಡ ಬೀಚ್ ಪ್ರದೇಶದ ಮಾಸ್ಟರ್ ಪ್ಲಾನ್ನ್ನು ತಯಾರಿಸುವಂತೆ ಅವರು ನಿರ್ದೇಶನ ನೀಡಿದರು.
ಬಂದರು ಮತ್ತು ಮೀನುಗಾರಿಕಾ ಚಟುವಟಿಕೆಗಳ ಪ್ರದೇಶಗಳ ಸ್ಥಳವನ್ನು ಮೀಸಲಿರಿಸಿ, ಪ್ರವಾಸಿಗರಿಗೆ ಅನುಕೂಲವಾ ಗುವ ರೀತಿಯಲ್ಲಿ ಸಮಗ್ರವಾದ ವರದಿಯನ್ನು ಶೀಘ್ರವಾಗಿ ತಯಾರಿಸಬೇಕು ಎಂದು ಅವರು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಜೀವರಕ್ಷಕ ಸಿಬ್ಬಂದಿಗಳ ನೇಮಕ: ಮಲ್ಪೆ ಕಡಲ ತೀರದಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಯಾವುದೇ ಅಭಿವೃದ್ಧಿ ಕಾಮಗಾರಿಯನ್ನು ರೂಪಿಸುವಾಗ ಸುರಕ್ಷತೆಗೆ ಪ್ರಥಮ ಆದ್ಯತೆಯನ್ನು ನೀಡಿ ಕಾಮಗಾರಿಗಳನ್ನು ಕೈಗೊಳ್ಳಬೇಕು. ಬೀಚ್ ಪ್ರದೇಶಗಳಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಭದ್ರತೆಗಾಗಿ ಅಗತ್ಯವಿರುವ ಜೀವ ರಕ್ಷಕ ಸಿಬ್ಬಂದಿಗಳನ್ನು ಆಯ್ಕೆ ಮಾಡಿ, ಅವರಿಗೆ ಅಗತ್ಯವಿರುವ ತರಬೇತಿ ನೀಡಿ ಅವರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಬೇಕು ಎಂದರು.
ಸೈಂಟ್ ಮೇರೀಸ್ ದ್ವೀಪಕ್ಕೆ ಅಗತ್ಯವಿರುವ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದ ಡಾ.ವಿದ್ಯಾಕುಮಾರಿ, ಬೀಚಿನ ಅಲ್ಲಲ್ಲಿ ಹೈ ಮಾಸ್ಟ ಬೀದಿ ದೀಪಗಳನ್ನು ಅಳವಡಿಸಬೇಕು. ಅವುಗಳ ನಿರ್ವಹಣೆಯನ್ನು ಆಗಾಗ ಕೈಗೊಳ್ಳುವ ಜೊತೆಗೆ ಆ ಪ್ರದೇಶಗಳಲ್ಲಿ ಬೆಳಕಿನ ಅಭಾವ ಆಗದಂತೆ ಎಚ್ಚರ ವಹಿಸಬೇಕು ಎಂದರು.
ಮಲ್ಪೆ ಬೀಚ್ ಪ್ರದೇಶದಲ್ಲಿ ಜಲ ಸಾಹಸ ಚಟುವಟಿಕೆಗಳನ್ನು ನಡೆಸುವಾಗ ಗುತ್ತಿಗೆದಾರರು ಬೋಟ್ನ ಸಾಮರ್ಥ್ಯ ಮೀರಿ ಅಧಿಕ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಗುತ್ತಿಗೆದಾರರು ನಿಯಮ ಮೀರಿ ಹಾಗೂ ಸಾಮರ್ಥ್ಯ ಮೀರಿ ಪ್ರವಾಸಿಗರನ್ನು ಬೋಟ್ನಲ್ಲಿ ಕರೆದುಕೊಂಡು ಬಂದಲ್ಲಿ ದಂಡ ವಿಧಿಸುವುದರ ಜೊತೆಗೆ ನೋಟಿಸ್ ನೀಡಬೇಕೆಂದೂ ಅವರು ಸೂಚನೆಗಳನ್ನು ನೀಡಿದರು.
ಸಭೆಯಲ್ಲಿ ಶಾಸಕ ಯಶ್ಪಾಲ್ ಎ ಸುವರ್ಣ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ, ಪೌರಾಯುಕ್ತ ಉದಯಕುಮಾರ ಶೆಟ್ಟಿ, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆಯ ಸದಸ್ಯರಾದ ಯೋಗೀಶ್ ಸಾಲಿಯಾನ್, ಲಕ್ಷ್ಮಿ ಮಂಜುನಾಥ್ ಹಾಗೂ ವಿಜಯ ಕೊಡವೂರು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ