ಉಡುಪಿ: ಕಾಂಗ್ರೆಸ್ ಎಂದೂ ಸಂವಿಧಾನದ ಪರ ಇಲ್ಲ. ಬಿಜೆಪಿ ಮೇಲೆ ಸುಳ್ಳು ಆರೋಪ ಮಾಡುತ್ತಲೇ ಬಂದಿದೆ. ಅಂದು ಜವಹಾರ್ ಲಾಲ್ ನೆಹರೂ, ಇಂದು ಸಿದ್ದರಾಮಯ್ಯ ಅವರು ಎಸ್ಸಿ ಎಸ್ಟಿಗಳಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎನ್. ಮಹೇಶ್ ಹೇಳಿದರು.
ಸಿಟಿಜನ್ ಫಾರ್ ಸೋಶಿಯಲ್ ಜಸ್ಟಿಸ್ ವತಿಯಿಂದ ಅಂಬಲಪಾಡಿಯ ಕಾರ್ತಿಕ್ ಎಸ್ಟೇಟ್‌ನಲ್ಲಿ ಆಯೋಜಿಸಿದ ಸಂವಿಧಾನ ಸಮ್ಮಾನ ಹಾಗೂ ಸಂವಿಧಾನ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯ ಹಾಗೂ ಸಂವಿಧಾನ ಜತೆ ಜತೆಗೆ ಹೋಗಬೇಕಿತ್ತು. ಆದರೆ, ಸಂವಿಧಾನ ದಿನ ಆಚರಣೆಗೆ ಪ್ರಧಾನಿ ಮೋದಿಯವರು ಬಂದು ನಿರ್ಧಾರ ತೆಗೆದುಕೊಳ್ಳಬೇಕಾಯಿತು. 60 ವರ್ಷ, ಆಡಳಿತ ಮಾಡಿದವರಿಗೆ ಸಂವಿಧಾನ ದಿನ ಆಚರಿಸಲು ಏಕೆ ಸಾಧ್ಯವಾಗಿಲ್ಲ?. ಸಂವಿಧಾನ ಎಂದರೆ ಕಾಂಗ್ರೆಸ್ ಗೆ ಭಯವೇ ಎಂದು ಪ್ರಶ್ನಿಸಿದರು.
ಭಾರತ ಪ್ರಸ್ತುತ ಸಮಗ್ರವಾಗಿ ಉಳಿದಿದ್ದರೆ ಅದು ಡಾ. ಬಿ.ಆರ್. ಅಂಬೇಡ್ಕರ್ ಅವರು ರೂಪಿಸಿದ ಸಂವಿಧಾನ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಗಟ್ಟಿ ನಿರ್ಧಾರದಿಂದಲೇ ಹೊರತು ಕಾಂಗ್ರೆಸ್ ನಿಂದ ಅಲ್ಲ ಎಂದು ಹೇಳಿದರು.
ದಲಿತ ಮುಖಂಡ ಗೋಕುಲ್ ದಾಸ್ ಬಾರಕೂರು ಅಧ್ಯಕ್ಷತೆ ವಹಿಸಿದ್ದರು. ವಿಭಾಗೀಯ ಸಂಚಾಲಕ ಕೆ. ಉದಯ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಮುಖರಾದ ವಿಕಾಸ್ ಪುತ್ತೂರು, ಚರಣ್ ಗುಂಜೂರು, ದಿನಕರ ಬಾಬು, ಜಿಲ್ಲಾ ಸಂಚಾಲಕಿ ರೇಷ್ಮಾ ಉದಯ ಶೆಟ್ಟಿ ಉಪಸ್ಥಿತರಿದ್ದರು.
ಶ್ರೀಕಾಂತ್ ನಾಯಕ್ ಸ್ವಾಗತಿಸಿದರು, ಶಶಾಂಕ್ ಶಿವತ್ತಾಯ ಅತಿಥಿ ಪರಿಚಯ ಮಾಡಿದರು. ಉಮೇಶ್ ನಾಯ್ಕ್ ಚೇರ್ಕಾಡಿ ಪ್ರತಿಜ್ಞಾವಿಧಿ ಬೋಧಿಸಿದರು. ರತ್ನಾಕರ ಇಂದ್ರಾಳಿ ನಿರೂಪಿಸಿ, ವಿಜಯ ಕೊಡವೂರು ವಂದಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ