ಬ್ರಹ್ಮಾವರ : ಮಹಿಳೆಗೆ ಚುಡಾಯಿಸಿದ ಆರೋಪದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಗೆ ಕರೆ ತಂದಿದ್ದ ಕೇರಳ ಮೂಲದ ಕಾರ್ಮಿಕರೊಬ್ಬರು ಇಂದು ನಸುಕಿನ ವೇಳೆ ಸೆಲ್ ನ ಬಾತ್ ರೂಮಿನೊಳಗೆ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತರನ್ನು ಕೇರಳ ರಾಜ್ಯ ಕೊಲ್ಲಂ ಮೂಲದ ಬಿಜು ಮೋಹನ್(42) ಎಂದು ಗುರುತಿಸಲಾಗಿದೆ. ಇವರು ಹಂಗಾರಕಟ್ಟೆ ಮೀನು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಮೂರು ದಿನಗಳ ಹಿಂದೆಯಷ್ಟೆ ಇಲ್ಲಿಗೆ ಕೆಲಸಕ್ಕೆ ಸೇರಿಕೊಂಡಿದ್ದರು. ಸೂರಬೆಟ್ಟು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಿಜು ಮೋಹನ್, ನ.9ರಂದು ರಾತ್ರಿ ವೇಳೆ ಅಲ್ಲೇ ಸಮೀಪದ ಮನೆಯಲ್ಲಿ ವಾಸವಿದ್ದ ಮಹಿಳೆಯನ್ನು ಚುಡಾಯಿಸಿದ್ದರು ಎಂದು ಆರೋಪಿಸಲಾಗಿದೆ.
ಆ ವೇಳೆ ಮಹಿಳೆ ಬೊಬ್ಬೆ ಹಾಕಿದ್ದು, ಸ್ಥಳೀಯರು ಜಮಾಯಿಸಿ ಬಿಜು ಮೋಹನ್ ನನ್ನು ಹಿಡಿದು ಮನೆಯೊಳಗೆ ಕೂಡಿ ಹಾಕಿದ್ದರು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು, ಆರೋಪಿಯನ್ನು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದಿದ್ದರು ಎಂದು ತಿಳಿದುಬಂದಿದೆ.
ಮದ್ಯ ಸೇವಿಸಿದ್ದರೆನ್ನಲಾದ ಬಿಜು ಮೋಹನ್ ರನ್ನು ಸೆಲ್ ನಲ್ಲಿ ಇರಿಸಲಾಗಿದ್ದು, ಇಂದು ನಸುಕಿನ ವೇಳೆ 3:30ರ ಸುಮಾರಿಗೆ ಆತ ಸಮೀಪದ ಬಾತ್ ರೂಮಿನಲ್ಲಿ ಕುಸಿದುಬಿದ್ದಿರುವುದು ಕಂಡುಬಂದಿದೆ. ತಕ್ಷಣ ಆತನನ್ನು ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು, ಪರೀಕ್ಷಿಸಿದಾಗ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಮೆಂಟ್ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ