ತೆಂಕುತಿಟ್ಟು ಯಕ್ಷಗಾನ ರಂಗದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ್ ಆಚಾರ್ಯ ನಿಧನ
ಮಂಗಳೂರು: ತೆಂಕುತಿಟ್ಟಿನ ಯಕ್ಷಗಾನದ ಹಾಸ್ಯರಾಜ ಎಂದೇ ಪ್ರಖ್ಯಾತಿ ಪಡೆದ ಶುದ್ಧ ಹಾಸ್ಯ ನೀಡುವ ಮೂಲಕ ಪ್ರೇಕ್ಷಕರ ಮನರಂಜಿಸುತ್ತಿದ್ದ ಬಂಟ್ವಾಳ ಜಯರಾಮ ಆಚಾರ್ಯ ಹೃದಯಾಘಾತದಿಂದ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ.
ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರು ಇಂದು ಮುಂಜಾನೆ ನಾಲ್ಕು ಗಂಟೆಗೆ ಬೆಂಗಳೂರಿನಲ್ಲಿ ಹೃದಯಘಾತವಾಗಿದೆ.
ಹಿರಿಯ ಕಲಾವಿದ ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಅ. 21ರಿಂದ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಿದ್ದರು. ಜೊತೆಗಿದ್ದ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲವಾಗದೆ ನಿಧನ ಹೊಂದಿದ್ದಾರೆ. ಅವರಿಗೆ 67 ವರ್ಷ ವಯಸ್ಸಾಗಿತ್ತು.
1957ರಲ್ಲಿ ಜನಿಸಿದ್ದ ಜಯರಾಮ ಆಚಾರ್ಯರ ತಂದೆ ಬಂಟ್ವಾಳ ಗಣಪತಿ ಆಚಾರ್ಯ ಕೂಡ ಕಲಾವಿದರಾಗಿದ್ದು, ವಿವಿಧ ಮೇಳಗಳಲ್ಲಿ ಹಾಸ್ಯ ಕಲಾವಿದರಾಗಿಯೂ ಸೇವೆ ಸಲ್ಲಿಸಿದ್ದರು. ತಾಳಮದ್ದಳೆಗಳನ್ನು ನೋಡುತ್ತಾ ಬೆಳೆದಿದ್ದ ಜಯರಾಮ ಆಚಾರ್ಯರು ತಂದೆಯವರ ಜತೆ ಯಕ್ಷಗಾನ ಪ್ರದರ್ಶನಗಳಿಗೆ ಹೋಗಿ ಆಸಕ್ತಿ ಬೆಳೆಸಿಕೊಂಡಿದ್ದರು. ನಾಟ್ಯಾಭ್ಯಾಸ ಮಾಡುವ ಮೊದಲೇ ಒಂದಷ್ಟು ಮೇಳಗಳಲ್ಲಿ ಸೇವೆ ಸಲ್ಲಿಸಿರುವುದು ಅವರ ಹೆಗ್ಗಳಿಕೆಯಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ಲಲಿತಾ ಕಲಾಕೇಂದ್ರದಲ್ಲಿ ಪಡ್ರೆ ಚಂದು ಅವರಿಂದ ಯಕ್ಷಗಾನ ನಾಟ್ಯವನ್ನು ಕಲಿತಿದ್ದು, ಆ ಸಂದರ್ಭದಲ್ಲಿ ಈಗಿನ ಹಲವು ಪ್ರಸಿದ್ಧ ಕಲಾವಿದರು ಅವರ ಸಹಪಾಠಿಗಳಾಗಿದ್ದರು.
ಬಳಿಕ ಕಟೀಲು ಮೇಳ, ಪುತ್ತೂರು ಮೇಳ, ಸುಂಕದಕಟ್ಟೆ ಮೇಳ, ಕದ್ರಿ ಮೇಳ, ಕುಂಬ್ಳೆ ಮೇಳ, ಸುರತ್ಕಲ್ ಮೇಳ, ಎಡನೀರು ಮೇಳ, ಹೊಸನಗರ ಮೇಳ ಸೇವೆ ಸಲ್ಲಿಸಿ, ಕಳೆದ ವರ್ಷ ಹನುಮಗಿರಿ ಮೇಳದಲ್ಲಿದ್ದು, ಈ ವರ್ಷದಿಂದ ಹಿರಿಯಡ್ಕ ಮೇಳದಲ್ಲಿ ಹಾಸ್ಯ ಕಲಾವಿದರಾಗಿ ಸೇವೆ ಸಲ್ಲಿಸಬೇಕಿತ್ತು.
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಕಳೆದ 2 ದಿನಗಳ ಹಿಂದಷ್ಟೇ ಅವರಿಗೆ ಕಡಬದ್ವಯರ ಸಂಸ್ಕರಣಾ ಪ್ರಶಸ್ತಿ ಘೋಷಣೆಯಾಗಿದ್ದು, ಅ. 27ರಂದು ಅವರು ಪ್ರಶಸ್ತಿ ಸ್ವೀಕರಿಸಬೇಕಿತ್ತು. ಯಕ್ಷಗಾನದ ಜತೆಗೆ ರಂಗಭೂಮಿ, ಸಿನಿಮಾಗಳಲ್ಲೂ ಬಣ್ಣ ಹಚ್ಚಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ