ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ: ಮಾಜಿ ಸಚಿವ ನಾಗೇಂದ್ರ ಜಾಮೀನು ರದ್ದತಿ ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಇ ಡಿ
ವಾಲ್ಮೀಕಿ ಅಭಿವೃದ್ದಿ ನಿಗಮ ಬಹುಕೋಟಿ ಹಗರಣಕ್ಕೆ ಸಂಬಂಧಪಟ್ಟಂತೆ ಜೈಲಿನಿಂದ ಬಿಡುಗಡೆಯಾಗಿದ್ದ ಮಾಜಿ ಸಚಿವ ಬಿ, ನಾಗೇಂದ್ರ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೀಡಿದ್ದ ಜಾಮೀನು ವಜಾ ಮಾಡಬೇಕು ಎಂದು ಇಡಿ ಹೈ ಕೋರ್ಟ್ ಮೆಟ್ಟಿಲೇರಿದ್ದು, ಇಂದು ಅರ್ಜಿ ವಿಚಾರಣೆ ನಡೆಯಲಿದೆ.
ವಾಲ್ಮೀಕಿ ಅಭಿವೃದ್ದಿ ಹಗರಣದಲ್ಲಿ ಜೈಲು ಸೇರಿದ್ದ ಬಿ ನಾಗೇಂದ್ರ ಅ.16 ರಂದು ಬಿಡುಗಡೆಯಾಗಿದ್ದರು. ಬಳಿಕ ಇಡಿ ಅಧಿಕಾರಿಗಳು ಸಾಕಷ್ಟು ಕಿರುಕುಳ ನೀಡಿದ್ದರು, ಯಾವುದೇ ತಪ್ಪು ಮಾಡದೇ ಮೂರು ತಿಂಗಳು ಜೈಲಿನಲ್ಲಿ ಸೆರೆವಾಸ ಅನುಭವಿಸುವಂತೆ ಮಾಡಿದರು ಎಂದು ನಾಗೇಂದ್ರ ಆಕ್ರೋಶ ಹೊರಹಾಕಿದ್ದರು.
ಇದೀಗ ಇಡಿ ಅಧಿಕಾರಿಗಳು ಮಾಜಿ ಸಚಿವ ನಾಗೇಂದ್ರ ಅವರ ಜಾಮೀನು ವಜಾ ಮಾಡಬೇಕು ಎಂದು ಹೈಕೋರ್ಟ್ ನಲ್ಲಿ ಬುಧವಾರ ಅರ್ಜಿ ಸಲ್ಲಿಸಿದ್ದು, ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇಂದು ವಿಚಾರಣೆ ನಡೆಸಲಿದೆ.
ಈ ಪ್ರಕರಣದಲ್ಲಿ ನಾಗೇಂದ್ರ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದಲ್ಲದೇ ಹಣವನ್ನು ಚುನಾವಣೆ ಖರ್ಚಿಗೆ ದುರ್ಬಳಕೆ ಮಾಡಿಕೊಂಡಿದ್ದಾರೆ ಮತ್ತು ಈ ಕುರಿತಂತೆ ಸಾಕ್ಷ್ಯಗಳನ್ನು ತನಿಖೆಯ ವೇಳೆ ಪತ್ತೆ ಮಾಡಲಾಗಿದೆ.
ಅಂತೆಯೇ, ಹಣ ಅಕ್ರಮ ವರ್ಗಾವಣೆ ಕಾಯ್ದೆ-2002ರ ಕಲಂ 45ರ ಅನುಸಾರ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲವಾದ್ದರಿಂದ ಪ್ರಕರಣದ ಪ್ರಮುಖ ಆರೋಪಿಯಾದ ಬಿ.ನಾಗೇಂದ್ರ ಅವರಿಗೆ ವಿಚಾರಣಾ ನ್ಯಾಯಾಲಯ ನೀಡಿರುವ ಜಾಮೀನು ಆದೇಶವನ್ನು ರದ್ದುಪಡಿಸಬೇಕು ಎಂದು ಇಡಿ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ