ಉಡುಪಿ: ಕಳೆದ ವರ್ಷ ಕೇಸ್ ಒಂದರಲ್ಲಿ ಸಿಲುಕಿ ಜೈಲು ಸೇರಿದ್ದ ಚೈತ್ರಾ ಕುಂದಾಪುರ ಬಿಗ್ ಬಾಸ್ ಗೆ ಎಂಟ್ರಿ ಕೊಟ್ಟಿದ್ದಾರೆ. ತಮ್ಮ ಭಾಷಣಗಳ ಮೂಲಕವೇ ಹಿಂದೂ ಫೈರ್ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿದ್ದ ಚೈತ್ರ ಕುಂದಾಪುರ ವಂಚನೆ ಪ್ರಕರಣದಲ್ಲಿ ಕಂಬಿ ಎಣಿಸುವಂತಾಗಿತ್ತು.
ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ ಆರೋಪ ಅವರ ಮೇಲಿದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಅಂತಾ ಚೈತ್ರಾ ಕುಂದಾಪುರ ನಂಬಿಸಿ 7 ಕೋಟಿ ರೂಪಾಯಿ ವಸೂಲಿ ಮಾಡಿದ್ರು ಎಂದು ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಚೈತ್ರಾ ಕುಂದಾಪುರ ಸೇರಿದಂತೆ ಒಟ್ಟು 8 ಮಂದಿ ವಿರುದ್ಧ ದೂರು ದಾಖಲಾದ ದಿನದಿಂದಲೇ ಚೈತ್ರಾ ಕುಂದಾಪುರ ತಲೆಮರೆಸಿಕೊಂಡಿದ್ದರು. ನಂತರ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಮತ್ತು ಸಂಗಡಿಗರನ್ನು ಬಂಧಿಸಿದ್ದರು. ಈ ಪ್ರಕರಣದ ನಂತರ ಚೈತ್ರ ಕುಂದಾಪುರ ಸಂಪೂರ್ಣ ತೆರೆಮರೆಗೆ ಸರಿದಿದ್ದರು. ಆ ನಂತ್ರ ಇದೀಗ ಚೈತ್ರಾ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.
ಚೈತ್ರಾ ಉಡುಪಿ ಜಿಲ್ಲೆಯ ಕುಂದಾಪುರದವರು. ತೆಕ್ಕಟ್ಟೆಯಲ್ಲಿ ಪಿಯುಸಿ ವ್ಯಾಸಂಗ ಮುಗಿಸಿದ ಬಳಿಕ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿದ್ದರು. ಕೆಲ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಿದ್ದರು ಎಂದು ಹೇಳಲಾಗುತ್ತದೆ. ಇನ್ನು ಕಾಲೇಜು ದಿನಗಳಲ್ಲೇ ಆಕೆ ಎಬಿವಿಪಿ ಸಂಘಟನೆಯಲ್ಲಿ ಗುರ್ತಿಸಿಕೊಂಡಿದ್ದರು. ಹಾಲು ಮಾರುವವರ ಮನೆಯಿಂದ ಬಂದವಳು ನಾನು ಎಂದು ಚೈತ್ರಾ ಹಿಂದೆ ಹೇಳಿಕೊಂಡಿದ್ದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಆಗಿ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿಯೂ ಚೈತ್ರಾ ಕೆಲಸ ಮಾಡಿದ್ದರು. ಲೇಖಕಿಯಾಗಿ ಪ್ರೇಮಪಾಶ ಎಂಬ ಕೃತಿಯನ್ನು ಬರೆದಿದ್ದಾರೆ. ತಮ್ಮ ದ್ವೇಷ ಭಾಷಣಗಳಿಂದಲೂ ಈಕೆ ಸದ್ದು ಮಾಡಿದ್ದರು. ಆದರೆ ಇದ್ದಕ್ಕಿದ್ದಂತೆ ವಂಚನೆ ಆರೋಪ ಪ್ರಕರಣದಲ್ಲಿ ಜೈಲು ಸೇರುವಂತಾಗಿತ್ತು. ಜಾಮೀನು ಪಡೆದು ಹೊರ ಬಂದಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ