2019ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಣಿಯಾಗಿರುವ ವಾಹನಗಳ ಮಾಲೀಕರಿಗೆ ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಅತಿ ಸುರಕ್ಷಿತ ನೋಂದಣಿ ಫಲಕ (ಹೆಚ್.ಎಸ್.ಆರ್.ಪಿ) ಅಳವಡಿಕೆಗೆ ನೀಡಲಾಗಿದ್ದ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಿದ್ದು, ವಾಹನ ಸವಾರರು ತರಾತುರಿಯಿಲ್ಲದೆ ಹೆಚ್.ಎಸ್.ಆರ್.ಪಿ ಅಳವಡಿಸಿಕೊಳ್ಳಬಹುದಾಗಿದೆ.
ಹೈ ಸೆಕ್ಯುರಿಟಿ ನೋಂದಣಿ ಫಲಕ ಅಳವಡಿಕೆ ಸಮಯದ ಡೆಡ್ಲೈನ್ಗೆ ಕಡೆಯ ಮೂರು ದಿನ ಬಾಕಿ ಇದ್ದು, ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳದೆ ಆತಂಕಕ್ಕೆ ಸಿಲುಕಿರುವ ವಾಹನ ಮಾಲೀಕರಿಗೆ ರಾಜ್ಯ ಸರ್ಕಾರ ಮತ್ತೊಂದು ಅವಕಾಶ ನೀಡಿದೆ. ನವೆಂಬರ್ 17 ಕ್ಕೆ ಅಂತಿಮ ಗಡುವು ಇದ್ದರೂ, ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಕೆ ಕಾರ್ಯ ನಡೆಯದಿರುವುದರಿಂದಾಗಿ ವಾಹನ ಮಾಲೀಕರನ್ನು ದೃಷ್ಟಿಯಲ್ಲಿರಿಸಿಕೊಂಡು ಮತ್ತೊಂದು ಅವಕಾಶ ನೀಡಬೇಕು ಎನ್ನುವ ನಿರ್ಧಾರಕ್ಕೆ ಸಾರಿಗೆ ಇಲಾಖೆ ಬಂದಿದೆ. ಹಾಗಾಗಿ ನವೆಂಬರ್ 17ಕ್ಕೆ ಬದಲಾಗಿ 2024ರ ಫೆಬ್ರವರಿ 17ಕ್ಕೆ ಡೆಡ್ ಲೈನ್ ನಿಗದಿಪಡಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ರಾಜ್ಯದಲ್ಲಿ ಹೆಚ್ಎಸ್ಆರ್ಪಿ ಅಳವಡಿಕೆ ಕಾರ್ಯ ನಡೆಯುತ್ತಿದೆ. ಆದರೆ ಕೆಲವರು ಕೋರ್ಟ್ಗೆ ಹೋಗಿದ್ದರಿಂದ ವಿಳಂಬವಾಗಿದೆ. ಇನ್ನು ಕೋರ್ಟ್ನಲ್ಲಿ ಪ್ರಕರಣ ನಡೆಯುತ್ತಿದೆ. ಆದ್ದರಿಂದ ವಾಹನ ಮಾಲೀಕರ ಹಿತದೃಷ್ಟಿಯಿಂದಾಗಿ ಗಡುವನ್ನು ಮೂರು ತಿಂಗಳ ಕಾಲ ವಿಸ್ತರಣೆ ಮಾಡಲು ನಿರ್ಧರಿಸಿದ್ದೇವೆ. 2024ರ ಫೆಬ್ರವರಿ 17ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿದ್ದೇವೆ. ಇನ್ನು ಮೂರು ತಿಂಗಳ ಕಾಲ ದಂಡ ಶುಲ್ಕವಿಲ್ಲದೆ ಹೆಚ್ಎಸ್ಆರ್ಪಿ ಅಳವಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ