ಬೆಂಗಳೂರು: ವಂಚನೆ ಪ್ರಕರಣದ ಆರೋಪಿ 'ಬಿಟಿವಿ' ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಜಿ.ಎಂ. ಕುಮಾರ್ ಅವರನ್ನು ವಿಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ಪಶ್ಚಿಮ ವಿಭಾಗದ ಡಿಸಿಪಿ ಎಸ್. ಗಿರೀಶ್ ಮಾಹಿತಿ ನೀಡಿದ್ದು, ಜಾಮೀನು ರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿಯಾಗಿದ್ದರಿಂದ ಕುಮಾರ್ ಅವರನ್ನು ಬೆಂಗಳೂರು ವಿಜಯನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ವಿಚಾರಣೆ ನಡೆಸಿದ ನ್ಯಾಯಾಲಯ, ಕುಮಾರ್ ಅವರನ್ನು ಮುಂದಿನ 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ತಿಳಿಸಿದರು.
ಕುಮಾರ್ ವಿರುದ್ಧ ಅಶ್ವಿನ್ ಮಹೇಂದ್ರ ಎಂಬುವವರು ದೂರು ನೀಡಿದ್ದರು. ಈ ಹಿನ್ನೆಲೆ ಐಪಿಸಿ 402 (ನಂಬಿಕೆ ದ್ರೋಹ) ಹಾಗೂ ಐಪಿಸಿ 420 (ವಂಚನೆ) ಆರೋಪದಡಿ ಕುಮಾರ್ ವಿರುದ್ಧ 2022ರಲ್ಲಿ ವಿಜಯನಗರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ದೂರುದಾರ ಅಶ್ವಿನ್ ಮಹೇಂದ್ರ ಹಾಗೂ ಕುಮಾರ್ ಇಬ್ಬರೂ ಪಾಲುದಾರಿಕೆಯಲ್ಲಿ ಈಗಲ್‌ಸೈಟ್ ಮಿಡಿಯಾ ಕಂಪನಿ ಆರಂಭಿಸಿದ್ದರು. ಇಬ್ಬರೂ ಕಂಪನಿಯ ನಿರ್ದೇಶಕರಾಗಿದ್ದರು.
ಆರೋಪಿ ಕುಮಾರ್, ಒಬ್ಬರೇ ಕಾನೂನು ಬಾಹಿರವಾಗಿ ಆಡಳಿತ ಮಂಡಳಿ ಸಭೆ ನಡೆಸಲಾರಂಭಿಸಿದ್ದರು. ಅಶ್ವಿನ್ ಅವರ ದಾಖಲಾತಿಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ಗಳಲ್ಲಿ ಖಾತೆ ತೆರೆದು ಕೋಟಿಗೂ ಹೆಚ್ಚು ವಹಿವಾಟು ನಡೆಸಿದ್ದರೆಂಬ ಆರೋಪವಿತ್ತು. ಈ ಹಿನ್ನೆಲೆ ಕುಮಾರ್ ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದರು. ಇದೀಗ ಶನಿವಾರ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ವಿಜಯನಗರ ಪೊಲೀಸರ್ ಬಂಧಿಸಿದ್ದಾರೆ.
ಕುಮಾರ್ ಗೆ ನೋಟಿಸ್ ಜಾರಿಯಾದರೂ ವಿಚಾರಣೆಗೆ ಹೋಗಿರಲಿಲ್ಲ. ಈತನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯ, ಇತ್ತೀಚೆಗೆ ಎನ್‌ಬಿಡಬ್ಲ್ಯು ಜಾರಿ ಮಾಡಿತ್ತು. ಆರೋಪಿ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಶನಿವಾರ ಮನೆಯ ಬಳಿ ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಕುಮಾರ್ ಅವರನ್ನು ವಶಕ್ಕೆ ಪಡೆಯಲಾಯಿತು ಎಂದು ಡಿಸಿಪಿ ಎಸ್.ಗಿರೀಶ್ ಹೇಳಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ