ಇಸ್ರೇಲ್ ಮೇಲೆ ಪ್ಯಾಲೆಸ್ತೀನ್ನ ಹಮಾಸ್ ಉಗ್ರರು 5 ಸಾವಿರ ರಾಕೆಟ್ಗಳಿಂದ ದಾಳಿ ಮಾಡಿದ್ದನ್ನು ಖಂಡಿಸಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಮಂಗಳೂರು ಮೂಲದ ವೈದ್ಯನನ್ನು ಬಹರೇನ್ ಪೊಲೀಸರು ಬಂಧಿಸಿದ್ದಾರೆ.
ಡಾ. ಸುನೀಲ್ ರಾವ್, ಬಂಧನಕ್ಕೆ ಒಳಗಾದ ವೈದ್ಯ. ಸೈಬರ್ ಅಪರಾಧವೆಂದು ಪರಿಗಣಿಸಿ ಸುನೀಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸುನೀಲ್ ಕ್ಷಮೆ ಸಹ ಕೋರಿದ್ದರು. ನಾನು ಈ ವೇದಿಕೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗೆ ಕ್ಷಮೆಯಾಚಿಸುತ್ತೇನೆ. ಪ್ರಸ್ತುತ ಸಂದರ್ಭದಲ್ಲಿ ಇದೊಂದು ಸೂಕ್ಷ್ಮ ವಿಚಾರ. ಓರ್ವ ವೈದ್ಯನಾಗಿ ಎಲ್ಲ ಜೀವಗಳು ತುಂಬಾ ಮುಖ್ಯ. ನಾನು ಈ ದೇಶವನ್ನು ಮತ್ತು ಇಲ್ಲಿನ ಜನರನ್ನು ಹಾಗೂ ಧರ್ಮವನ್ನು ತುಂಬಾ ಗೌರವಿಸುತ್ತೇ. ಕಳೆದ 10 ವರ್ಷಗಳಿಂದ ನಾನಿಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ ಎಂದು ಸುನೀಲ್ ಹೇಳಿದ್ದಾರೆ.
ಕ್ಷಮೆಯಾಚನೆ ಮಾಡಿದರೂ ಸುನೀಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇದಿಷ್ಟೇ ಅಲ್ಲದೆ, ಆಸ್ಪತ್ರೆಯ ಕೆಲಸದಿಂದಲೂ ಸುನೀಲ್ ಅವರನ್ನು ವಜಾಗೊಳಿಸಲಾಗಿದೆ. ಸುನೀಲ್ ಅವರು ರಾಯಲ್ ಬಹರೇನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಆಸ್ಪತ್ರೆಯ ಮಂಡಳಿ, ನಮ್ಮ ಆಸ್ಪತ್ರೆಯಲ್ಲಿ ಇಂಟರ್ನಲ್ ಮೆಡಿಸಿನ್‌ನಲ್ಲಿ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸುನೀಲ್ ರಾವ್ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ ನಮ್ಮ ಸಮಾಜಕ್ಕೆ ಆಕ್ಷೇಪಾರ್ಹವಾಗಿದೆ. ಅವರ ಪೋಸ್ಟ್ಗಳು ಮತ್ತು ಸಿದ್ಧಾಂತಗಳು ವೈಯಕ್ತಿಕವಾಗಿದ್ದು, ಆಸ್ಪತ್ರೆಯ ಅಭಿಪ್ರಾಯ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವುದಿಲ್ಲ ಎಂಬುದನ್ನು ನಾವು ಖಚಿತಪಡಿಸಲು ಬಯಸುತ್ತೇವೆ. ಇದು ನಮ್ಮ ನೀತಿ ಸಂಹಿತೆಯ ಉಲ್ಲಂಘನೆಯಾಗಿದ್ದು, ಸುನೀಲ್ ವಿರುದ್ಧ ಅಗತ್ಯ ಕಾನೂನು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಸುನೀಲ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಆಸ್ಪತ್ರೆ ತಿಳಿಸಿದೆ.
.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ