ಬೆಂಗಳೂರು: ಹಲ್ಲೆ, ದೌರ್ಜನ್ಯ ಮತ್ತು ಜಾತಿ ನಿಂದನೆ ಆರೋಪದಡಿ ಸಚಿವ ಡಿ.ಸುಧಾಕರ್ ವಿರುದ್ಧ ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಈ ವಿಚಾರ ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದ್ದು, ಪ್ರತಿಪಕ್ಷಗಳು ಸಚಿವರ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಇದೇ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತುಘಲಕ್ ದರ್ಬಾರಿನ ಸಚಿವ ಸಂಪುಟದಲ್ಲಿ ಗೂಂಡಾಗಿರಿ ಸಚಿವರ ಪಟ್ಟಿ' ಎಂದು ಪಟ್ಟಿಯೊಂದನ್ನು ಹಂಚಿಕೊಂಡಿದೆ. ಈ ಪಟ್ಟಿಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಡಿ.ಸುಧಾಕರ್, ಪ್ರಿಯಾಂಕ್ ಖರ್ಗೆ, ಶಿವಾನಂದ ಪಾಟೀಲ್, ಎನ್.ಚಲುವರಾಯಸ್ವಾಮಿ ಮುಂತಾದವರ ಹೆಸರಿದೆ.
'ಪ್ರತಿಭಟನೆ ಮಾಡುವ ಸಂಘಟನೆಗಳನ್ನು ಬೆದರಿಸುವ ಮೂಲಕ ಧಮ್ಕಿ ಹಾಕುವ ಡಿಸಿಎಂ ಡಿ.ಕೆ.ಶಿವಕುಮಾರ್..!, ಜಾತಿ ನಿಂದನೆ ಮಾಡಿ ಮಹಿಳೆ ಮೇಲೆ ಹಲ್ಲೆ ಮಾಡುವ ಪುಡಿರೌಡಿ ವರ್ತನೆಯ ಸಚಿವ ಡಿ.ಸುಧಾಕರ್..! ವರ್ಗಾವಣೆ ದಂಧೆ, ಅಧಿಕಾರಿಗಳಿಗೆ ಕಲೆಕ್ಷನ್ ಟಾರ್ಗೆಟ್, ಕೆಎಸ್‌ಆರ್‌ಟಿಸಿ ಸಿಬ್ಬಂದಿ ಆತ್ಮಹತ್ಯೆ ಯತ್ನ, ರೈತರಿಗೆ ಬೆದರಿಕೆ ಹಾಕುವ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ..!' ಎಂದು ಬಿಜೆಪಿ ಟೀಕಿಸಿದೆ.
'ಕ್ಷೇತ್ರದಲ್ಲಿ ಗೂಂಡಾ ಪಡೆಯನ್ನು ಬಿಟ್ಟು ಅಧಿಕಾರಿಗಳ ಮೇಲೆ ಹಲ್ಲೆ ಮಾಡಿಸುವ ಸಚಿವ ಪ್ರಿಯಾಂಕ್ ಖರ್ಗೆ..!, ತನ್ನ ಸಹೋದರಿ ಮಿನಿಸ್ಟರ್ ಎನ್ನುವ ಕಾರಣಕ್ಕೆ ಮಾಧ್ಯಮದವರಿಗೆ ಅವಾಜ್ ಹಾಕಿ ಧಮ್ಕಿ ಹಾಕುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚೆನ್ನರಾಜ್ ಹಟ್ಟಿಹೊಳಿ..!, ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಅಂತಾ ಉಡಾಫೆ ಮಾತನಾಡುವ ಸಚಿವ ಶಿವಾನಂದ ಪಾಟೀಲ್..!' ಎಂದು ಬಿಜೆಪಿ ಕುಟುಕಿದೆ.
'ಪ್ರಶ್ನಿಸುವವರನ್ನು, ಪ್ರತಿಭಟಿಸುವವರನ್ನು ಗೂಂಡಾ ವರ್ತನೆ ತೋರಿ ಬಾಯಿ ಮುಚ್ಚಿಸುವ ಘನಂದಾರಿ ಕೆಲಸವನ್ನು ಸಿಎಂ ಸಿದ್ದರಾಮಯ್ಯ ಅವರ ಸಂಪುಟ ಮಾಡುತ್ತಿದೆ' ಎಂದು ಬಿಜೆಪಿ ಕಿಡಿಕಾರಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ