ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ, ವಿವಿಧ ಕನ್ನಡ ಸಂಘಟನೆಗಳು ನಾಳೆ (ಸೆ.29) ಕರ್ನಾಟಕ ಬಂದ್‌ಗೆ ಕರೆ ನೀಡಿದ್ದು, ವಿವಿಧ ಸೇವೆಗಳಲ್ಲಿ ವ್ಯತ್ಯಯವಾಗುವ ನೀರಿಕ್ಷೆಯಿದೆ. ಏನಿರುತ್ತೆ, ಏನಿರಲ್ಲ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಈ ಬಂದ್‌ಗೆ ಓಲಾ ಉಬರ್ ಸಂಘ, ಡಾಕ್ಟರ್ ರಾಜಕುಮರ್ ಸೇನೆ, ಕನ್ನಡ ಜನ ಶಕ್ತಿ ಕೇಂದ್ರ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ, ಅಖಿಲ ಕರ್ನಾಟಕ ರಾಜಕುಮಾರ್ ಅಭಿಮಾನಿಗಳ ಸಂಘ, ಕರವೇ ಶಿವರಾಮೇಗೌಡ ಬಣ, ಕರವೇ ಪ್ರವೀಣ್ ಶೆಟ್ಟಿ ಬಣ, ಕರ್ನಾಟಕ ವಿಷ್ಣು ಸೇನೆ, ಕನ್ನಡ ಸೇನೆ, ಕನ್ನಡ ಒಕ್ಕೂಟ ಸೇರಿದಂತೆ ನೂರಾರು ಸಂಘಟನೆಗಳು ಬೆಂಬಲ ಸೂಚಿಸಿವೆ.
ಕರ್ನಾಟಕ ಬಂದ್ ಕಾರಣ, ಕೆಲವು ಖಾಸಗಿ ಶಾಲೆಗಳು, ಜಿಲ್ಲೆಗಳಲ್ಲಿರುವ ಮಾರುಕಟ್ಟೆಗಳು, ಶಾಲಾ ವಾಹನಗಳು, ಕ್ಯಾಬ್, ಖಾಸಗಿ ಬಸ್‌ಗಳು, ಸರಕು ಸಾಗಣೆ ವಾಹನಗಳು, ಕಾರ್ಖಾನೆಗಳು, ಎಂಎನ್‌ಸಿ ಕಂಪನಿಗಳು, ಹೋಟೆಲ್‌ಗಳು ಹಾಗೂ ಆಟೋ ಸೇವೆಯಲ್ಲಿ ವ್ಯತ್ಯಯವಾಗಬಹುದು. ಈಗಾಗಲೇ, ಮುನ್ನೆಚ್ಚರಿಕೆಯಾಗಿ ತುಮಕೂರು ವಿಶ್ವವಿದ್ಯಾಲಯ ಸೇರಿದಂತೆ ಹಲವು ಕಾಲೇಜುಗಳ ಪರೀಕ್ಷೆಯನ್ನು ಮುಂದೂಡಲಾಗಿದ್ದು, ಶಾಲಾ - ಕಾಲೇಜುಗಳಿಗೂ ರಜೆ ಘೋಷಿಸುವ ಸಾಧ್ಯತೆಯಿದೆ.
ನಾಳೆ ಬಂದ್ ಇದ್ದರೂ ವೈದ್ಯಕೀಯ ಸೇವೆಗಳಾದ ಆಸ್ಪತ್ರೆ, ಮೆಡಿಕಲ್, ಆಂಬ್ಯುಲೆನ್ಸ್ ಎಂದಿನಂತೆ ಲಭ್ಯವಿರಲಿದ್ದು, ಜೊತೆಯಲ್ಲಿ ಬ್ಯಾಂಕ್, ದಿನಪತ್ರಿಕೆ, ಮೆಟ್ರೊ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರವು ಇರಲಿದೆ. ಆದರೆ, ಪರಿಸ್ಥಿತಿ ಅನ್ವಯ, ಸಾರಿಗೆ ಬಸ್ ಸೇವೆಯೂ ಸ್ಥಗಿತವಾಗಬಹುದು. ನಿನ್ನೆಯಷ್ಟೇ ವಾಟಾಳ್ ನಾಗರಾಜ್ ಅವರು, ಬೆಂಗಳೂರು ನಗರದ ವಿವಿಧ ಭಾಗದಲ್ಲಿ ಸಂಚರಿಸಿ, ಮಾಲ್, ಅಂಗಡಿ ನೌಕರರು ಹಾಗೂ ಆಟೋ ಚಾಲಕರಿಗೆ ಬಂದ್ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದರು.
ಬಂದ್ ಹಿನ್ನೆಲೆ, ಅಂಗಡಿ, ಮಾಲ್ ಗಳು ಬಹುತೇಕ ಮುಚ್ಚಲಿವೆ. ರಾಜ್ಯ (state) ಮತ್ತು ರಾಷ್ಟ್ರೀಯ (national) ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲು ಸಂಘಟನೆಗಳು ನಿರ್ಧಾರ ಮಾಡಿವೆ.
ರಾಜ್ಯ ಬಂದ್‌ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಂಪೂರ್ಣ ಬೆಂಬಲ ನೀಡಿದ್ದು, ಸೆ.29 ರಂದು ಚಿತ್ರಮಂದಿರ ಮುಚ್ಚಲು ತೀರ್ಮಾನ ಮಾಡಿದೆ. ಹಾಗೆಯೇ ಚಿತ್ರರಂಗದ ಎಲ್ಲ ಚಟುವಟಿಕೆಗಳು ಸ್ಥಗಿತಗೊಳ್ಳಲಿದ್ದು, ಕನ್ನಡ ಪರ ಸಂಘಟನೆಗಳು ನಡೆಸುವ ಪ್ರತಿಭಟನಾ ಮೆರವಣಿಗೆಯಲ್ಲಿ ಕಲಾವಿದರು ಸೇರಿದಂತೆ ಚಿತ್ರರಂಗದ ಪ್ರಮುಖರು ಭಾಗವಹಿಸಲು ನಿರ್ಧಾರ ಮಾಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ