ಉಡುಪಿ: ಮಾದಕ ದ್ರವ್ಯದಂತಹ ಸಮಾಜ ಘಾತಕ ಚಟುವಟಿಕೆಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಗೃಹ ಸಚಿವರ ಸಲಹೆಯಂತೆ ಸದ್ಯದಲ್ಲೇ ಉಡುಪಿ ಜಿಲ್ಲೆಯ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ಆ್ಯಂಟಿ ಡ್ರಗ್ ಕಮಿಟಿಯನ್ನು ಸ್ಥಾಪನೆ ಮಾಡಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚಿಂದ್ರ ತಿಳಿಸಿದ್ದಾರೆ.
ಉಡುಪಿ ಎಸ್ಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಂಬಂಧ ಜಿಪಂ ಸಿಇಓ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಕಾಲೇಜು ಆಡಳಿತ ಮಂಡಳಿಗಳ ಸಭೆ ಕರೆದು ಚರ್ಚಿಸಲಾಗುವುದು. ಮುಂದೆ ಈ ಕಮಿಟಿಯ ಮೂಲಕ ಸ್ಪಷ್ಟವಾದ ಗುರಿ ಇಟ್ಟುಕೊಂಡು ಕೆಲಸ ಮಾಡಲಾಗುವುದು ಎಂದರು.
ಈಗಾಗಲೇ ಹಲವು ಮಂದಿ ವಿದ್ಯಾರ್ಥಿಗಳು ತಮ್ಮ ಹೆಸರು, ಮೊಬೈಲ್ ನಂಬರ್ ತಿಳಿಸದೆ ಇಂಟರ್‌ನೆಟ್ ಮೂಲಕ ಡ್ರಗ್ಸ್ ಜಾಲದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ್ದಾರೆ. ಇದರಿಂದಲೇ ನಾವು ಸಾಕಷ್ಟು ಪ್ರಕರಣಗಳನ್ನು ಬೇಧಿಸಲು ಸಾಧ್ಯವಾಗಿದೆ. ಅಂತಹ ವಿದ್ಯಾರ್ಥಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಪೋಷಕರು ಕೂಡ ಮಾದಕ ದ್ರವ್ಯ ಜಾಲದಲ್ಲಿ ಸಿಲುಕಿರುವ ತಮ್ಮ ಮಕ್ಕಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ ಎಂದು ಎಸ್ಪಿ ಹೇಳಿದರು.
ಈ ರೀತಿ ತಮ್ಮ ಹೆಸರನ್ನು ಬಹಿರಂಗ ಪಡಿಸದೆ ಸಮಾಜ ಘಾತಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ಮುಂದೆ ಬರಬೇಕು. ನಿಮ್ಮ ಹೆಸರನ್ನು ನಾವು ಕೂಡ ಗೌಪ್ಯವಾಗಿರಿಸಿಕೊಳ್ಳುತ್ತೇವೆ. ಯಾವುದೇ ಮಾಹಿತಿ ಇದ್ದರೂ ನನ್ನ ಮೊಬೈಲ್‌ಗೆ ಕಳುಹಿಸಿಕೊಡಬಹುದು. ಈ ಕಾರ್ಯಚರಣೆಯಲ್ಲಿ ಸಾರ್ವಜನಿಕರ ಪಾತ್ರ ಕೂಡ ಅಗತ್ಯವಾಗಿ ಬೇಕಾಗಿದೆ ಎಂದು ಅವರು ಮನವಿ ಮಾಡಿದರು.
ಗೃಹ ಸಚಿವರು ನಿರ್ದೇಶನದಂತೆ ಜಿಲ್ಲೆಯಲ್ಲಿ ಡ್ರಗ್ಸ್ ಜಾಲದ ಬೇರನ್ನು ಹುಡುಕುವ ಕಾರ್ಯ ಮಾಡಲಾಗುವುದು. ಮಣಿಪಾಲದಲ್ಲಿ ಮಧ್ಯರಾತ್ರಿ 12ಗಂಟೆ ನಂತರ ಪಾರ್ಟಿಗಳು ನಡೆಯುತ್ತಿರುತ್ತವೆ. ಕಳೆದ ನಾಲ್ಕೈದು ತಿಂಗಳಲ್ಲಿ ಒಟ್ಟು ಇಂತಹ 15 ಪಾರ್ಟಿಗಳಿಗೆ ದಾಳಿ ನಡೆಸಿದ್ದೇವೆ. ಅಲ್ಲಿ ಸಿಕ್ಕಿದ ವಿದ್ಯಾರ್ಥಿ ಗಳನ್ನು ಹಿಡಿದುಕೊಂಡು ಈ ಜಾಲವನ್ನು ಭೇದಿಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.
ಡ್ರಗ್ಸ್ ಮಾರಾಟ ಜಾಲದಲ್ಲಿ ಕಾನೂನು ತಿಳಿದಿರುವ ಕಾನೂನು ವಿದ್ಯಾರ್ಥಿ ಗಳೇ ಹಾಗೂ ಉತ್ತಮ ಕುಟುಂಬದ ಹಿನ್ನೆಲೆ ಇರುವವರೇ ಭಾಗಿಯಾಗಿರುವುದು ಆಘಾತಕಾರಿಯಾಗಿದೆ. ಇದರಿಂದ ಡ್ರಗ್ಸ್ ಸೇವನೆ ಎಂಬುದು ಮೋಜು ಮಸ್ತಿಗಾಗಿ ಬಳಕೆ ಮಾಡಲಾಗುತ್ತಿದೆ ಎಂಬುದು ಗೊತ್ತಾಗುತ್ತದೆ. ಸಮಾಜ ಎಲ್ಲಿ ದಾರಿ ತಪ್ಪುತ್ತಿದೆ ಎಂಬುದನ್ನು ನಾವು ಅವಲೋಕಿಸಬೇಕಾಗಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆ ಒಟ್ಟಿಗೆ ಕೆಲಸ ಮಾಡಬೇಕಾಗಿದೆ ಎಂದರು.
ಈ ಮಾದಕ ದ್ರವ್ಯದ ವಿರುದ್ಧ ಮಣಿಪಾಲ ಮಾಹೆ ಹಾಗೂ ಪೊಲೀಸ್ ಇಲಾಖೆ ಜೊತೆಯಾಗಿ ಕೆಲಸ ಮಾಡಿ ಈವರೆಗೆ 60-70 ವಿದ್ಯಾರ್ಥಿಗಳನ್ನು ಅಮಾನವತು ಮಾಡಲಾಗಿದೆ. ಮಾಹೆಯ ಎಂಟು ಪೆಡ್ಲಿಂಗ್ ವಿದ್ಯಾರ್ಥಿ ಗಳನ್ನು ಬಂಧಿಸಲಾಗಿದೆ. ಉಳಿದಂತೆ ಗಾಂಜಾ ಸೇವನೆಗೆ ಸಂಬಂಧಿಸಿ ಹಲವು ಮಂದಿ ಯನ್ನು ವಶಕ್ಕೆ ಪಡೆದು ಆಡಳಿತ ಮಂಡಳಿಗೆ ತಿಳಿಸಿದ್ದೇವೆ ಎಂದು ಅವರು ತಿಳಿಸಿದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ