ಉಡುಪಿ: ನಗರದ ಕೆ.ಎಂ.ಮಾರ್ಗದಲ್ಲಿರುವ 61 ವರ್ಷಗಳ ಇತಿಹಾಸವಿರುವ ಶ್ರೀನಿತ್ಯಾನಂದ ಸ್ವಾಮಿ ಮಂದಿರ ಮಠ ಸಂಪೂರ್ಣ ಜೀರ್ಣೋದ್ಧಾರಗೊಂಡಿದ್ದು, ನವೀಕೃತ ಮಂದಿರದ ಲೋಕರ್ಪಣೆ ಹಾಗೂ ವಿಗ್ರಹ ಪ್ರತಿಷಠೆ ಕಾರ್ಯಕ್ರಮ ಜ.15 ಮತ್ತು 16ರಂದು ನಡೆಯಲಿದೆ ಎಂದು ಶ್ರೀಭಗವಾನ್ ನಿತ್ಯಾನಂದ ಮಂದಿರ ಮಠದ ಅಧ್ಯಕ್ಷರಾದ ದಿವಾಕರ ಶೆಟ್ಟಿ ಕೊಡವೂರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಠದಲ್ಲಿ ಪ್ರತಿಷ್ಠಾಪಿಸಲಾಗುವ ನಿತ್ಯಾನಂದರ ಪಂಚಲೋಹ ವಿಗ್ರಹದ ಮೆರವಣಿಗೆ ಜ.15ರಂದು ಸಂಜೆ ನಡೆಯಲಿದ್ದು, ಮರುದಿನ ನವೀಕೃತ ಮಂದಿರದ ಲೋಕಾರ್ಪಣೆ, ಗರ್ಭಗೃಹ ಸಮರ್ಪಣೆ, ಗುರುಗಳ ವಿಗ್ರಹ ಪ್ರತಿಷ್ಠೆ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ನೂತನ ಮಂದಿರದ ವಾಸ್ತು ಶೈಲಿಯು ಮುಂಬಯಿ ಗಣೇಶಪುರಿಯಲ್ಲಿರುವ ನಿತ್ಯಾನಂದ ಮಂದಿರದ ಮಾದರಿಯಲ್ಲೇ ಇದ್ದು, ಇಲ್ಲಿ ಪ್ರತಿಷ್ಠಾಪನೆಗೊಳ್ಳುವ ಗುರುಗಳ ಮೂರ್ತಿ ಸಹ ಗಣೇಶಪುರಿಯಿಂದ ಆಗಮಿಸಲಿದೆ. ಕೊಡವೂರು ಶಿರಡಿ ಸಾಯಿಬಾಬಾ ಮಂದಿರದಿಂದ ಮೂರ್ತಿಯನ್ನು ಜೋಡುಕಟ್ಟೆಗೆ ತಂದು ಅಲ್ಲಿಂದ ಮೆರವಣಿಯಲ್ಲಿ ಮಂದಿರಕ್ಕೆ ಕರೆತರಲಾಗುವುದು ಎಂದು ಕೇರಳದ ಕಾಂಞಂಗಾಡಿನಲ್ಲಿರುವ ಶ್ರೀಗುರು ನಿತ್ಯಾನಂದ ಮಠದ ವಿಶ್ವಸ್ಥರೂ ಆಗಿರುವ ದಿವಾಕರ ಶೆಟ್ಟಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಞಂಗಾಡಿನ ಶ್ರೀನಿತ್ಯಾನಂದ ಗುರು ವಿದ್ಯಾಕೇಂದ್ರದ ವಿಶ್ವಸ್ಥ ಮೋಹನಚಂದ್ರ ನಂಬಿಯಾರ್, ಗೌರವಾಧ್ಯಕ್ಷ ಎ.ಪಿ.ಗಿರೀಶ್, ಎಂ.ಎಂ.ಪಡಿಯಾರ್, ಡಾ.ರಘುವೀರ್ ಪೈ, ಸಂಚಾಲಕ ರಾದ ಮಹಾಬಲ ಕುಂದರ್, ಶಶಿಕುಮಾರ್ ಶೆಟ್ಟಿ ಗೋವಾ ಹಾಗೂ ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ