ಕುಂದಾಪುರ: ಫ್ಯಾನ್ಸಿ ಅಂಗಡಿಯೊಂದಕ್ಕೆ ಮಂಗಳವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ರೂ. ಮೌಲ್ಯದ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿದ ಘಟನೆ ಕೋಟೇಶ್ವರ ಪೇಟೆಯ ಎಂ.ವಿ ರಸ್ತೆಯಲ್ಲಿನ ಶಿವರಾಮ್ ಪೂಜಾರಿಯವರ ವಾಣಿಜ್ಯ ಸಂಕೀರ್ಣದಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಮಹಾಲಕ್ಚ್ಮೀ ಕಂಗನ್ ಸ್ಟೋರ್‌ನಲ್ಲಿ ಇದ್ದವರು ಊಟಕ್ಕೆಂದು ತೆರಳಿದ್ದ ವೇಳೆ, ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಪ್ರಾರಂಭದಲ್ಲಿ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಕೆಲವೇ ನಿಮಿಷಗಳಲ್ಲಿ ಅಂಗಡಿಯನ್ನು ವ್ಯಾಪಿಸಿದ್ದರಿಂದಾಗಿ ಅಂಗಡಿಯಲ್ಲಿ ಇದ್ದ ಮಕ್ಕಳ ಆಟಿಕೆ ಸಾಮಾಗ್ರಿಗಳು, ಉಡುಗೊರೆ ವಸ್ತುಗಳು, ಅಲಂಕಾರಿಕ ವಸ್ತುಗಳು ಹಾಗೂ ಲಕ್ಷಾಂತರ ರೂ. ನಗದು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿದೆ.
ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಅಂಗಡಿಯ ಮಾಲಿಕ ವಿಜಯ್ ಜೋಗಿ ಅವರು, ಅಂದಾಜು 70-80 ಲಕ್ಷ ರೂ. ಹೆಚ್ಚು ಪ್ರಮಾಣದ ನಷ್ಟ ಉಂಟಾಗಿದೆ. ಬೆಂಕಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸುತ್ತಿದ್ದಾರೆ. ವಾಣಿಜ್ಯ ಮಳಿಗೆಯ ಮೇಲ್ ಅಂತಸ್ತಿನಲ್ಲಿ ಇದ್ದ ಕಟ್ಟಡದ ಮಾಲಿಕ ಶಿವರಾಮ್ ಪೂಜಾರಿ ಅವರ ಮನೆಗೂ ಹಾನಿಯುಂಟಾಗಿದ್ದು ಲಕ್ಷಾಂತರ ರೂ. ನಷ್ಟ ಉಂಟಾಗಿದೆ.
ಮಹಾಲಕ್ಷ್ಮೀ ಕಂಗನ್ ಸ್ಟೋರ್ ಪಕ್ಕದಲ್ಲಿನ ರಾಜೀವ್ ಶೆಟ್ಟಿ ಅವರ ರಶ್ವೀನ್ ಫ್ಯಾಶನ್ ಎನ್ನುವ ಟೈಲರ್ ಹಾಗೂ ಬಟ್ಟೆ ಅಂಗಡಿಗೂ ಬೆಂಕಿ ತಗುಲಿದ್ದು, ಅಲ್ಲಿಯೂ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ಗ್ರಾಹಕರು ಹೊಲಿಯಲು ಕೊಟ್ಟಿದ್ದ ಬಟ್ಟೆ, ಅಂಗಡಿಯಲ್ಲಿನ ಹೊಸ ಬಟ್ಟೆ ಹಾಗೂ ಪೀಠೋಪಕರಣಗಳು ಬೆಂಕಿಗೆ ಆಹುತಿಯಾಗಿದೆ. ಅಂದಾಜು 3 ಲಕ್ಷ ನಷ್ಟ ಸಂಭವಿಸಿರುವ ಬಗ್ಗೆ ಮಾಹಿತಿ ಇದೆ.
ಕುಂದಾಪುರ ಉಪ ವಿಭಾಗದ ಅಗ್ನಿಶಾಮಕ ಘಟಕದ ಸಿಬ್ಬಂದಿಗಳ ನಿರಂತರ 3 ಗಂಟೆಗಳ ಕಾರ್ಯಾಚರಣೆಯಿಂದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೆಂಕಿ ಹೊತ್ತಿಕೊಂಡ ಮಾಹಿತಿ ತಿಳಿದ ಸ್ಥಳೀಯರು ಕೂಡಲೇ ಅಗ್ನಿ ಶಮನಕ್ಕೆ ಮುಂದಾಗಿದ್ದರೂ, ಅಂಗಡಿಯಲ್ಲಿ ಉರುವಲು ವಸ್ತುಗಳೇ ಹೆಚ್ಚಾಗಿ ಇದ್ದುದರಿಂದ ಬೆಂಕಿಯನ್ನು ಹತೋಟಿಗೆ ತರುವುದು ಸಾಧ್ಯವಾಗಿರಲಿಲ್ಲ. ಅಗ್ನಿಶಾಮಕದ ಸಿಬ್ಬಂದಿಗಳ ಜೊತೆಯಲ್ಲಿ ಸ್ಥಳೀಯರು ಕೈ ಜೋಡಿಸಿದ್ದರಿಂದಾಗಿ ಅಗ್ನಿ ನಿಯಂತ್ರಣಕ್ಕೆ ಬಂದಿದೆ.
ಪೊಲೀಸ್ ಆಧಿಕಾರಿಗಳಾದ ಸದಾಶಿವ ಆರ್ ಗವರೋಜಿ, ಸುಧಾ ಪ್ರಭು, ಪೊಲೀಸ್ ಸಿಬ್ಬಂದಿಗಳು, ಸ್ಥಳೀಯರಾದ ಕೃಷ್ಣ ಪೂಜಾರಿ, ಅನಂತಪದ್ಮನಾಭ, ರಾಘವೇಂದ್ರ, ಗೋವರ್ಧನ್ ಗಾಣಿಗ, ರಂಗನಾಥ ಭಟ್ ಮುಂತಾದವರು ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ