ಸುಬ್ರಹ್ಮಣ್ಯ : ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಭಾರಿ ಪ್ರಮಾಣದ ಮಳೆಯಿಂದ ಕುಮಾರಧಾರ ಸಮೀಪದ ಪರ್ವತಮುಖಿಯಲ್ಲಿ ಗುಡ್ಡ ಜರಿದು ಮನೆ ಕುಸಿತವಾಗಿ ಇಬ್ಬರು ಹೆಣ್ಣು ಮಕ್ಕಳು ಮಣ್ಣುಪಾಲಾದ ಘಟನೆ ಸೋಮವಾರ ರಾತ್ರಿ ಸುಮಾರು 7:30ರ ವೇಳೆಗೆ ಸಂಭವಿಸಿದೆ. ಸುಬ್ರಹ್ಮಣ್ಯ ಕುಮಾರಧಾರದ ಸ್ನಾನಘಟ್ಟದ ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾಾರಿಯ ಪರ್ವತಮುಖಿ ಎಂಬಲ್ಲಿ ದುರಂತ ಸಂಭವಿಸಿದ್ದು, ಕುಸುಮಾಧರ - ರೂಪಾಶ್ರೀ ದಂಪತಿಯ ಮಕ್ಕಳಾದ ಶೃತಿ (11) ಹಾಗೂ ಜ್ಞಾನಶ್ರೀ (6) ಮಣ್ಣಿನಡಿ ಸಿಲುಕಿದ್ದಾರೆ.
ಅವರ ರಕ್ಷಣೆಗೆ ರಾತ್ರಿಯೂ ಕಾರ್ಯಾಚರಣೆ ನಡೆದಿದೆ. ಕುಮಾರಧಾರಾ ಸ್ನಾನಘಟ್ಟದ ಸಮೀಪವೇ ಇವರ ಮನೆ ಇದ್ದು, ಮನೆಯಿಂದ 100 ಮೀಟರ್ ದೂರದಲ್ಲಿ ಕುಸುಮಾಧರ ಅವರಿಗೆ ಅಂಗಡಿ ಇದೆ. ದಂಪತಿಗೆ ಮೂವರು ಮಕ್ಕಳಿದ್ದು, ದುರಂತಕ್ಕಿಂತ ಸ್ವಲ್ಪ ಮೊದಲು ತಾಯಿ ತನ್ನ ಸಣ್ಣ ಮಗುವಿನೊಂದಿಗೆ ಮನೆಯಿಂದ ಹೊರಗೆ ಹೋಗಿದ್ದರು. ಈ ನಡುವೆ ಭಾರಿ ಮಳೆ ಹಿನ್ನೆಲೆಯಲ್ಲಿ ಮಕ್ಕಳನ್ನು ಎಚ್ಚರಿಸಲೆಂದು ತಂದೆ ಮನೆಗೆ ಬರುವ ವೇಳೆಗೆ ಗುಡ್ಡ ಕುಸಿತು ಮನೆ ಸಂಪೂರ್ಣ ನೆಲಸಮಗೊಂಡು ದುರಂತ ಘಟಿಸಿತ್ತು.
ಸುಬ್ರಹ್ಮಣ್ಯ ಪೊಲೀಸರು ಹಾಗೂ ಸ್ಥಳೀಯರಿಂದ ಜೆಸಿಬಿಯಿಂದ ಮಣ್ಣುತೆಗೆಯುವ ಕಾರ್ಯಾಚರಣೆ ಆರಂಭಿಸಿದ್ದರು. ಆದರೆ ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ ಬಿದ್ದಿರುವುದರಿಂದ ಆಗಿದ್ದು ಪರಿಹಾರ ಕಾರ್ಯಕ್ಕೆ ತೊಂದರೆ ಉಂಟಾಯಿತು. ಬಳಿಕ ಎನ್‌ಡಿಆರ್‌ಎಫ್ ತಂಡದವರೂ ಸ್ಥಳಕ್ಕೆ ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದರು. ಸ್ಥಳಕ್ಕೆ ಪುತ್ತೂರು ಉಪವಿಭಾಗಾಧಿಕಾರಿ ಸಹಿತ ಹಿರಿಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ