ಕುಂದಾಪುರ : ಶಾಲಾ ವಾಹನದಲ್ಲಿ ಮನೆಗೆ ಬರುತ್ತಿದ್ದ ಮಗುವಿಗಾಗಿ ರಸ್ತೆ ಸಮೀಪದಲ್ಲಿ ಕಾಯುತ್ತಾ ನಿಂತಿದ್ದ ಮಹಿಳೆಯ ಮೇಲೆ ದುಷ್ಕರ್ಮಿಯೋರ್ವ ಮಾರಣಾಂತಿವಾಗಿ ಹಲ್ಲೆ ನಡೆಸಿ ಚಿನ್ನಾಭರಣಗಳನ್ನು ದರೋಡೆ ಮಾಡಿರುವ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೊರ್ಗಿ-ಹೆಸ್ಕುತ್ತೂರು ಎಂಬಲ್ಲಿ ನಡೆದಿದೆ.
ಕುಂದಾಪುರ ತಾಲೂಕಿನ ಕೊರ್ಗಿ ಗ್ರಾಮದ ಕಾಡಿನಬೆಟ್ಟು ನಿವಾಸಿ ದೇವಕಿ (32 ವರ್ಷ) ಎಂಬವರೇ ಹಲ್ಲೆಗೆ ಒಳಗಾದವರು. ಶುಕ್ರವಾರ ಸಂಜೆಯ ವೇಳೆಯಲ್ಲಿತೆಕ್ಕಟ್ಟೆ- ದಬ್ಬೆಕಟ್ಟೆ ಮುಖ್ಯ ರಸ್ತೆಯ ಪಕ್ಕದಲ್ಲಿ ನಿಂತು ಮಹಿಳೆಯೋರ್ವರು ತನ್ನ ಮಗುವಿಗಾಗಿ ಕಾಯುತ್ತಿದ್ದರು. ಈ ವೇಳೆಯಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೋರ್ವ ಮಾರಕಾಸ್ತ್ರಗಳಿಂದ ಮಹಿಳೆಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ನಂತರ ಮಹಿಳೆಯ ಬಳಿಯಲ್ಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ಮಹಿಳೆಯನ್ನು ಸ್ಥಳೀಯರು ರಕ್ಷಿಸಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದೇ ರಸ್ತೆಯಲ್ಲಿ ಅಪರಿಚಿತ ಬೈಕ್‌ವೊಂದು ಓಡಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆ. ದೂರದಲ್ಲಿ ಬೈಕ್ ನಿಲ್ಲಿಸಿ ಬಂದು ಹಲ್ಲೆ ನಡೆಸಿ ನಂತರ ಎಸ್ಕೇಪ್ ಆಗಿರುವ ಸಾಧ್ಯತೆಯಿದೆ. ಇದೀಗ ಸ್ಥಳೀಯರು ನೀಡಿದ ದೂರಿನ ಆಧಾರದ ಹಿನ್ನೆಲೆಯಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆಯನ್ನು ನಡೆಸುತ್ತಿದ್ದಾರೆ.
ನಿತ್ಯವೂ ನೂರಾರು ಜನರು ದೂರದ ಊರುಗಳಲ್ಲಿರುವ ಶಾಲೆಗಳಿಗೆ ತೆರಳಿ ವಾಪಾಸಾಗುವ ಮಕ್ಕಳನ್ನು ಮನೆಗೆ ಕರೆದೊಯ್ಯಲು ರಸ್ತೆಯಲ್ಲಿ ಕಾಯುವ ಸ್ಥಿತಿಯಿದೆ. ಆದ್ರೀಗ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿರೋದು. ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕ ಮೂಡಿಸಿದೆ. ಪೊಲೀಸರು ಆರೋಪಿಯನ್ನು ಶೀಘ್ರದಲ್ಲಿಯೇ ಬಂಧಿಸಬೇಕೆಂಬ ಆಗ್ರಹ ಕೇಳಿಬಂದಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ