Slider


ಜಿಲ್ಲೆಯಲ್ಲಿ 8 ಲಕ್ಷ ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ನೀಡಿಕೆ ಗುರಿ: ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ18-7-2022

 


ಉಡುಪಿ, ಜುಲೈ: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ 18 ರಿಂದ 59 ವರ್ಷದೊಳಗಿನ ಸಾರ್ವಜನಿಕರಿಗೆ ಸೆಪ್ಟಂಬರ್ 30 ರ ಒಳಗೆ 8 ಲಕ್ಷ ಕೋವಿಡ್-19 ಮುಂಜಾಗ್ರತಾ ಡೋಸ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೇಳಿದರು.

    ಅವರು ಇಂದು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ರಾಷ್ಟ್ರೀಯ ಆರೋಗ್ಯ ಅಭಿಯಾನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದೊಂದಿಗೆ ನಡೆದ, 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.




     ಜಿಲ್ಲೆಯಲ್ಲಿ ಈಗಾಗಲೇ 18 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಮತ್ತು 2 ನೇ ಡೋಸ್ ಲಸಿಕೆ ನೀಡುವಲ್ಲಿ ಶೇಕಡಾ 100% ಸಾಧನೆ ಆಗಿದ್ದು, ಪ್ರಸ್ತುತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸಾರ್ವಜನಿಕರಿಗೆ ಉಚಿತವಾಗಿ ಮುನ್ನೆಚ್ಚರಿಕಾ ಡೋಸ್ ನೀಡಲಾಗುತ್ತಿದ್ದು, ಎರಡನೇ ಡೋಸ್ ಪಡೆದು 6 ತಿಂಗಳು ದಾಟಿದ ಸಾರ್ವಜನಿಕರು ಜಿಲ್ಲೆಯಾದ್ಯಂತ ತಮ್ಮ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮುನ್ನೆಚ್ಚರಿಕಾ ಡೋಸ್ ಪಡೆಯಬಹುದಾಗಿದೆ ಎಂದರು.

     ಜಿಲ್ಲೆಯ ಸಾರ್ವಜನಿಕರು ಕೋವಿಡ್-19 ಪ್ರಥಮ ಮತ್ತು 2 ನೇ ಡೋಸ್ನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆದಿದ್ದ ಕಾರಣ ಕೋವಿಡ್ 3 ನೇ ಅಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆ ದಾಖಲಾತಿ ಪ್ರಕರಣಗಳು ಕಂಡುಬರಲಿಲ್ಲ. ಆದ್ದರಿಂದ ಸಂಭಾವ್ಯ ನಾಲ್ಕನೇ ಅಲೆಯಿಂದ ಸಂಭವಿಸಬಹುದಾದ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ತಪ್ಪದೇ ಮುನ್ನೆಚ್ಚರಿಕಾ ಡೋಸ್ ಪಡೆಯುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಕೋವಿಡ್ ಲಸಿಕಾಕರಣದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ವಿವಿಧ ಸಂಘ ಸಂಸ್ಥೆಗಳು ಹಾಗೂ ನಾಗರೀಕರು ಜಿಲ್ಲಾಡಳಿತಕ್ಕೆ ಉತ್ತಮ ಸಹಕಾರ ನೀಡಿದ್ದು, ಮುನ್ನೆಚ್ಚರಿಕಾ ಡೋಸ್ ನೀಡಿಕೆಯಲ್ಲಿ 100% ಪ್ರಗತಿ ಸಾಧಿಸುವಲ್ಲಿ ಕೂಡಾ ಅಗತ್ಯ ಸಹಕಾರ ನೀಡುವಂತೆ ತಿಳಿಸಿದರು.

    ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಮಾಧ್ಯಮ ಪ್ರತಿನಿಧಿಗಳು ಕೋವಿಡ್-19 ಮುನ್ನೆಚ್ಚರಿಕಾ ಡೋಸ್ ಲಸಿಕೆ ಪಡೆದರು.

    ಜಿಲ್ಲಾ ಕೋವಿಡ್ ಲಸಿಕಾ ಉಸ್ತುವಾರಿ ಡಾ.ಎಂ.ಜಿ.ರಾಮ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ. ಕೀರ್ತಿನಾಥ ಬಲ್ಲಾಳ್, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸತೀಶ್ ಆಚಾರ್ಯ ಉಪಸ್ಥಿತರಿದ್ದರು.

    ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಸ್ವಾಗತಿಸಿದರು. ಜಿಲ್ಲಾ ಸರ್ಜನ್ ಡಾ.ಮಧುಸೂದನ ನಾಯಕ್ ವಂದಿಸಿದರು.

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo