Slider

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌:-ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ 24-7-2022

 


ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಥ್ರೋ ಫೈನಲ್‌ನಲ್ಲಿ ಬೆಳ್ಳಿ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನೀರಜ್ ಚೋಪ್ರಾ 88.13 ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕ ಪಡೆದು ಇತಿಹಾಸ ನಿರ್ಮಿಸಿದ್ದಾರೆ. ಲೆಜೆಂಡರಿ ಲಾಂಗ್ ಜಂಪರ್ ಅಂಜು ಬೂಬಿ ಜಾರ್ಜ್ ಅವರು ಪ್ಯಾರಿಸ್‌ನಲ್ಲಿ 2003 ರ ಆವೃತ್ತಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದ ಮೊದಲ ಭಾರತೀಯರಾಗಿದ್ದರು.




ಜಾವೆಲಿನ್ ಥ್ರೋ ಫೈನಲ್‌ನ ಮೊದಲ ಪ್ರಯತ್ನದಲ್ಲಿ ಪೌಲ್‌ ಮಾಡಿದರು. ಇನ್ನು ನೀರಜ್ ಚೋಪ್ರಾ ತಮ್ಮ ಪಾಲಿನ ಎರಡನೇ ಪ್ರಯತ್ನದಲ್ಲಿ 82.39 ಮೀಟರ್ ದೂರ ಜಾವೆಲಿನ್ ಎಸೆದರು. ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ 86.37 ಮೀಟರ್ ದೂರ ಜಾವೆಲಿನ್ ಎಸೆದರು. ಈ ಮೂಲಕ ಮೂರನೇ ಸುತ್ತಿನ ಅಂತ್ಯದ ವೇಳೆಗೆ ನೀರಜ್ ಚೋಪ್ರಾ 4ನೇ ಸ್ಥಾನ ಪಡೆದರು. ಆದರೆ ನಾಲ್ಕನೇ ಸುತ್ತಿನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರು.


ಹಾಲಿ ಚಾಂಪಿಯನ್ ಗ್ರೆನಡಾದ ಆಯಂಡರ್ಸನ್ ಪೀಟರ್ಸ್ 90.54 ಮೀಟರ್ ಎಸೆದು ಚಿನ್ನ ಗೆದ್ದರೆ, ಒಲಿಂಪಿಕ್ ಬೆಳ್ಳಿ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಾಡ್ಲೆಜ್ 88.09 ಮೀಟರ್‌ಗಳೊಂದಿಗೆ ಕಂಚಿನ ಪದಕ ಪಡೆದರು.ಚೋಪ್ರಾರ ಅಭೂತಪೂರ್ಣ ಕ್ಷಣದ ವಿಡಿಯೋ ಇಲ್ಲಿದೆ.


ಚೋಪ್ರಾ ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ಚೊಚ್ಚಲ ಚಿನ್ನ ಗೆದ್ದಿದ್ದರು.



0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo