Slider

ಕೋಟ: ಮೀನುಗಾರಿಕೆಗೆ ತೆರಳಿದ ದೋಣಿ ಮಗುಚಿ ಓರ್ವ ಸಮುದ್ರ ಪಾಲು, ಇನ್ನಿಬ್ಬರು ಪಾರು 21.07.2022

 ಕೋಟ : ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಎಂಬಲ್ಲಿ ಮೀನು ಹಿಡಿಯಲೆಂದು ಸಣ್ಣ ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದ ಮೂವರಲ್ಲಿ ಓರ್ವ ಸಮುದ್ರಪಾಲಾಗಿ ಇನ್ನಿಬ್ಬರು ದಡ ಸೇರಿದ ಘಟನೆ ಶುಕ್ರವಾರ ಮಧ್ಯಾನ್ಹ ನಡೆದಿದೆ.



ಭಾರೀ ಗಾತ್ರದ ಅಲೆಗಳಿಗೆ ಸಿಕ್ಕ ಇವರ ದೋಣಿ ನಿಯಂತ್ರಣಕ್ಕೆ ಸಿಗದೆ ಮಗುಚಿಕೊಂಡಿದ್ದರಿಂದ ಈ ದುರಂತ ಸಂಭವಿಸಿದೆ.




 

ಪಾರಂಪಳ್ಳಿ ಪಡುಕೆರೆಯ ಭಾಸ್ಕರ್ ಮೊಗವೀರ ಅವರ ಪುತ್ರ ಸುಮಂತ್ (20) ಸಮುದ್ರಕ್ಕೆ ಬಿದ್ದವರು ಎಂದು ತಿಳಿದುಬಂದಿದೆ.



ಶುಕ್ರವಾರ ಮಧ್ಯಾನ್ಹ ಸುಮಾರು 11:00 ಗಂಟೆಗೆ ಸ್ಥಳೀಯರಾದ ಸಂದೀಪ್, ಪ್ರಜ್ವಲ್ ಹಾಗೂ ಸುಮಂತ್ ಮೂವರು ಸೇರಿ ಮೀನು ಹಿಡಿಯಲು ದೋಣಿಯಲ್ಲಿ ಸಮುದ್ರಕ್ಕೆ ಹೋಗಿದ್ದರು. ಬೆಳಿಗ್ಗೆ ಮಳೆ ಸ್ವಲ್ಪ ಕಡಿಮೆಯಿದ್ದರೂ ಸಮುದ್ರದಲ್ಲಿ ಗಾಳಿಯ ಹೊಡೆತ ಮತ್ತು ಭಾರೀ ಗಾತ್ರದ ಅಲೆಗಳ ಅಬ್ಬರ ಜೋರಾಗಿತ್ತು. ಸಮುದ್ರದ ಅಲೆಗೆ ಸಿಕ್ಕ ದೋಣಿ ಮುಗುಚಿ ಬಿದ್ದಿದ್ದು, ದೋಣಿಯಲ್ಲಿದ್ದ ಇಬ್ಬರು ಸಂದೀಪ್ ಮತ್ತು ಪ್ರಜ್ವಲ್ ಈಜಿ ದಡ ಸೇರಿದ್ದಾರೆ.

ಆದರೆ ನತದೃಷ್ಟ ಮೃತ ಸುಮಂತ್ ಗೆ ಸಮುದ್ರದ ರಕ್ಕಸ ಗಾತ್ರದ ಅಲೆಗಳ ನಡುವೆ ಈಜಿದರೂ ಕಡೆಗೆ ಆಯಾಸದಿಂದ ಈಜಲಾಗದೆ ಅಲೆಗಳೊಂದಿಗೆ ಕೊಚ್ಚಿ ಹೋದರು ಎನ್ನಲಾಗಿದೆ.


ಸ್ಥಳೀಯರು ಬಲೆ ಹಾಕಿ ಸುಮಂತ್ ನನ್ನು ಮೇಲೆ ಎಳೆದಿದ್ದು ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಿರುತ್ತಾರೆ. ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo