ಮಂಗಳೂರು : ವಿದೇಶದಿಂದ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಕೇರಳದ ಇಬ್ಬರಲ್ಲಿ ಮಂಕಿ ಪಾಕ್ಸ್ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಆ ಸೋಂಕು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ಕಾನ್ಫರೆನ್ಸ್ ಹಾಲ್‌ನಲ್ಲಿ ಮಂಗಳವಾರ ಮುಂಜಾಗ್ರತಾ ಕ್ರಮದ ಬಗ್ಗೆ ಸಭೆ ನಡೆಸಿ ಅವರು ಮಾತನಾಡಿದರು.
ಮಂಕಿಪಾಕ್ಸ್ ಕೇರಳದಲ್ಲಿ ಪತ್ತೆಯಾಗಿದ್ದರೂ ಕೂಡ ಕೇರಳದ ಹೆಚ್ಚಿನ ಪ್ರಯಾಣಿಕರು ಈ ವಿಮಾನ ನಿಲ್ದಾಣದ ಮೂಲಕ ಸಂಚರಿಸುವುದರಿಂದ ವಿಶೇಷ ನಿಗಾ ವಹಿಸುವಂತೆ ಡಿಸಿ ಆದೇಶಿಸಿದರು.
ವಿಮಾನ ಲ್ಯಾಂಡಿಂಗ್ ಆಗುವ ಮೊದಲೆ ಏರ್‌ಲೈನ್ಸ್ ಸಿಬ್ಬಂದಿಯು ಜ್ವರ ಹಾಗೂ ಚರ್ಮದ ಗುಳ್ಳೆಗಳು ಇರುವ ಪ್ರಯಾಣಿಕರನ್ನು ಪತ್ತೆ ಹಚ್ಚಿ ಅವರನ್ನು ಪ್ರತ್ಯೇಕಗೊಳಿಸಬೇಕು. ಅಲ್ಲದೆ ವಿಮಾನ ನಿಲ್ದಾಣ ಆರೋಗ್ಯಾಧಿಕಾರಿಗಳ ಬಳಿ ಕರೆದೊಯ್ಯಬೇಕು. ಆಗಾಗ ಅವರ ಬಗ್ಗೆ ವಿಶೇಷ ಗಮನ ಹರಿಸಬೇಕು. ರೋಗ ಲಕ್ಷಣಗಳಿರುವ ಪ್ರಯಾಣಿಕರನ್ನು ಪ್ರತ್ಯೇಕಿಸಿ ಆಯಂಬುಲೆನ್ಸ್‌ನಲ್ಲಿ ಈಗಾಲೇ ಪ್ರತ್ಯೇಕವಾಗಿ ವೆನ್ಲಾಕ್‌ನಲ್ಲಿ ತೆರೆದಿರುವ ಮಂಕಿಪಾಕ್ಸ್ ಐಸೋಲೇಶನ್ ವಾರ್ಡ್‌ಗೆ ದಾಖಲಿಸಿ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಡಿಸಿ ಸೂಚಿಸಿದರು.
ಮಂಕಿಪಾಕ್ಸ್ ಜಾಗೃತಿ ಮೂಡಿಸುವ ವಿವಿಧ ಫೋಟೋಗಳನ್ನು ವಿಮಾನ ನಿಲ್ದಾಣದ ಪ್ರಾಧಿಕಾರದ ಅಧಿಕಾರಿ ಹಾಗೂ ಸಿಬ್ಬಂದಿಯ ವಾಟ್ಸ್ ಆಯಪ್ ಗ್ರೂಪ್‌ನಲ್ಲಿ ಹಂಚಲು ವಿಮಾನ ನಿಲ್ದಾಣದ ಆರೋಗ್ಯಾಧಿಕಾರಿ ಹಾಗೂ ಏರ್‌ಲೈನ್ಸ್ ಅಧಿಕಾರಿರಿಗೆ ನಿರ್ದೇಶನ ನೀಡಿದರು.
ಪ್ರಯಾಣಿಕರು, ಸಾರ್ವಜನಿಕರು, ಕ್ಯಾಬ್ ಚಾಲಕರಲ್ಲಿ ಮತ್ತು ವಿಮಾನ ನಿಲ್ದಾಣದ ಡಿಜಿಟಲ್ ಡಿಸ್‌ಪ್ಲೇಯಲ್ಲಿ ಹಾಗೂ ಮೈಕ್ ಮೂಲಕ ಈ ಬಗ್ಗೆ ಅರಿವು ಮೂಡಿಸಲು ಆರೋಗ್ಯ ಇಲಾಖೆಗೆ ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಸೂಚಿಸಿದರು.
ಈ ಬಗ್ಗೆ ಜಿಲ್ಲಾಡಳಿತ ಸಾಕಷಟು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಜನರು ಭಯಭೀತರಾಗದೆ ಅರಿವು ಮೂಡಿಸುವಲ್ಲಿ ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಲು ಡಿಸಿ ಮನವಿ ಮಾಡಿದರು.
ಸಭೆಯಲ್ಲಿ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜೇಶ್ ಬಿ., ಕೋವಿಡ್ ನೋಡಲ್ ಅಧಿಕಾರಿ ಡಾ.ಆಶೋಕ್ ಎಚ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಕೆ., ವಿಮಾನ ನಿಲ್ದಾಣದ ಹೆಡ್ ಆಪರೇಷನ್ ಅಧಿಕಾರಿ ಶ್ರೀಕಾಂತ್ ಟಾಟಾ, ವಿಮಾನ ನಿಲ್ದಾಣದ ವೈದ್ಯಾಧಿಕಾರಿ ಡಾ. ನಿಶಿತಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ