Slider

ಜಾಹೀರಾತಿಗಾಗಿ ಸಂಪರ್ಕಿಸಿ

ಫೋನ್: 86605 39735

ಬ್ರಹ್ಮಾವರ : ವಿಶಾಲ ಗಾಣಿಗ ಕೊಲೆ ಪ್ರಕರಣ : ಕೊನೆಗು ಆರೋಪಿಯನ್ನು ಬಂಧಿಸಿದ ಪೋಲಿಸರು 08.07.2022

 ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರದ ಪ್ಲಾಟಿನಲ್ಲಿ ಒಂದು ವರ್ಷದ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸರ ತಂಡ ಯಶಸ್ವಿಯಾಗಿದೆ.





ಈ ಕೊಲೆಯ ಸುಫಾರಿ ಹಂತಕ ಮಹಾರಾಷ್ಟ್ರ ಮೂಲದ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (21) ಎಂದು ತಿಳಿದು ಬಂದಿದೆ ‌ ಈತನನ್ನು ಪೊಲೀಸರು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸಿರುತ್ತಾರೆ.


 



ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ಅನಂತ ಪದ್ಮನಾಭ ಅವರ ತಂಡ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


 


 

ಘಟನೆಯ ವಿವರ : ವಿಶಾಲ ಗಾಣಿಗ ಕೊಲೆ ಹಾಗೂ ಸುಲಿಗೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿದ್ದ ಸುಪಾರಿ ಕಿಲ್ಲರ್ ಬಂಧನ

ದಿನಾಂಕ:12-07-2021 ರಂದು ಬ್ರಹ್ಮಾವರ ತಾಲೂಕು ಕುಮ್ರಗೊಡು ಗ್ರಾಮದ ಮಿಲನ್ ರೆಸಿಡೆನ್ಸಿಯಲ್ಲಿ ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ರವರನ್ನು ಭೀಕರವಾಗಿ ಕೊಲೆ ಮಾಡಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಮಂಗಳ ಸೂತ್ರ ಹಾಗೂ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ಸುಲಿಗೆ ಮಾಡಿಕೊಂಡು ಹೋದ ಪ್ರಕರಣವನ್ನು ಶೀಘ್ರವಾಗಿ ಪತ್ತೆಹಚ್ಚಿ ಈ ಕೊಲೆಯ ಸೂತ್ರದಾರನಾದ ರಾಮಕೃಷ್ಣ ಗಾಣಿಗ ವಿದೇಶದಲ್ಲಿದ್ದು ಕೊಂಡೆ ತನ್ನ ಹೆಂಡತಿಯ ಕೊಲೆಗೆ ಸುಪಾರಿ ನೀಡಿರುತ್ತಾನೆ. ಮೃತಳಾದ ವಿಶಾಲ ಗಾಣಿಗಳ ಗಂಡ ರಾಮಕೃಷ್ಣ ಗಾಣಿಗ ಹಾಗೂ ಉತ್ತರ ಪ್ರದೇಶದ ಗೋರಕ್‌ಪುರದ ಸುಪಾರಿ ಹಂತಕ ಸ್ವಾಮಿನಾಥ ನಿಶಾದನನ್ನು ಈಗಾಗಲೇ ಬಂಧಿಸಿದ್ದು ಸುಲಿಗೆ ಮಾಡಿದ ಮೃತಳ ಚಿನ್ನಾಭರವನ್ನು ಸ್ವಾಧೀನ ಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತರು ಕಳೆದ ಒಂದು ವರ್ಷದಿಂದ ಹಿರಿಯಡ್ಕ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು ಇವರ ವಿರುದ್ದ ದೋಷಾರೋಪಣಾ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುತ್ತದೆ.



ಒಬ್ಬಂಟಿಯಾಗಿದ್ದ ಮಹಿಳೆ ವಿಶಾಲ ಗಾಣಿಗ ಹತ್ಯೆ ಹಾಗೂ ಸುಲಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ಸುಪಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು ಈತನು ಕಳೆದ ಒಂದು ವರ್ಷದಿಂದ ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿರುತ್ತಾನೆ. ಈತನು ಕಾಣೆಯಾದ ಬಗ್ಗೆ ಈತನ ಪೋಷಕರು ಈ ಬಗ್ಗೆ ಮುಂಬೈಯ ಗಾಮ್‌ದೇವಿ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣವನ್ನು ದಾಖಲು ಮಾಡಿರುತ್ತಾರೆ.


 



ಈ ಪ್ರಕರಣದ ತನಿಖಾಧಿಕಾರಿಯಾದ ಬ್ರಹ್ಮಾವರ ವೃತ್ತ ನಿರೀಕ್ಷಕರಾದ ಶ್ರೀ ಅನಂತಪದ್ಮನಾಭರವರ ನೇತೃತ್ವದಲ್ಲಿ ಬ್ರಹ್ಮಾವರ ಪೊಲೀಸ್ ಉಪನಿರೀಕ್ಷಕರಾದ ಶ್ರೀ ಗುರುನಾಥ ಹಾದಿಮನಿ, ಸಿಬ್ಬಂದಿಯವರಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ, ಪ್ರವೀಣ್ ಶೆಟ್ಟಿಗಾರ್ ರವರನ್ನು ಒಳಗೊಂಡ ವಿಶೇಷ ತಂಡವು ಸುಫಾರಿ ಹಂತಕ ರೋಹಿತ್ ರಾಣಾ ಪ್ರತಾಪ್ ನಿಶಾದ್ ಯಾನೆ ಸೋನು (ಪ್ರಾಯ-21 ವರ್ಷ) ತಂದೆ: ರಾಣಾ ಪ್ರತಾಪ್, ವಾಸ: ಗಾಂದೇವಿ, ಮಹಾರಾಷ್ಟ್ರ ಈತನನ್ನು ಉತ್ತರ ಪ್ರದೇಶದ ಗೋರಕ್ ಪುರದಲ್ಲಿ ಬಂಧಿಸಿರುತ್ತಾರೆ. ಈ ಸುಪಾರಿ ಹಂತಕನನ್ನು ಸೆರೆ ಹಿಡಿಯಲು ಕಳೆದ ಒಂದು ವರ್ಷದಿಂದ ಬ್ರಹ್ಮಾವರ ವೃತ್ತದ ಕೋಟ, ಬ್ರಹ್ಮಾವರ, ಹಿರಿಯಡ್ಕ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯವರು ಮಹಾರಾಷ್ಟ್ರ, ಗೋವಾ ಹಾಗೂ ಉತ್ತರ ಪ್ರದೇಶ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ತೆರಳಿ ಪತ್ತೆಗೆ ಪ್ರಯತ್ನಿಸಿರುತ್ತಾರೆ. ಈತನು ವಿಶಾಲ ಗಾಣಿಗ ಕೊಲೆಯ ನಂತರ ತನ್ನ ಸ್ವಂತ ಮನೆ ಮಹಾರಾಷ್ಟ್ರವನ್ನು ಬಿಟ್ಟು ನೇಪಾಳ ಗಡಿಯಲ್ಲಿನ ಮಹಾರಾಜ ಗಂಜ್ ಪರಿಸರದಲ್ಲಿ ತಲೆ ಮರೆಸಿಕೊಂಡು ಓಡಾಡುತ್ತಿದ್ದನು. ಈ ಆರೋಪಿಯಿಂದ ಕೊಲೆಯ ಬಗ್ಗೆ ಹಚ್ಚಿನ ತನಿಖೆ ನಡೆಸಲು ಪೊಲೀಸ್ ಕಸ್ಟಡಿಗೆ ಪಡೆಯುವ ಬಗ್ಗೆ ನ್ಯಾಯಾಲಯದಲ್ಲಿ ಪ್ರಕ್ರಿಯೆ ನಡೆಯುತ್ತಿದೆ. 





ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ ಎನ್, ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಎಸ್ .ಟಿ ಸಿದ್ದಲಿಂಗಪ್ಪರವರ ಮಾರ್ಗದರ್ಶನದಂತೆ, ಶ್ರೀ ಸುಧಾಕರ ಎಸ್ ನಾಯ್ಕ, ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಶ್ರೀ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ವೃತ್ತ, ಬ್ರಹ್ಮಾವರ ಠಾಣಾ ಪಿ.ಎಸ್.ಐ ಶ್ರೀ ಗುರುನಾಥ ಹಾದಿಮನಿ, ಕೋಟ ಠಾಣೆಯ ಪಿ.ಎಸ್.ಐ ಶ್ರೀ ಮಧು ಬಿ.ಇ, ಬ್ರಹ್ಮಾವರ ಠಾಣೆಯ ಸಿಬ್ಬಂದಿಯವರಾದ ಶ್ರೀ ವೆಂಕಟರಮಣ ದೇವಾಡಿಗ, ಶ್ರೀ ರಾಘವೇಂದ್ರ, ಶ್ರೀ ಪ್ರವೀಣ್ ಶೆಟ್ಟಿಗಾರ್, ಕೋಟ ಠಾಣೆಯ ಸಿಬ್ಬಂದಿಯವರಾದ ಶ್ರೀ ರಾಘವೇಂದ್ರ, ಶ್ರೀ ವಿಜಯೇಂದ್ರ ಹಾಗೂ ಬ್ರಹ್ಮಾವರ ವೃತ್ತ ಕಛೇರಿಯ ಸಿಬ್ಬಂದಿಯವರಾದ ಶ್ರೀ ಕೃಷ್ಣಪ್ಪ, ಶ್ರೀ ವಾಸುದೇವ ಪೂಜಾರಿ, ಶ್ರೀ ಪ್ರದೀಪ್ ನಾಯಕ್, ಶ್ರೀ ಕೃಷ್ಣ ಶೇರುಗಾರ್, ಶ್ರೀ ಶೇಖರ ಶೇರುಗಾರ್, ಶ್ರೀಮತಿ ಜ್ಯೋತಿ ಎಂ, ನಾಗಶ್ರೀ ಹೆಚ್‌.ಪಿ. ರವರು ಪ್ರಕರಣವನ್ನು ಭೇಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶ್ರೀ ವಿಷ್ಣುವರ್ಧನ.ಎನ್, ಐ.ಪಿ.ಎಸ್ ರವರು ತಂಡವನ್ನು ಅಭಿನಂದಿಸಿರುತ್ತಾರೆ.




 

0

ಕಾಮೆಂಟ್‌ಗಳಿಲ್ಲ

ಕಾಮೆಂಟ್‌‌ ಪೋಸ್ಟ್‌ ಮಾಡಿ

Mega Menu

blogger
© all rights reserved
made with by templateszoo