ಆನ್‍ಲೈನ್ ಲೂಡೋ ಗೇಮ್ ಸಂಬಂಧಿಸಿದಂತೆ ಆರಂಭಗೊಂಡ ಜಗಳದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯ ಎದೆಗೆ ಚಾಕು ಇರಿದು ಬರ್ಬರವಾಗಿ ಕೊಲೆಗೈದಿರುವ ಘಟನೆ ಅಫಜಲಪುರ ತಾಲೂಕಿನ ಮಾಶಾಳ ಗ್ರಾಮದಲ್ಲಿ ನಡೆದಿದೆ.
ಶಾಮರಾಯ ಪರೀಟ್ (16) ಕೊಲೆಯಾದ ವಿದ್ಯಾರ್ಥಿ. ಈತನ ಸ್ನೇಹಿತರೆ ಕೊಲೆಗೈದಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯಾದ ಶಾಮರಾಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದ. ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಶಾಮರಾಯ, ಕಳೆದ ಒಂದು ತಿಂಗಳ ಹಿಂದೆ ಲೂಡೋ ಗೇಮ್ ವಿಚಾರವಾಗಿ ಹಾಗೂ ಇನ್ನಿತರ ಕ್ಷುಲ್ಲಕ ಕಾರಣಕ್ಕೆ ಸಚಿನ್ ಕಿರಸಾವಳಗಿ (22) ಎಂಬಾತನ ಜೊತೆ ಕಿರಿಕ್ ಮಾಡಿಕೊಂಡಿದ್ದ.
ನಿನ್ನೆ ರಾತ್ರಿ ಶಾಮರಾಯ ಹಾಗೂ ಸಚಿನ್ ನಡುವೆ ಮತ್ತೆ ಗಲಾಟೆ ನಡೆದು ಪರಸ್ಪರ ಬೈದಾಡಿಕೊಂಡಿದ್ದಾರೆ. ಈ ವೇಳೆ ಮದ್ಯ ಪ್ರವೇಶ ಮಾಡಿದ ಶಾಮರಾಯನ ಹಿರಿಯ ಸಹೋದರ ಧರ್ಮರಾಜ್ ಇಬ್ಬರನ್ನು ಸಮಾಧಾನಪಡಿಸಿ ತಮ್ಮ ತಮ್ಮ ಮನೆಗೆ ಕಳುಹಿಸಿದ್ದಾರೆ. ಬಳಿಕ ಸ್ಪಲ್ಪ ಸಮಯದಲ್ಲಿ ಚಾಕು ಸಮೇತ ಆಗಮಿಸಿದ ಸಚಿನ್, ಶಾಮರಾಯನ ಎದೆಗೆ ಚುಚ್ಚಿದ್ದಾನೆ. ತೀವ್ರ ರಕ್ತಸ್ರಾವದಿಂದ ನರಳಾಡಿ ಶಾಮರಾಯ ಸಾವನ್ನಪ್ಪಿದ್ದಾನೆ.
ಸದ್ಯ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾಮರಾಯನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು ಇಡೀ ಗ್ರಾಮವೇ ಶೋಕ ಸಾಗರದಲ್ಲಿ ಮುಳುಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಅಫಜಲಪುರ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದು ಬರಬೇಕಿದೆ.
ಕಾಮೆಂಟ್‌ಗಳಿಲ್ಲ
ಕಾಮೆಂಟ್ ಪೋಸ್ಟ್ ಮಾಡಿ